ವಿಜಯಪುರ: ಚಂದ್ರನ ಅಂಗಳಕ್ಕೆ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡಿಂಗ್ ಮಾಡಿದ ತಕ್ಷಣ ಯುವ ಭಾರತ ಸಮಿತಿ ಕಾರ್ಯಕರ್ತರು ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಹತ್ತಿರ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಸಿದರು.
ಇಸ್ರೋಗೆ ಜಯವಾಗಲಿ ಎಂಬ ಘೋಷಣೆ ಹಾಕಿದ ಕಾರ್ಯಕರ್ತರು, ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ಕೊಂಡಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಭಾರತ ಸಂಸ್ಥಾಪಕ ಅಧ್ಯಕ್ಷ ಉಮೇಶ ಕಾರಜೋಳ, ಚಂದ್ರನ ಅಂಗಳಕ್ಕೆ ಯಶಸ್ವಿಯಾಗಿ ತಲುಪಿದ ವಿಕ್ರಂ ಲ್ಯಾಂಡರ್ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆಯ ಸಂತೋಷದ ಕ್ಷಣಗಳನ್ನು ಕೊಡುಗೆಯಾಗಿ ನೀಡಿದೆ. ಇದು ಭಾರತದ ಹೆಮ್ಮೆಯ ಸಾಧನೆಯಾಗಿದೆ ಎಂದು ಹೇಳಿದರು.
ಇಸ್ರೋ ವಿಜ್ಞಾನಿಗಳ ಅವಿರತ ಪರಿಶ್ರಮ, ಪ್ರಧಾನಿ ನರೇಂದ್ರ ಮೋದಿ ಅವರ ಇಚ್ಛಾಶಕ್ತಿ ಹಾಗೂ ಸಮಸ್ತ ಭಾರತೀಯರ ಪ್ರಾರ್ಥನಾ ಫಲ ಫಲಿಸಿದ್ದು, ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಅಂಗಳದ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡಿದೆ. ಇದು ಬಾಹ್ಯಾಕಾಶ ಕ್ಷೇತ್ರದಲ್ಲಿ ಅಪೂರ್ವ ಸಾಧನೆಗೆ ಸಾಕ್ಷಿಯಾಗಲಿದೆ. ಈ ಕಾರ್ಯ ಯಶಸ್ವಿಯಾಗಲಿ ಎಂದು ಪ್ರಾರ್ಥಿಸಿ ಮಂಗಳವಾರ ಯುವ ಭಾರತ ಸಂಘಟನೆ ವತಿಯಿಂದ ಸರ್ವಾರ್ಥ ಸಿದ್ಧಿಯಾಗ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು. ಈಗ ಎಲ್ಲರ ಪ್ರಾರ್ಥನೆ ಫಲಿಸಿದ್ದು, ಭಾರತ ಮತ್ತೊಮ್ಮೆ ಸಾಧನೆಯ ನಗೆ ಬೀರಿದೆ. ಇದು ಅಭಿಮಾನದ ಘಳಿಗೆ. ಸಂತೋಷದ ಘಳಿಗೆ. ಮೇರಾ ಭಾರತ್ ಮಹಾನ್ ಎಂಬುದು ಮತ್ತೊಮ್ಮೆ ಪ್ರತಿಧ್ವನಿಸಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಂಘಟನೆ ಕಾರ್ಯಕರ್ತರಾದ ವಿನೋದಕುಮಾರ ಮಣ್ಣೂರ, ವಿರೇಶ ಗೊಬ್ಬೂರ, ಗಿರಿಶ ಕುಲಕರ್ಣಿ, ಬಸವರಾಜ ಕರಿಕಬ್ಬಿ,ಸಾಗರ ಗಾಯಕವಾಡ, ಮಲ್ಲು ಹಿಪ್ಪರಗಿ, ರಾಹುಲ ಕಾರಜೋಳ, ಅನೀಲ ದಾರವಾಡಕರ, ವಿವೇಕ ಹಳ್ಳದ ಮುಂತಾದವರು ಉಪಸ್ಥಿತರಿದ್ದರು.