ಮಾನ್ವಿ ಡಿಪೋ ಕಂಡಕ್ಟರ್, ಡ್ರೈವರ್ ಮಾನವೀಯತೆ- ಮಹಿಳೆಗೆ ಚಿನ್ನದ ಮಾಂಗಲ್ಯ ಸರ ಮರಳಿಸಿ ಪ್ರಾಮಾಣಿಕತೆ

ವಿಜಯಪುರ: ಮಹಿಳಾ ಪ್ರಯಾಣಿಕರೊಬ್ಬರು ಬಸ್ಸಿನಲ್ಲಿ ಕಳೆದುಕೊಂಡಿದ್ದ 5 ಗ್ರಾಂ ಚಿನ್ನಾಭರಣವನ್ನು ಮರಳಿಸುವ ಮೂಲಕ ಸರಕಾರಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ.

ಬೆಳಿಗ್ಗೆ ವಿಜಯಪುರ ಕೇಂದ್ರ ಬಸ್ ನಿಲ್ದಾಣಕ್ಕೆ ಆಗಮಿಸಿದ್ದ ಮಹಿಳೆಗೆ ನಿರ್ವಾಹಕ ಶಿವಾನಂದ ಯಾಳವಾರ ಮತ್ತು ಚಾಲಕ ರಾಮಪ್ಪ ಕುಂದರಗಿ ಅವರು ಮಾಂಗಲ್ಯ ಸರ ನೀಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  ಈ ಸಂದರ್ಭದಲ್ಲಿ ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಸಹಾಯಕ ಸಂಚಾರ ಅಧೀಕ್ಷಕರು ದೇವೇಂದ್ರ ಡಂಬಳ, ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿ, ಪೊಲೀಸ್ ಪೇದೆ ಬಿ. ಎಸ್. ಗವಿಮಠ ಮುಂತಾದವರು  ಉಪಸ್ಥಿತರಿದ್ದರು.

ಘಟನೆಯ ಹಿನ್ನೆಲೆ

ಆ. 27 ರಂದು ರವಿವಾರ ರಾಯಚೂರು ಜಿಲ್ಲೆಯ ಮಾನ್ವಿಯಿಂದ ವಿಜಯಪುರಕ್ಕೆ ಹೊರಟಿದ್ದ ಸರಕಾರಿ ಬಸ್ KA-36/F1335 ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಬಸ್ ನಿಲ್ದಾಮಕ್ಕೆ ಬಂದಿದೆ.  ಆಗ, ಈ ಬಸ್ಸಿನಲ್ಲಿ ಹತ್ತಿದ ವಿಜಯಪುರದ ಮಹಿಳೆ ನೂರಜಂಹಾ ಇನಾಮದಾರ ವಿಜಯಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.  ಆದರೆ, ಮನೆಗ ಹೋಗಿ ನೋಡಿದಾಗ ಕೊರಳಲ್ಲಿದ್ದ 5 ಗ್ರಾಂ ಮಾಂಗಲ್ಯ ಸರ ನಾಪತ್ತೆಯಾಗಿದೆ.  ಹೀಗಾಗಿ ಬೆಳಿಗ್ಗೆ ಬಸ್ ನಿಲ್ದಾಮಕ್ಕೆ ಬಂದ ಮಹಿಳೆ ಮಾನ್ವಿ ಡಿಪೋಗೆ ಸೇರಿದ ಬಸ್ಸಿನ ನಿರ್ವಾಹಕ ಮತ್ತು ಚಾಲಕರ ಬಳಿ ತಾವು ಮಾಂಗಲ್ಯ ಸರ ಕಳೆದಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಆಗ ಕೂಡಲೇ ಸ್ಪಂದಿಸಿದ ಬಸ್ಸಿನ ನಿರ್ವಾಹ ಮತ್ತು ಚಾಲಕರು ಮಹಿಳೆಯ ನೆರವಿಗೆ ಧಾವಿಸಿದ್ದು, ಬಸ್ ನಿಲ್ದಾಣದ ಅಧಿಕಾರಿಗಳಿಗೆ ಈ ವಿಷಯ ಗಮನಕ್ಕೆ ತಂದಿದ್ದಾರೆ.  ಈ ಮಧ್ಯೆ, ಬಸ್ ನಿಲ್ದಾಣದ ಅಧಿಕಾರಿಗಳು ವಿಜಯಪುರ ನಗರದ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಕರೆಯಿಸಿ ಅವರ ಸಮ್ಮುಖದಲ್ಲಿ ಮಹಿಳೆಗೆ ಮಾಂಗಲ್ಯ ಸರ ಹಿಂದಿರುಗಿಸುವ ಮೂಲಕ ಗಮನ ಸೆಳೆದಿದ್ದಾರೆ.  ಮಹಿಳೆಗೆ ಮಾಂಗಲ್ಯ ಪ್ರಮುಖವಾಗಿದೆ.  ಬಸ್ಸಿನಲ್ಲಿ ಕಳೆದು ಹೋಗಿದ್ದ ತನ್ನ ಮಾಂಗಲ್ಯ ಸರ ಸಿಕ್ಕಿದ್ದಕ್ಕೆ ಮಹಿಳೆ ನೂರಜಂಹಾ ಇನಾಮದಾರ ಸಂತಸ ವ್ಯಕ್ತಪಡಿಸಿದ್ದು, ಬಸ್ಸಿನ ನಿರ್ವಾಹಕ, ಚಾಲಕ, ವಿಜಯಪುರ ಕೇಂದ್ರ ಬಸ್ ನಿಲ್ದಾಣದ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗಾಂಧಿಚೌಕ್ ಪೊಲೀಸ್ ಠಾಣೆಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

