ವಿಜಯಪುರ: ನಮ್ಮ ಗೃಹಲಕ್ಷ್ಮಿ ಯೋಜನೆಗೆ ಅಂಜಿ (ಹೆದರಿ) ಕೇಂದ್ರ ಸರಕಾರ ಅಡುಗೆ ಅನೀಲ ಸಿಲಿಂಡರ್ ಬೆಲೆಯನ್ನು ಇಳಿಸಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.
ವಿಜಯಪುರದಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಉದ್ಗಾಟಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಕರ್ನಾಟಕದಲ್ಲಿರುವ ಐದು ಗ್ಯಾರಂಟಿ ಯೋಜನೆಗಳನ್ನು ನಾಳೆ ದೇಶಾದ್ಯಂತ ಮಾಡುವುದಾಗಿ ನಮ್ಮ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ. ರಾಷ್ಚ್ರಾದ್ಯಂತ ಅನೇಕ ರಾಜ್ಯಗಳಲ್ಲಿ ಚುನಾವಣೆಗಳು ಬರಲಿವೆ. ಲೋಕಸಭೆ ಚುನಾವಣೆಯೂ ಬರಲಿದೆ. ನಮಗೆ ಹೆದರಿ ಅವರು ಈಗ ರೂ. 200 ಕಡಿಮೆ ಮಾಡಿದ್ದಾರೆ ಎಂದು ಸಚಿವರು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿ ಜಾರಿ ಮಾಡುವುದಾಗಿ ವಾಗ್ದಾನ ಮಾಡಿದ್ದೇವು. ಮಹಿಳೆಯರಿಗೆ ಸರಕಾರಿ ಬಸ್ಗುಳಲ್ಲಿ ಉಚಿತ ಪ್ರಯಾಣಕ್ಕಾಗಿ ರೂಪಿಸಲಾದ ಯೋಜನೆಯನ್ನು ಜಾರಿ ಮಾಡಿದ್ದೇವೆ. ಗೃಹ ಜ್ಯೋತಿಯನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಪ್ರತಿಯೊಬ್ಬರಿಗೆ 10 ಕೆ. ಜಿ. ಅಕ್ಕಿಯನ್ನು ಕೊಡುವ ಅನ್ನಭಾಗ್ಯ ಯೋಜನೆಯನ್ನು ಈಡೇರಿಸಿದ್ದೇವೆ. ಈಗ ಅತ್ಯಂತ ಮಹತ್ವದ ಯೋಜನೆಯಾದ ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ಪ್ರತಿ ತಿಂಗಳು ರೂ. 2000 ಕೋ. ನೀಡುವ ಯೋಜನೆಯನ್ನು ಎ ಐ ಸಿ ಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಯುವ ನಾಯಕ ಮತ್ತು ಎ ಐ ಸಿ ಸಿ ಮಾಜಿ ಅಧ್ಯಕ್ಷ ಹಾಗೂ ಸಂಸದ ರಾಹುಲ ಗಾಂಧಿ, ಜನಪ್ರೀಯ ಮುಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ನೇತೃತ್ವದಲ್ಲಿ, ಡಿ ಸಿ ಎಂ ಡಿ. ಕೆ. ಶಿವಕುಮಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ ನೇತೃತ್ವದಲ್ಲಿ ಮೈಸೂರಿನಲ್ಲಿ ಯೋಜನೆಗೆ ಚಾಲನೆ ನೀಡಿದ್ದೇವೆ. 1.10 ಕುಟುಂಬಗಳಿಗೆ ಈಗ ನೇರವಾಗಿ ರೂ. 2000 ಹಣವನ್ನು ಅವರ ಖಾತೆಗೆ ಹಾಕಿದ್ದೇವೆ. ನಮ್ಮ ಜಿಲ್ಲೆಯಲ್ಲಿ ಶೇ. 83 ರಷ್ಟು ಸುಮಾರು ರೂ. 103 ಕೋ. ಹಣವನ್ನು ನೀಡಲಾಗುತ್ತಿದೆ. ಆ ಎಲ್ಲ ಕುಟುಂಬಗಳಿಗೆ ಹಣವನ್ನು ವರ್ಗಾವಣೆ ಮಾಡಲಾಗಿದೆ. ನಾವು ನುಡಿದಂತೆ ನಡೆದಿದ್ದೇವೆ ಎಂದು ಎಂ. ಬಿ. ಪಾಟೀಲ ಹೇಳಿದರು.
