ವಿಜಯಪುರ: ಬಸವನಾಡು ವಿಜಯಪುರ ನಗರದಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಅಧಿಕ ಮಾಸ ಶ್ರಾವಣ ತಿಂಗಳಲ್ಲಿ ಮೂರು ದಿನಗಳ ಕಾಲ ನಡೆಯುವ ಜಲನಗರದ ಜೈ ಸಂತೋಷಿ ಮಾತ್ರಾ ಜಾತ್ರೆ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಜಾತ್ರಾ ಸಮಿತಿ ಅಧ್ಯಕ್ಷ ಮತ್ತು ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ, ನಾಳೆ ಆ. 23ರಂದು ಬುಧವಾರದಿಂದ ಆ. 25ರಂದು ಶುಕ್ರವಾರದವರೆಗೆ ನಾನಾ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದರು.
ಶ್ರೀ ಜೈ ಸಂತೋಷಿಮಾತಾ ದೇವಸ್ಥಾನ ಉತ್ತರ ಕರ್ನಾಟಕದಲ್ಲಿರುವ ದೇವಿಯ ಏಕೈಕ ಮಂದಿರವಾಗಿದೆ. ಶ್ರೀ ಜೈ ಸಂತೋಷಿಮಾತಾ ದೇವಿಯ ಜಾತ್ರಾ ಮಹೋತ್ಸವದ ಮತ್ತು ಬೃಹತ್ ಕುಂಭಮೇಳದ ಅಂಗವಾರಿ ನಾನಾ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಆ. 23 ರಂದು ಸಂಜೆ 6.30ಕ್ಕೆ ಉದ್ಘಾಟನೆ ಸಮಾರಂಭ ನಡೆಯಲಿದ್ದು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಬಬಲೇಶ್ವರ ತಹಸೀಲ್ದಾರ ಎಸ್. ಎಂ. ಮ್ಯಾಗೇರಿ, ಸಿಇಎನ್ ಸಿಪಿಐ ರಮೇಶ ಅವಜಿ, ಕಾರ್ಪೋರೇಟರ್ ಗಳಾದ ಪ್ರೇಮಾನಂದಜ ಬಿರಾದಾರ, ಕುಮಾರ ಗಡಗಿ, ಎಂಜಿನಿಯರ್ ಗಂಗಾಧರ ಶೀಲವಂತ, ಮುಖಂಡರಾದ ಗೂಳಪ್ಪ ಶಿ. ಶೆಟಗಾರ, ಗಿರೀಶ ಡಿ. ಗುಗ್ಗರಿ, ಯುವ ಉದ್ಯಮಿ ಅರುಣ ಮಾಚಪ್ಪನವರ ಪಾಲ್ಗೋಳ್ಳಲಿದ್ದಾರೆ. ರಾ. 8ಕ್ಕೆ ಜಯಸಿಂಹ ಮೆಲೋಡಿ ಆರ್ಕೆಸ್ಚ್ರಾ ತಂಡದವರಿಂದ ಭಕ್ತಿಗೀತೆಗಳ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಆ. 24 ರಂದು ಬೆ. 8.30ಕ್ಕೆ ವಿಜಯಪುರ ನಗರದ ಐತಿಹಾಸಿಕ ತಾಜಬಾವಡಿಯಿಂದ 1551 ಸುಮಂಗಲೆಯರ ಕುಂಭಮೇಳ ಕಾರ್ಯಕ್ರಮ ನಡೆಯಲಿದ್ದು, ಕುಂಭಮೇಳ ಮೆರವಣಿಗೆಗೆ ಬುರಣಾಪುರ ಸಿದ್ಧಾರೂಢ ಮಠದ ಯೋಗೇಶ್ವರಿ ಮಾತಾಜಿ, ಶಾಸಕ ಯತ್ನಾಳ ಅವರ ಪತ್ನಿ ಮತ್ತು ಸಿದ್ಧಸಿರಿ ಸೌಹಾರ್ದದ ನಿರ್ದೇಶಕಿ ಶೈಲಜಾ ಬ. ಪಾಟೀಲ, ಮಾಜಿ ಶಾಸಕ ಮನೋಹರ ಐನಾಪುರ ಅವರ ಪತ್ನಿ ವಸುಂಧರಾ ಮ. ಐನಾಪುರ, ಡಾ. ಅಂಬಿಕಾ ಬಿರಾದಾರ(ಕೊಪ್ಪದ), ಶಶಿಕಲಾ ಗಂ. ಇಜೇರಿ ಚಾಲನೆ ನೀಡಲಿದ್ದಾರೆ.