ಮಾನ್ವಿ ಬಸ್ ಡಿಪೋದ ನಿರ್ವಾಹಕ ಮತ್ತು ಚಾಲಕರ ಮಾನವೀಯತೆಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಅಷ್ಟೇ ಅಲ್ಲ, ನಿರ್ವಾಹಕ ಶಿವಾನಂದ ಯಾಳವಾರ ಮತ್ತು ಚಾಲಕ ರಾಮಪ್ಪ ಕುಂದರಗಿ ಅವರು ರಾಜ್ಯ ಸಾರಿಗೆ ಇಲಾಖೆಯ ಸಿಬ್ಬಂದಿಯ ಪ್ರಾಮಾಣಿಕತೆಯನ್ನು ಮತ್ತೋಮ್ಮೆ ಎತ್ತಿ ಹಿಡಿದಿದ್ದಾರೆ.

ಒಟ್ಟಾರೆ, ಈ ಘಟನೆ ಈಗ ವಿಜಯಪುರ ಸಾರಿಗೆ ಇಲಾಖೆಯಲ್ಲಿ ಧನಾತ್ಮಕ ಚರ್ಚೆಗೆ ಕಾರಣವಾಗಿದ್ದು, ಕರ್ತವ್ಯ ನಿಷ್ಠೆ ಮತ್ತು ಪ್ರಯಾಣಿಕರ ಬಗ್ಗೆ ಚಾಲಕರು ಮತ್ತು ನಿರ್ವಾಹಕರು ಹಾಗೂ ಸಾರಿಗೆ ಇಲಾಖೆಯ ಸಿಬ್ಬಂದಿ ಹೊಂದಿರುವ ಕಾಳಜಿಗೆ ಈ ಪ್ರಕರಣ ಸಾಕ್ಷಿಯಾಗಿದೆ.  ವಿಜಯಪುರ ಜಿಲ್ಲೆಯ ಜನರೂ ಕೂಡ ಮಾನ್ವಿ ಡಿಪೋ ಚಾಲಕ ಮತ್ತು ನಿರ್ವಾಹಕರ ಪ್ರಾಮಾಣಿಕತೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Leave a Reply

ಹೊಸ ಪೋಸ್ಟ್‌