ನರೇಂದ್ರ ಮೋದಿ ಸೇರಿದಂತೆ ನಾನಾ ಪ್ರತಿಪಕ್ಷಗಳ ನಾಯಕರು ಈ ಯೋಜನೆಯ ಬಗ್ಗೆ ಟೀಕೆ ಮಾಡುತ್ತಿದ್ದರು. ಜನರ ಮರಳು ಮಾಡಲು ಈ ಗ್ಯಾರಂಟಿ ಘೋಷಿಸಲಾಗಿದೆ. ಇವು ಜನರನ್ನು ಮರಳು ಮಾಡಲು ಘೋಷಣೆ ಮಾಡಿದ ಯೋಜನೆಗಳು. ಇವುಗಳನ್ನು ಜಾರಿ ಮಾಡಲು ಆಗುವುದಿಲ್ಲ ನರೇಂದ್ರ ಮೋದಿ ಅವರು ಕೇವಲ ನಮ್ಮ ರಾಜ್ಯ ಮಾತ್ರವಲ್ಲ, ಬೇರೆ ಬೇರೆ ರಾಜ್ಯಗಳಲ್ಲಿಯೂ ಹೇಳಿದ್ದರು. ಆದರೆ, ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ನಾವು ನಾಲ್ಕು ಯೋಜನೆಗಳನ್ನು ಜಾರಿ ಮಾಡಿ ತೋರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರತಿಪಕ್ಷಗಳಿಗೆ ಉತ್ತರವನ್ನು ಕೊಟ್ಟಿದ್ದೇವೆ ಎಂದು ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು.
ರಾಜ್ಯ ಸರಕಾರದ 100 ದಿನಗಳ ಸಾಧನೆ ಕರಾಳ ದಿನಗಳಾಗಿವೆ ಎಂದು ಬಿಜೆಪಿ ಮುಖಂಡರು ಮಾಡಿರುವ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ ಸಚಿವರು, ನಾವು ಕಳೆದ ಒಂಬತ್ತು ವರ್ಷಗಳ ಕಾಲ ಕರಾಳ ದಿನಗಳನ್ನು ಕಳೆದಿದ್ದೇವೆ ಎಂದು ಹೇಳಿದರು.
ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ಬಳಿಕ ಸ್ಥಗಿತವಾಗಲಿವೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ನೀಡಿದ ಅವರು, ರಮೇಶ ಜಿಗಜಿಣಗಿ ಅವರಿಗೆ ಎಂಪಿ ಟಿಕೆಟ್ ಸಿಗುತ್ತದೆಯೋ ಇಲ್ಲವೋ ನೋಡಿಕೊಳ್ಳಲಿ. ಅವರಿಗೆ ಸಂಸತ್ ಟಿಕೆಟ್ ಬಗ್ಗೆ ಚಿಂತನೆ ಮಾಡಲು ಹೇಳಿ. ಅಲ್ಲಿ ಕಾಂಪಿಟೇಶನ್ ಬಹಳ ಜಾಸ್ತಿ ಇದೆ. ಅಲ್ಲಿ ಒಳ ಹೊಡೆತ ಕೂಡ ಇದೆ ಎಂದು ಹೇಳಿದರು.
ನುಡಿದಂತೆ ನಡೆದಿದ್ದೇವೆ. ಇವರ ಹಾಗೆ ನಾವು ಸುಳ್ಳು ಆಶ್ವಾಸನೆಗಳನ್ನು ನೀಡಿಲ್ಲ. ಉದ್ಯೋಗ ಸೃಷ್ಠಿ ಮಾಡುತ್ತೇವೆ. ರೂ. 15 ಲಕ್ಷ ಕಪ್ಪು ಹಣ ತಂದು ಅಕೌಂಟಿಗೆ ಹಾಕುತ್ತೇವೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎಂದು ಒಂಬ್ತತು ವರ್ಷಗಳ ಕಾಲ ಸುಳ್ಳು ಹೇಳುವ ಕೆಲಸವನ್ನು ನಮ್ಮ ಸರಕಾರ ಮಾಡಿಲ್ಲ. ನೂರೇ ದಿನಗಳಲ್ಲಿ ನಾವು ಮಾಡಿ ತೋರಿಸುವ ಕೆಲಸ ಮಾಡಿದ್ದೇವೆ. 2014ರಲ್ಲಿ ಇವರು ನೀಡಿರುವ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಸಚಿವ ಎಂ. ಬಿ. ಪಾಟೀಲ ವಾಗ್ದಾಳಿ ನಡೆಸಿದರು.