ಸುಳ್ಳು ಸುದ್ದಿ ಪತ್ತೆ, ನಿಯಂತ್ರಣ, ಕಠಿಣ ಶಿಕ್ಷೆಗೆ ತುರ್ತು ಕ್ರಮ- ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ

ಬೆಂಗಳೂರು: ಸುಳ್ಳು ಸುದ್ದಿ ಪತ್ತೆ, ನಿಯಂತ್ರಣ ಮತ್ತು ಸುಳ್ಳು ಸುದ್ದಿ ಹರಡುವುದರ ವಿರುದ್ಧ ಕಠಿಣ ಶಿಕ್ಷೆಗೆ ಒಳಪಡಿಸಲು ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಭೆಯಲ್ಲಿ ಅವರು ಈ ತೀರ್ಮಾನ ಪ್ರಕಟಿಸಿದ್ದಾರೆ.

ಸುಳ್ಳು ಸುದ್ದಿಗಳು ಪ್ರಜಾಪ್ರಭುತ್ವಕ್ಕೆ ಬೆದರಿಕೆ ಒಡ್ಡುತ್ತಿವೆ.  ಸಮಾಜದ ದೃವೀಕರಣಕ್ಕೆ ಕಾರಣವಾಗುತ್ತಿವೆ.  ಇದರ ನಿಯಂತ್ರಣ ಅಗತ್ಯವಾಗಿದ್ದು, ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆ ಸೇರಿದಂತೆ ಅಗತ್ಯ ಇರುವ ಎಲ್ಲಾ ನಿಯಮ ಮತ್ತು ಕಾನೂನು ರೂಪಿಸುವ ಪ್ರಯತ್ನಕ್ಕೆ ಅವರು ಗ್ರೀನ್ ಸಿಗ್ನಲ್ ನೀಡಿದರು.

ಸುಳ್ಳು ಸುದ್ದಿಗಳ ಮತ್ತು ಸುಳ್ಳು ಸುದ್ದಿ ಸೃಷ್ಟಿಸುವ ಸಿಂಡಿಕೇಟ್ ಗಳ ಪತ್ತೆ, ಸುಳ್ಳು ಸುದ್ದಿ ಪ್ರಸಾರಕ್ಕೆ ತಡೆ, ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡುವ ಮೂರು ಹಂತಗಳ ಕ್ರಮಕ್ಕೆ ಮುಖ್ಯಮಂತ್ರಿಗಳು ಅನುಮೋದನೆ ನೀಡಿದರು.

ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಸಿಎಂ ಎಸ್. ಸಿದ್ಧರಾಮಯ್ಯ ಬೆಂಗಳೂರಿನಲ್ಲಿ ಸಭೆ ನಡೆಸಿದರು

ರಾಜ್ಯದಲ್ಲಿ ಪ್ಯಾಕ್ಟ್ ಚೆಕ್ ಘಟಕ ರಚನೆ

ಪ್ಯಾಕ್ಟ್ ಚೆಕ್ ಘಟಕವು ಮೇಲುಸ್ತುವಾರಿ ಸಮಿತಿ, SOPC ಪರಿಶೀಲನೆ, ನೋಡಲ್ ಅಧಿಕಾರಿಗಳ ನೇಮಕ ಸೇರಿದಂತೆ ಸತ್ಯ ತಪಾಸಣೆ ತಂಡ ವಿಶ್ಲೇಷಣ ತಂಡವನ್ನು ಒಳಗೊಳ್ಳಲಿದೆ.  ಸಾಮರ್ಥ್ಯ ವರ್ಧನೆ ತಂಡ ರಚನೆ ಮಾಡಿ ವ್ಯವಸ್ಥಿತವಾಗಿ ತಂತ್ರಜ್ಞಾನ ಬಳಕೆ ಮಾಡಬಹುದು ಎಂದು ಸಭೆಯಲ್ಲಿ  ವಿವರಿಸಲಾಯಿತು.

