ವಿಜಯಪುರ: ರಾಜ್ಯದಲ್ಲಿ ಕಾಂಗ್ರೆಸ್ಸಿನವರು ಇನ್ನೊಂದು ಡೇಂಜರಸ್ ಕೆಲಸ ಮಾಡುತ್ತಿದ್ದು, ಇನ್ನೆರಡು ದಿನಗಳಲ್ಲಿ ಅದು ಹೊರ ಬೀಳಲಿದೆ ಎಂದು ಲೋಕಸಭೆ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೊಸ ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳಿಗಾಗಿ ಜನರಿಗೆ ಪುಕ್ಸಟ್ಟೆ ಹಣ ನೀಡಲು ದಲಿತರ ಕರ್ಯಾಣಕ್ಕಾಗಿ ಮೀಸಲಿಟ್ಟಿದ್ದ ಎಸ್. ಇ. ಪಿ. ಟಿ. ಎಸ್. ಪಿ ಹಣವನ್ನೂ ಕಸಿದುಕೊಂಡಿದ್ದಾರೆ. ಇವರು ಮಾಡುತ್ತಿರುವ ಡೇಂಜರಸ್ ಕೆಲಸದ ಬಗ್ಗೆ ಇನ್ನೆರಡು ದಿನಗಳಲ್ಲಿ ಎಲ್ಲವೂ ಹೊರ ಬೀಳಲಿದೆ ಎಂದು ಹೇಳಿದರು.
ರಾಜ್ಯ ಸರಕಾರ ನೀಡುತ್ತಿರುವ ಪುಕ್ಸಟ್ಟೆ ಯೋಜನೆಗಳು ಲೋಕಸಭೆ ಚುನಾವಣೆ ನಡೆಯುವವರೆಗೆ ಮಾತ್ರ. ಪಾರ್ಲಿಮೆಂಟ್ ಚುನಾವಣೆ ಬಳಿಕ ಈ ಎಲ್ಲ ಪುಕ್ಸಟ್ಟೆ ಸ್ಕೀಂ ಗಳನ್ನು ಬಂದ್ ಮಾಡುತ್ತಾರೆ ಎಂದು ಭವಿಷ್ಯ ನುಡಿದ ಅವರು, ಸರಕಾರದ ಆಡಳಿತ ಸಂಪೂರ್ಣ ಫೇಲಾಗಲಿದೆ. ಈಗಾಗಲೇ ಫೇಲಾಗಿದೆ. ಈಗ ಆ ಪಾರ್ಟಿ, ಈ ಪಾರ್ಟಿ ಎಂದು ಹುಡುಕುತ್ತಿದ್ದಾರೆ. ಯಾವು ಅಭಿವೃದ್ಧಿ ಕೆಲಸವೂ ನಡೆಯುತ್ತಿಲ್ಲ. ಎಲ್ಲವನ್ನು ಪುಕ್ಸಟ್ಟೆ ಕೊಟ್ಟು ಕೊಟ್ಟು ಸರಕಾರದಲ್ಲಿರುವ ಬಜೆಟ್ ಖಾಲಿಯಾಗಿದೆ. ಮಾನ ಮರ್ಯಾದೆ ಇರುವವರು ಹರಿಜನರ ಹಣವನ್ನು ಕಿತ್ತುಕೊಂಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಮಣಿಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಇನ್ನೂ ಭೇಟಿ ನೀಡದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಈಶಾನ್ಯ ರಾಜ್ಯಗಳಿಗೆ ಈ ಹಿಂದೆ ಯಾರೂ ಹೋಗಿರಲಿಲ್ಲ. ನಮ್ಮ ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಒಂಬತ್ತು ವರ್ಷಗಳಲ್ಲಿ 60 ಸಲ ಭೇಟಿ ನೀಡಿದ್ದಾರೆ. ಘಟನೆಯಾದ ನಂತರ ಹೋಗಿರಲಿಕ್ಕಿಲ್ಲ. ಇವರ ಹಿಂದಿನ ಸರಕಾರದವರು ಅಲ್ಲಿಗೆ ಒಂದೂ ಸಲ ಹೋಗಿಲ್ಲ. ಅಲ್ಲಿ ರಾಜಕಾರಣ ಮಾಡಲು ಹೋಗಬೇಕಾ? ಅಲ್ಲಿ ಘಟದ ಮೇಲೆ ಮತ್ತು ಘಟ್ಟದ ಕೆಳಗೆ ಎರಡು ಸಮುದಾಯಗಳ ಹೋರಾಟ ಮುಂಚೆಯಿದಂಲೂ ನಡೆದುಕೊಂಡು ಬಂದಿದೆ ಎಂದು ಅವರು ಹೇಳಿದರು.