ಸಂ. 4ಕ್ಕೆ ದೇವಸ್ಥಾನದ ಆವರಣದಲ್ಲಿ ಹೋಮ, ಹವನ ಕಾರ್ಯಕ್ರಮ ನಡೆಯಲಿದೆ. ರಾ. 7ಕ್ಕೆ ನವರಸ ಪ್ರದರ್ಶಕ ಕಲೆಗಳ ಮಹಾವಿದ್ಯಾಲಯದ ನಿರ್ದೇಶಕ ರಂಗನಾಥ ಬತ್ತಾಸೆ ಹಾಗೂ ತಂಡದವರು ಸಂಗೀತ ಹಾಗೂ ನೃತ್ಯ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಮೃದ್ಧಿ ಸಂತೋಷ ಮ್ಯಾಗೇರಿ ಅವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.
ಆ. 25 ರಂದು ಗುರುವಾರ ನಸುಕಿನ ಜಾವ ಶ್ರೀ ಜೈ ಸಂತೋಷಿಮಾತಾ ದೇವಿಯ ಕುಂಬಾಭಿಷೇಕ ನಡೆಯಲಿದೆ. ಬೆ. 9 ರಿಂದ ಮ. 3ರ ವರೆಗೆ ಕುಂಭಮೇಳದಲ್ಲಿ ಭಾಗವಹಿಸಿದ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಮಹಾಪ್ರಸಾದ ನಡೆಯಲಿದೆ. ಸಂ. 6 ರಿಂದ 7.30ರ ವರೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ರಾ. 7.30ಕ್ಕೆ ಸಮಾರೋಪ ಸಮಾರಂಭ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಕೋಶಕ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ವಾಸ್ತುಶಿಲ್ಪಿ ರವೀಂದ್ರ ಜಮ್ಮನಕಟ್ಟಿ, ಪ್ರಥಮ ದರ್ಜೆ ಗುತ್ತಿಗೆದಾರ ಸಂತೋಷ ಗಾಣಿಗೇರ, ನ್ಯಾಯವಾದಿ ಸಂಗನಗೌಡ ಪಾಟೀಲ ಹೆಗಡಿಹಾಳ ಅವರನ್ನು ಸನ್ಮಾನಿಸಲಾಗುವುದು.
ಈ ಜಾತ್ರೆಯಲ್ಲಿ ವಿಜಯಪುರ ನಗರದ ಜಲನಗರ, ವಿವೇಕನಗರ, ಎಸ್. ಆರ್. ಕಾಲನಿ, ನವರಸಪುರ, ಕೀರ್ತಿನಗರ, ಕೆ. ಕೆ ಕಾಲನಿ, ಪುಲಕೇಶಿ ನಗರ, ಕಸ್ತೂರಿ ಕಾಲನಿ, ಗಣೇಶ ನಗರ, ಕನಕದಾಸ ಬಡಾವಣೆ, ವಜ್ರಹನುಮಾನ ನಗರ, ಮುರಾಣಕೇರಿ, ಬಸವ ನಗರ, ಕಮಾನಖಾನ ಬಜಾರ್, ಕಾಸಗೇರಿ, ರಾಜಾಜಿನಗರ, ರಾಮನಗರ, ರಾಘವೇಂದ್ರ ಕಾಲನಿ, ಇಬ್ರಾಹಿಂಪೂರ, ಗಿರೀಶ ಕಾಲನಿ, ಶಾಂತವೀರ ನಗರ, ಗುರುಪಾದೇಶಅವರ ನಗರ ಹಾಗೂ ಸುತ್ತಮುತ್ತಲಿನ ನಾನಾ ಬಡಾವಣೆಗಳ ಸದ್ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೋಂಡು ಭಕ್ತಿ ಸೇವೆ ಸಲ್ಲಿಸಲಿದ್ದಾರೆ.
ಈ ಬಾರಿ ಯುವ ಮುಖಂಡ ಸುರೇಶ ಗುನ್ನಾಪುರ ರೂ. 2 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ದ್ವಾರ ಬಾಗಿಲಿನ ಗೋಡೆಗೆ ಹಿತ್ತಾಳೆಯ ಕವಚವನ್ನು ಮಾಡಿಸುವ ಮೂಲಕ ಭಕ್ತಿ ಸೇವೆ ಮಾಡಿದ್ದಾರೆ. ಅದೇ ರೀತಿ ಸಾಕಷ್ಟು ಜನ ಗಣ್ಯರು ಜಾತ್ರೆಗೆ ಕಾಣಿಕೆಯನ್ನು ನೀಡಿ ಭಕ್ತಿ ಮೆರೆದಿದ್ದಾರೆ. ಇಲ್ಲಿ ವಯಸ್ಸಿಗೆ ಮಿತಿಯಿಲ್ಲ, ಜಾತಿ ಭೇದವಿಲ್ಲ ಎಂದು ಪ್ರೇಮಾನಂದ ಬಿರಾದಾರ ತಿಳಿಸಿದರು.
