ವಿಜಯಪುರ: ನೇತ್ರದಾನ ಮಾಡುವ ಮೂಲಕ ಹಲವಾರು ಜನ ಅಂಧರ ಬಾಳಿಗೆ ಬೆಳಕು ನೀಡಬಹುದಾಗಿದೆ. ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನೇತ್ರಕಸಿ ಮಾಡಲು ಎಲ್ಲ ವ್ಯವಸ್ಥೆಗಳೂ ಲಭ್ಯವಿವೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.
ನಗರದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ನೇತ್ರಶಾಸ್ತ್ರ ವಿಭಾಗ ಆಯೋಜಿಸಿರುವ ನೇತ್ರದಾನ ಪಾಕ್ಷಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗಾಯಗಳು, ಸೋಂಕುಗಳು, ವಿಟಮಿನ್ ಕೊರತೆ ಅಥವಾ ಆನುವಂಶಿಕ ಕಾರಣಗಳಿಂದಾಗಿ ಕಾರ್ನಿಯಾಗೆ ಹಾನಿಯಾಗುತ್ತದೆ. ಭಾರತದಲ್ಲಿ ಒಂದು ಸಾವಿರ ಜನರಲ್ಲಿ ಐದು ಜನರಿಗೆ ಕಾರ್ನಿಯಾ ಸಮಸ್ಯೆಯಿಂದಾಗಿ ಕುರುಡುತನ ಎದುರಿಸುತ್ತಿದ್ದಾರೆ. ಇವರಿಗೆ ನೇತ್ರದಾನ ಮಾಡುವ ಮೂಲಕ ಬೆಳಕು ನೀಡಬಹುದಾಗಿದೆ. ಕೆರಾಟೋಪ್ಲಾಸ್ಟಿ ಎಂಬ ಅತ್ಯಾಧುನಿಕ ಶಸ್ತ್ರಚಿಕಿತ್ಸೆ ಮೂಲಕ ಕಾರ್ನಿಯಾ ಅಂಧ ರೋಗಿಗಳಿಗೆ ನೇತ್ರಕಸಿ ಮಾಡಲಾಗುತ್ತದೆ. ನಗರದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು ಮತ್ತು ಆರ್. ಸಿ. ಯಲ್ಲಿ ನೇತ್ರಶಾಸ್ತ್ರ ವಿಭಾಗವು ಐ-ಬ್ಯಾಂಕ್ ಸೌಲಭ್ಯ ಹೊಂದಿದೆ. ದಿನದ 24 ಗಂಟೆಗಳ ಕಾಲ ಇಲ್ಲಿ ಕಣ್ಣು ಗುಡ್ಡೆ ಸಂಗ್ರಹಣೆ ಮತ್ತು ಶೇಖರಣೆಗಾಗಿ ವ್ಯವಸ್ಥೆಯಿದೆ. ದಾನಿಗಳ ಕುಟುಂಬಗಳಿಗೆ ಈ ಕುರಿತು ಸಂಪೂರ್ಣ ಮಾಹಿತಿಯೂ ಲಭ್ಯವಿದೆ. ದಾನಿಗಳಿಂದ ಸಂಗ್ರಹಿಸಲಾಗುವ ಕಾರ್ನಿಯಲ್ ಅಂಗಾಂಶಗಳನ್ನು ಮಾರಾಟ ಮತ್ತು ಖರೀದಿ ಮಾಡಲು ಅವಕಾಶವಿಲ್ಲ. ಆಸ್ಪತ್ರೆಯಲ್ಲಿ ಅತೀ ಕಡಿಮೆ ವೆಚ್ಚದಲ್ಲಿ ಮತ್ತು ಸರಕಾರಗಳ ನಾನಾ ಆರೋಗ್ಯ ವಿಮೆ ಯೋಜನೆಗಳ ಮೂಲಕವೂ ಉಚಿತವಾಗಿ ಶಸ್ತ್ರಚಿಕಿತ್ಸೆ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.
ನೇತ್ರದಾನ ಮಾಡಲು ಇಚ್ಛಿಸುವವರು ತಮ್ಮ ಆಧಾರ ಸಂಖ್ಯೆ ಮತ್ತು ಭಾವಚಿತ್ರದೊಂದಿಗೆ ಶ್ರೀ ಬಿ. ಎಂ. ಪಾಟೀಲ ಆಸ್ಪತ್ರೆಯಲ್ಲಿ ಕೋಣೆ ಸಂಖ್ಯೆ 13ಕ್ಕೆ ಭೇಟಿ ನೀಡಿ ತಮ್ಮ ಹೆಸರು ನೋಂದಾಯಿಸಿ ಕಣ್ಣುದಾನ ಮಾಡಬಹುದಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ಉಪಪ್ರಾಚಾರ್ಯ ಡಾ. ಆನಂದ ಪಾಟೀಲ, ನೇತ್ರದಾನ ವಿಭಾಗದ ಮುಖ್ಯಸ್ಥೆ ಡಾ. ರೇಖಾ ಮುಧೋಳ ಮುಂತಾದವರು ಉಪಸ್ಥಿತರಿದ್ದರು.
ಈ ನೇತ್ರದಾನ ಸಪ್ತಾಹ ಸೆಪ್ಟೆಂಬರ್ 8ರ ವರೆಗೆ ನಡೆಯಲಿದೆ.