ವಿಜಯಪುರದಿಂದ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧಿಸುವ ವಿಚಾರ
ಮಲ್ಲಿಕಾರ್ಜುನ ಖರ್ಗೆ ಅವರು ವಿಜಯಪುರ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರ. ಮಲ್ಲಿಕಾರ್ಜು ಖರ್ಗೆ ಸೇರಿದಂತೆ ಯಾರಾದರೂ ಬರಲಿ. ನನ್ನ ಜನ ಗಟ್ಟಿಯಾಗಿ್ದ್ದಾರೆ. ಏನಾಗುತ್ತದೆ ಎಂಬುದು ನನಗೆ ಗೊತ್ತಿದೆ. ಯಾರು ಬೇಕಾದರು ಬಂದು ನಿಲ್ಲಲಿ. ನಾನು ದೊಡ್ಡ ಲೀಡರ್ ವಿರುದ್ಧ ಅಂಜುತ್ತೇನೆ ಎಂದುಕೊಂಡಿದ್ದೀರಾ? ಈ ಹಿಂದೆ ಹುಡುಗನಾಗಿದ್ದಾಗ ಊರು ಬಿಟ್ಟು ಹೋಗಿ ಶಂಕರಾನಂದ ವಿರುದ್ಧ ಫೈಟ್ ಮಾಡಲಿಲ್ಲವಾ? ಈಗ ನನ್ನ ಊರಿಗೆ ಯಾರಾರು ಬರುತ್ತಾರೆ ಬರಲಿ. ನಾನೇನು ಬೇಡ ಎನ್ನುತ್ತೇನಾ? ಎಂದು ಸಂಸದರು ಮರುಪ್ರಶ್ನಿಸಿದರು.
ವಿಜಯಪುರ ಲೋಕಸಭೆಯಿಂದ ಗೋವಿಂದ ಕಾರಜೋಳ ಸ್ಪರ್ಧೆ ವಿಚಾರ
ಈ ಮಧ್ಯೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ ವಿಜಯಪುರದಿಂದ ಸ್ಪರ್ಧಿಸುತ್ತಾರೆ ಎಂಬ ಚರ್ಚೆಯ ಕುರಿತು ರಮೇಶ ಜಿಗಜಿಣಗಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದರು.
ಗೋವಿಂದ ಕಾರಜೋಳ ಮತ್ತು ನಮಗೆ ಬಿಟ್ಟಿದ್ದು, ಇಬ್ಬರೂ ಒಂದೇ ಆಗಿದ್ದೇವೆ. ಇಬ್ಬರೂ ಮಾತನಾಡುತ್ತೇವೆ. ಅವರೇ ನಿಲ್ಲುವುದಾದರೆ ಅವರನ್ನೇ ನಿಲ್ಲಿಸೋಣ. ನಾನೇ ನಿಲ್ಲುಬೇಕು ಎಂಬ ಅವಶ್ಯಕತೆ ನನಗೆ ಇಲ್ಲ. ನನ್ನ ಮುಂದೆ ಅವರು ಎಂದೂ ಆ ಬಗ್ಗೆ ಹೇಳಿಲ್ಲ. ಎಷ್ಟೋ ಜನ ಕಾರ್ಯಕರ್ತರು ಎಷ್ಟೋ ಸಲ ಅವರನ್ನು ಭೇಟಿಯಾಗಲು ಹೋದಾಗ ಹಿತಚಿಂತಕರು ಜಿಗಜಿಣಗಿ ಅವರಿಗೆ ವಯಸ್ಸಾಗಿದೆ. ನೀವೇ ಸ್ಪರ್ಧಿಸಿ ಎಂದು ಹೇಳಿದ್ದಾರೆ. ಆದರೆ, ಜಿಗಜಿಣಗಿ ಅವರಿಗಿಂತ ನನ್ನ ವಯಸ್ಸು ಹೆಚ್ಚಾಗಿದೆ. ಜಿಗಜಿಣಗಿ ಅವರೇ ಕ್ಯಾಂಡಿಡೇಟ್ ಎಂದು ಗೋವಿಂದ ಕಾರಜೋಳ ಹೇಳಿದ್ದಾರೆ ಎಂದು ತಿಳಿಸಿದರು.
