ವಿಜಯಪುರ: ಮಹಾನ್ ಪುರುಷರ ಆದರ್ಶ, ವ್ಯಕ್ತಿತ್ವ ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸುವಲ್ಲಿ ಇಂತಹ ಜಯಂತಿಗಳು ಮುಖ್ಯ ಹಾಗೂ ಮಹತ್ವದ್ದಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.
ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನಾರಾಯಣ ಗುರುಗಳ ನಡೆ, ನುಡಿ ಹಾಗೂ ಆಚಾರ, ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರ ತತ್ವಾದರ್ಶಗಳನ್ನು ಚಾಚು ತಪ್ಪದೇ ಪಾಲಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕದ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿದ್ದ ಡಾ. ಮಾಧವಗುಡಿ ಅವರು ಮಾತನಾಡಿ, 19-20ನೇ ಶತಮಾನದ ಸಾಮಾಜಿಕ ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಹಾಗೂ ಒಂದೇ ಜಾತಿ, ಒಂದೇ ಧರ್ಮ ಎಂಬ ಸಂದೇಶದ ಸಾರುವ ಮೂಲಕ ಸಮಾಜದ ಅಂಕು-ಡೊಂಕುಗಳನ್ನು ತಿದ್ದಿದ ಮಹಾನ್ ಸಂತರ ಸಾಲಿನಲ್ಲಿ ಶ್ರೀ ನಾರಾಯಣ ಗುರುಗಳೊಬ್ಬರು ಎಂದು ಅವರು ಹೇಳಿದರು.
ಅನಿಷ್ಠ ಪದ್ಧತಿ, ಜಾತೀಯತೆ, ಅಸ್ಪಶೃತೆಯಂತಹ ಅನೇಕ ಸಾಮಾಜಿಕ ಪಿಡುಗುಗಳನ್ನು ಉತ್ತಮ ಶಿಕ್ಷಣ ಪಡೆಯುವ ಮೂಲಕ ಹೋಗಲಾಡಿಸಬಹುದು. ದುಶ್ಚಟಗಳಿಮದ ದೂರವಿದು, ನಮ್ಮ ವ್ಯಕ್ತಿತ್ವವನ್ನು ಸಮರ್ಥ ರೀತಿಯಲ್ಲಿ ರೂಪಿಸಿಕೊಳ್ಳಬಹುದೆಂದು ತೋರಿಸಿಕೊಟ್ಟ ನಾರಾಯಣ ಗುರುಗಳ ಜೀವನವನ್ನು ಸ್ಮರಿಸುತ್ತ, ಅವರ ಆದರ್ಶ ಗುಣಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಜಯಂತಿ ಕಾರ್ಯಕ್ರಮ ಅರ್ಥಪೂರ್ಣವಾಗುತ್ತದೆ ಎಂದು ಅವರು ಹೇಳಿದರು.
ಈ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಸಮಾಜದ ಬಸವರಾಜ ಈಳಗೇರ, ಸೋಮನಾಥ ಕಲ್ಲೂರ, ಭೀಮರಾಯ ಜಿಗಜಿಣಗಿ, ದೇವೇಂದ್ರ ಮಿರೇಕರ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಸ್ವಾಗತಿಸಿದರು. ಪ್ರೊ. ಸುಬಾಸ ಕನ್ನೂರ ನಿರೂಪಿಸಿದರು.