ಈ ಸಂದರ್ಭದಲ್ಲಿ ಜಾತ್ರಾ ಸಮಿತಿ ಉಪಾಧ್ಯಕ್ಷ ಮಹಾದೇವಯ್ಯ ವಿ. ಗಚ್ಚಿನಮಠ, ಮುಖಂಡರಾದ ಸಂತೋಷ ತಳಕೇರಿ, ಚಂದ್ರು ಚೌಧರ, ಪ್ರಮೋದ ಬಡಿಗೇರಿ, ಕರಿಬಸು ಅರಕೇರಿ, ಸುನೀಲ ಮುಂಡಾಸ, ವಾರಣಾಸಿ, ಮಲ್ಲಿಕಾರ್ಜುನ ಅರಕೇರಿ ಮುಂತಾದವರು ಉಪಸ್ಥಿತರಿದ್ದರು.
ದೇವಸ್ಥಾನದ ಹಿನ್ನೆಲೆ
ಸುಮಾರು 40 ವರ್ಷಗಳ ಹಿಂದೆ ವಿಜಯಪುರ ನಗರದ ಅಂದಿನ ಹಡ್ಕೊ ಕಾಲನಿಯಲ್ಲಿ ನಾನಾ ಬಗೆಯ ಮನೆಗಳನ್ನು ನಿರ್ಮಿಸಲು ನಾಗಲಿಂಗಪ್ಪ ಕುಬೇರಪ್ಪ ಹಾವರಗಿ ಗುತ್ತಿಗೆ ಪಡೆದಿದ್ದರು. ಒಂದು ದಿನ ಅವರ ಕನಸಿನಲ್ಲಿ ಬಂದ ಜೈ ಸಂತೋಷಿ ಮಾತಾ ತನಾನು ಇಲ್ಲಿ ನೆಲೆಸಲು ಬಯಸಿದ್ದು, ಭವ್ಯವಾದ ದೇವಸ್ಥಾನ ನಿರ್ಮಿಸುವಂತೆ ಆದೇಶ ನೀಡಿದರು. ಆದರೆ, ಗುತ್ತಿಗೆದಾರ ದೇವಸ್ಥಾನ ನಿರ್ಮಿಸಲು ವಿಳಂಬ ಮಾಡಿದ್ದರಿಂದ ಗುತ್ತಿಗೆ ಕೆಲಸದಲ್ಲಿ ಆರ್ಥಿಕವಾಗಿ ನಷ್ಟವಾಯಿತು. ಕೊನೆಗೆ ಎಚ್ಚತ್ತ ನಾಗಲಿಂಗಪ್ಪ ಕುಬೇರಪ್ಪ ಹಾವರಗಿ ಬಡಾವಣೆಯ ಹಿರಿಯರ ಜೊತೆಗೆ ಚರ್ಚಿಸಿ ದೇವಸ್ಥಾನ ನಿರ್ಮಿಸಿದರು. ಅಲ್ಲದೇ, ಪ್ರತಿವರ್ಷ ಜಾತ್ರೆ ಆಚರಿಸಲು ನಿರ್ಧರಿಸಿದರಾದರೂ, ಅದು ಕಷ್ಟ ಎಂದುಕೊಂಡು ಪ್ರತಿ ಮೂರು ವರ್ಷಗಳಿಗೊಮ್ಮೆ ಶ್ರಾವಣ ಮಾಸದಲ್ಲಿ ಜಾತ್ರೆ ಆಚರಿಸಲು ನಿರ್ಧರಿಸಿದರು. ಇದು ಉತ್ತರ ಕರ್ನಾಟಕದಲ್ಲಿರುವ ಸಂತೋಷಿಮಾತಾ ದೇವಿಯ ಏಕೈಕ ದೇವಸ್ಥಾನವಾಗಿದೆ. ಈ ಜಾತ್ರೆಯ ಅಂಗವಾಗಿ ದೇವಿಯ ಕುಂಬಾಭಿಷೇಕಕ್ಕೆ ಐತಿಹಾಸಿಕ ತಾಜಬಾವಡಿಯಿಂದ ಕುಂಭಗಳಲ್ಲಿ ನೀರು ತರುವುದು ಸಂಪ್ರದಾಯವಾಗಿದೆ. ಒಂದು ವರ್ಷ ತಾಜಬಾವಡಿಯ ಬದಲು ಪಕ್ಕದ ಇಬ್ರಾಹಿಂಪೂರ ಭಾವಿಯಿಂದ ನೀರು ತರಲಾಗಿತ್ತು. ಆದರೆ, ಅಂದು ಜಾತ್ರೆಯ ನಂತರ ಸಮಸ್ಯೆಗಳು ಎದುರಾದ ಹಿನ್ನೆಲೆಯಲ್ಲಿ ದೇವಿಯ ಕ್ಷಮೆಯಾಚಿಸಿದ ಭಕ್ತರು ನಂತರದ ಜಾತ್ರೆಗಳಲ್ಲಿ ಎಂದಿನಂತೆ ಐತಿಹಾಸಿಕ ತಾಜಬಾವಡಿಯಿಂದಲೇ ಜಾತ್ರೆಗೆ ಕುಂಭಗಳಲ್ಲಿ ನೀರು ತರಲಾಗುತ್ತಿದೆ.