ಗೋಳಗುಮ್ಮಟವನ್ನು ವಿಶ್ವಪರಂಪರೆಗೆ ಸೇರಿಸುವ ಕುರಿತು
ಈ ಮಧ್ಯೆ, ಐತಿಹಾಸಿಕ ವಿಜಯಪುರ ನಗರದಲ್ಲಿರುವ ಗೋಳಗುಮ್ಮಟವನ್ನು ವಿಶ್ವಪರಂಪರೆ ಪಟ್ಟಿಗೆ ಸೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಸ್ತಾವಾನೆ ಕೊಟ್ಟು ಬಂದಿದ್ದೇನೆ. ವಿಜಯಪುರ ವಿಮಾನ ನಿಲ್ದಾಣಕ್ಕೂ ನಿನ್ನೆ ಭೇಟಿ ಕೊಟ್ಟು ಬಂದಿದ್ದೇನೆ. ವಿಜಯಪುರ ವಿಮಾನ ನಿಲ್ದಾಣ ಸುಂದರವಾಗಿದೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ಅವರ ಬಣ್ಣದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಗೃಹ ಖಾತೆ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಇಡೀ ಪಕ್ಷವೇ ಹೇಳಿದೆ. ಇದು ದೇವರು ನೀಡಿರುವ ಕಲರ್ ಎಂದು ಅವರಿಗೆ ಎಲ್ಲರೂ ಹೇಳಿದ್ದಾರೆ ಎಂದು ತಿಳಿಸಿದರು.
ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರ
ಬಿಜೆಪಿ ಇನ್ನೂ ಪ್ರತಿಪಕ್ಷದ ನಾಯಕನ ಆಯ್ಕೆ ಮಾಡದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಹೈಕಮಾಂಡ್ ವೀಕ್ ಎಂದು ನಾವು ಹೇಳುವುದಿಲ್ಲ. ಯಾವುದೋ ಒಂದು ಕಾರಣಕ್ಕೆ ಪ್ರತಿಪಕ್ಷದ ನಾಯಕ ಆಯ್ಕೆ ಬಾಕಿ ಉಳಿದಿದೆ. ಮೊನ್ನೆಯಷ್ಟೇ ಆಯ್ಕೆ ಮಾಡುವುದಾಗಿ ಹೇಳಿ್ದ್ದರು. ಇನ್ನೂ ಮಾಡಿಲ್ಲ. ರಾಜಕಾರಣದಲ್ಲಿ ಇಂಥ ವಿಷಯಗಳು ಮಾಮೂಲು. ನಾನು ಯಾರ ಗೊಡವೆಗೂ ಹೋಗುವುದಿಲ್ಲ. ನಾನು ನನ್ನ ಜನ, ನನ್ನ ಕ್ಷೇತ್ರದ ಕೆಲಸದ ಕಡೆ ಮಾತ್ರ ಗಮನ ಹರಿಸುತ್ತೇನೆ. ನಾನು ಸತ್ಯವಾಗಿ ಹೇಳುತ್ತೇನೆ, ನಾನು ಯಾರ ಗೊಡವೆ ಮತ್ತು ಹೆಚ್ಚಾಗಿ ಪಕ್ಷದ ಕಚೇರಿಗೂ ಹೋಗುವುದಿಲ್ಲ. ಸಭೆ ಇದ್ದಾಗ ಮಾತ್ರ ಹೋಗುತ್ತೇನೆ. ನಾನು ಯಾರ ಹೆಸರನ್ನು ಶಿಫಾರಸು ಮಾಡಿಲ್ಲ. ಅವರು ಯಾರನ್ನಾದರೂ ಮಾಡಲಿ. ಅದನ್ನು ಒಪ್ಪುತ್ತೇವೆ. ನಮ್ಮನ್ನು ಕರೆದು ಕೇಳಿದ್ದಾರೆ. ನಾವು ಯಾರೂ ಏನೂ ಹೇಳಿಲ್ಲ. ನಾವು ಹೇಳಿದವರನ್ನು ನೀವು ಮಾಡುವುದಿಲ್ಲ. ನೀವು ಯಾರನ್ನಾದರೂ ಆಯ್ಕೆ ಮಾಡಿದರೂ ಅವರಿಗೆ ಸಹಕರಿಸುವುದಾಗಿ ತಿಳಿಸಿದ್ದೇವೆ ಎಂದು ರಮೇಶ ಜಿಗಜಿಣಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ, ನಗರ ಸಂಚಾಲಕ ರಾಕೇಶ ಕುಲಕರ್ಣಿ ಉಪಸ್ಥಿತರಿದ್ದರು.