5 ವರ್ಷ ಸಮಸ್ಯೆಯನ್ನು 20 ದಿನಗಳಲ್ಲಿ ಬಗೆಹರಿಸಿ ವಿತರಣೆ ಕಾಲುವೆಗೆ ನೀರು ಹರಿಸಿದ ಎಂ. ಬಿ. ಪಾಟೀಲ

ವಿಜಯಪುರ: ಐದು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯ ಪಶ್ಚಿಮ ಕಾಲುವೆಯಲ್ಲಿ ಬರುವ ವಿತರಣೆ ಕಾಲುವೆ- 4ಕ್ಕೆ ನೀರು ಹರಿಸುವ ಸಮಸ್ಯೆಯನ್ನು ಕೇವಲ 20 ದಿನಗಳಲ್ಲಿ ಬಗೆಹರಿಸಿ ನೀರು ಬಿಡುಗಡೆ ಮಾಡುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಗಮನ ಸೆಳೆದಿದ್ದಾರೆ.

ತಿಕೋಟಾ ತಾಲೂಕಿನ ಬಿಜ್ಜರಗಿ ಬಳಿ ಬರುವ ವಿತರಣೆ ಕಾಲುವೆ-4ರ ಸಮಸ್ಯೆ ಬಗೆಹರಿಸಿ ನೀರು ಹರಿಸಿ ಸ್ಪಂದಿಸುವಂತೆ ಕಳ್ಳಕವಟಗಿ, ಘೋಣಸಗಿ ಮತ್ತು ಅಳಗಿನಾಳ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದರು. ಆಗ, ಕೂಡಲೇ ಕಾರ್ಯಪ್ರವೃತ್ತರಾದ ಸಚಿವ ಎಂ. ಬಿ. ಪಾಟೀಲ ಅವರು ಈ ವಿತರಣೆ ಕಾಲುವೆ ಮೂಲಕ ನೀರು ಹರಿಸಲು ಅಡ್ಡಿಯಾಗಿರುವ ತಾಂತ್ರಿಕ ಸಮಸ್ಯೆಗಳನ್ನು ಕೇವಲ 20 ದಿನಗಳಲ್ಲಿ ಬಗೆಹರಿಸಿದರು. ಅಲ್ಲದೇ, ಖುದ್ದಾಗಿ ವಿತರಣೆ ಕಾಲುವೆ-4ರ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದರು.

ಬಿಜ್ಜರಗಿ ಬಳಿ ವಿತರಣೆ ಕಾಲುವೆ-4ಕ್ಕೆ ಪೂಜೆ ನೆರವೇರಿಸಿ ನೀರು ಹರಿಸಿದ ಸಚಿವ ಎಂ. ಬಿ. ಪಾಟೀಲ

ಈ ಸಂದರ್ಭದಲ್ಲಿ ಮುಖಂಡರಾದ ಸೋಮನಾಥ ಬಾಗಲಕೋಟ, ಮಲ್ಲು ಲೋಣಿ, ಸುಭಾಸಗೌಡ ಪಾಟೀಲ, ಸಿದ್ದು ಗೌಡನವರ, ಗುರು ಮಾಳಿ, ರಾಜು ಮಸಳಿ, ಶಿವಪ್ಪ ಪೂಜಾರಿ, ಮದಗೊಂಡ ಬಿರಾದಾರ, ಬಸು ಸೌದಿ, ಸುಭಾಸ ಮೆಂಡೇಗಾರ, ಪರಮೇಶ್ವರ ದೊಡಮನಿ, ಶೇಖಸಾಬ ಮುಲ್ಲಾ, ತಿಕೋಟಾ ತಹಸೀಲ್ದಾರ ಪ್ರಶಾಂತ ಚನಗೊಂಡ, ಕರ್ನಾಟಕ ನೀರಾವರಿ ನಿಗಮದ ಎಇಇ ರಾಜೇಂದ್ರ ರೂಡಗಿ, ತಾ. ಪಂ. ಇಓ ಬಸವರಾಜ ಐನಾಪುರ ಮುಂತಾದವರು ಉಪಸ್ಥಿತರಿದ್ದರು.

ಈ ನೀರು ಬಿಡುಗಡೆಯಿಂದಾಗಿ ಕಳ್ಳಕವಟಗಿ, ಘೊಣಸಗಿ ಮತ್ತು ಅಳಗಿನಾಳ ಗ್ರಾಮಸ್ಥರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದ್ದು, ರೈತರ ಕೃಷಿಗೆ ಮತ್ತು ಜನಜಾನುವಾರುಗಳ ಕುಡಿಯುವ ನೀರಿಗೆ ಸೂಕ್ತವಾಗಿ ಸ್ಪಂದಿಸಿದಂತಾಗಿದೆ.

Leave a Reply

ಹೊಸ ಪೋಸ್ಟ್‌