ಬೆಂಗಳೂರು ಪೊಲೀಸರೂ ಕೂಡ  ಸಾಮಾಜಿಕ ಮಾಧ್ಯಮಗಳಲ್ಲಿ ಕ್ರಿಯಾಶೀಲವಾಗಿದ್ದರೂ, ರಾಜ್ಯದಲ್ಲಿ ಫ್ಯಾಕ್ಟ್ ಚೆಕ್ ಘಟಕ ಅಗತ್ಯವಿದೆ.  ಎಐ ಬಳಕೆ ಮಾಡಿ ಡೀಪ್ ಫೇಕ್ ಕೂಡ ಉಪಯೋಗ ಮಾಡಲಾಗುತ್ತಿದೆ.  ಇದು ಸುಳ್ಳು ಸುದ್ದಿ ಹರಡುವವರಿಗೆ ಅನುಕೂಲವಾಗುತ್ತದೆ ಎಂದು ಸಭೆಯಲ್ಲಿ ಉಪಸ್ಛಿತರಿದ್ದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.

ಫೇಕ್ ಸುದ್ದಿ ಜಾಲ ಜಾಗತಿಕವಾಗಿ ಬಾಲ್ಯಾವಸ್ಥೆಯಲ್ಲಿದ್ದರೂ ಕಾಲಾಂತರದಲ್ಲಿ ವ್ಯಾಪಕವಾಗಿ ಬಳಕೆಯಾಗುವ ಸಾಧ್ಯತೆಯೂ ಇದೆ.  ಸುಳ್ಳು ಸುದ್ದಿ ಬಳಕೆ ಮಾಡುವವರಿಗೆ ಶಿಕ್ಷೆ ಕೂಡ ಆಗಬೇಕು.  ಈ ಹಿನ್ನೆಲೆಯಲ್ಲಿ ಕೂಡಲೇ ಸಮಿತಿ ರಚಿಸಿ ಸಾಮರ್ಥ್ಯ ಹೆಚ್ಚಿಸುವ ಕೆಲಸ  ಆಗಬೇಕು ಎಂದು ಗೃಹ ಸಚಿವ ಜಿ. ಪರಮೇಶ್ವರ ಈ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಸುಳ್ಳು ಸುದ್ದಿ ಗುರುತಿಸುವುದು, ಕಾನೂನು ಸುವ್ಯವಸ್ಥೆ ಕಾಪಾಡಲು ಇದು ಅತ್ಯಗತ್ಯ. ಆರಂಭಿಕ ಹಂತದಲ್ಲಿ ಐ.ಟಿ ಬಿಟಿ ಇಲಾಖೆ ಸಹಕರಿಸುತ್ತದೆ. ಕಾನೂನಿನ ವ್ಯಾಪ್ತಿಯಲ್ಲಿ ತರಲು ಕ್ರಮ ಕೈಗೊಳ್ಳಬೇಕು.  ನಂತರ ಘಟಕವು ಗೃಹ ಇಲಾಖೆಯ ವ್ಯಾಪ್ತಿಯಲ್ಲಿಯೇ ಇರುವುದು ಸೂಕ್ತ  ಎಂದು ಸಚಿವ ಪ್ರಿಯಾಂಕ ಖರ್ಗೆ ಅಭಿಪ್ರಾಯ ಪಟ್ಟರು.

ಸಚಿವರಾದ ಕೃಷ್ಣಬೈರೇಗೌಡ ಮಾತನಾಡಿ, ಫ್ಯಾಕ್ಟ್ ಚೆಕ್ ಘಟಕ ಸ್ಥಾಪನೆಯಿಂದ ಸುಳ್ಳುಸುದ್ದಿ ಹರಡುವುದನ್ನು ನಿಯಂತ್ರಿಸಿ ಇದು ಶಿಕ್ಷಾರ್ಹ ಅಪರಾಧ ಎಂದು ಜನರಿಗೆ ಮನವರಿಕೆಯಾಗಬೇಕು ಎಂದು ಹೇಳಿದರು.

ಈ ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್ ಗೋಯಲ್,  ಪೊಲೀಸ್ ಮಹಾನಿರ್ದೇಶಕ  ಅಲೋಕ ಮೋಹನ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತ ಹೇಮಂತ ನಿಂಬಾಳ್ಕರ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