ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಸುಮಾರು ಏಳೆಂಟು ಜನ ಸಂಸದರು ಚುನಾವಣೆ ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತಿಳಿಸಿದ್ದಾರೆ.
ವಿಜಯಪುರ ನಗರದಲ್ಲಿ ಸಿದ್ದಸಿರಿ ಸಂಸ್ಥೆಯ ಎಸ್ ಮಾರ್ಟ್ ಮಳಿಗೆಯನ್ನು ಉದ್ಘಾಟಿಸಿದ ಬಳಿಕ ಮಾದ್ಯಮದವರ ಜೊತೆ ಅವರು ಮಾತನಾಡಿದರು.
ಲೋಕಸಭೆ ಟಿಕೆಟ್ ಹಂಚಿಕೆಯಲ್ಲಿ ಏನಾದರೂ ಬದಲಾವಣೆ ಆಗಲಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಕುರಿತು ನನಗೆ ಮಾಹಿತಿ ಇಲ್ಲ. ನನ್ನ ಮಾಹಿತಿಯ ಪ್ರಕಾರ ಏಳೆಂಟು ಜನ ಸಂಸದರು ತಾವಾಗಿಯೇ ಸ್ವಯಂ ಪ್ರೇರಣೆಯಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡದೇ ಹಿಂದೆ ಸರಿಯಲಿದ್ದಾರೆ. ಬೆಂಗಳೂರು ಉತ್ತರ ಸಂಸದ ಡಿ. ವಿ. ಸದಾನಂದಗೌಡ, ದಾವಣಗೆರೆ ಸಂಸದ ಜಿ. ಎಂ. ಸಿದ್ದೇಶ್ವರ, ಹಾವೇರಿಯ ಸಂಸದ ಶಿವಕುಮಾರ ಉದಾಸಿ ಸೇರಿದಂತೆ ಕೆಲವರು ಸ್ವಯಂ ಪ್ರೇರಣೆಯಿಂದ ಹಿಂದೆ ಸರಿಯಲಿದ್ದಾರೆ. ಹೊಸಬರಿಗೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಅವರು ಹಿಂದೆ ಸರಿಯುತ್ತಿದ್ದಾರೆ ಎಂದು ಅವರು ಹೇಳಿದರು.
ವಿಜಯಪುರ ಲೋಕಸಭೆ ಟಿಕೆಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಹಾಲಿ ಸಂಸದರು ನನಗೆ ಟಿಕೆಟ್ ಸಿಗುತ್ತದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಅವರು ಹಾಗೆ ಹೇಳಿಕೆ ನೀಡಬೇಕಾಗುತ್ತದೆ. ಈ ಹಿಂದೆ ಕೂಡ ನನಗೂ ಟಿಕೆಟ್ ಇಲ್ಲ ಎಂದು ಸುದ್ದಿ ಹರಡಲಾಗಿತ್ತು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳಗೆ ಟಿಕೆಟ್ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ನನಗೆ ಟಿಕೆಟ್ ಸಿಗುತ್ತದೆ ಎಂದು ನಾನು ಹೇಳುತ್ತಿದ್ದೆ. ಅದೇ ರೀತಿ ಹಾಲಿ ಸಂಸದರೂ ಕೂಡ ನನಗೆ ಟಿಕೆಟ್ ಸಿಗುತ್ತದೆ ಎಂದು ಹೇಳುತ್ತಿದ್ದಾರೆ. ಅದರಲ್ಲಿ ತಪ್ಪಿಲ್ಲ. ಹಾಲಿ ಸಂಸದರು ಶಕ್ತಿವಂತರು. ಹಿರಿಯರೂ ಆಗಿದ್ದಾರೆ. ಹಾಲಿ ಸಂಸದರು ಬಿಜೆಪಿಯ ನಿಯಮಗಳ ಪ್ರಕಾರ 75ರ ಅಂಡರ್ ಏಜ್ ನಲ್ಲಿದ್ದಾರೆ. ನಮ್ಮಲ್ಲಿ ಯಾರಿಗೆ ಟಿಕೆಟ್ ನೀಡಿದರೂ ನಮ್ಮ ವಿಜಯಪುರ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಉಳಿಸಿಕೊಳ್ಳುತ್ತಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ತಿಳಿಸಿದರು.
ಸಂಸತ್ ವಿಶೇಷ ಅಧಿವೇಶನ ವಿಚಾರ
ದೇಶದಲ್ಲಿ ಸರಣಿ ಚುನಾವಣೆಗಳು ನಡೆಯುವ ಕಾರಣ ಅಭಿವೃದ್ದಿ ಕಾರ್ಯಕ್ಕೆ ಹಿನ್ನಡೆಯಾಗುತ್ತದೆ. ಒಂದು ದೇಶ ಒಂದು ಚುನಾವಣೆ ವಿಚಾರದಲ್ಲಿ ಪ್ರಧಾನಿ ಮೋದಿ ವಿಶೇಷ ಅಧಿವೇಶ ಕರೆದಿದ್ದು ಸ್ವಾಗತಾರ್ಹವಾಗಿದೆ. ಇದರಿಂದ ಸಾವಿರಾರು ಕೋಟಿ ಹಣ ದೇಶಕ್ಕೆ ಉಳಿಯುತ್ತದೆ ಎಂದು ಒನ್ ನೇಷನ್ ಒನ್ ಎಲೆಕ್ಷನ್ ಗೆ ಬೆಂಬಲ ವ್ಯಕ್ತಪಡಿಸಿದ ಅವರು, ಲೋಕಸಭೆ ಚುನಾವಣೆಯಿಂದ ಹಿಡಿದು ಗ್ರಾಮ ಪಂಚಾಯಿತಿ ಚುನಾವಣೆವರೆಗೂ ಚುನಾವಣೆ ಸಮಯದಲ್ಲಿ ನೀತಿ ಸಂಹಿತೆ ಕಾರಣದಿಂದ ಒಂದು ತಿಂಗಳು ಕಾಲ ಕೆಲಸ ಅಭಿವೃದ್ಧಿ ಕಾರ್ಯಗಳು ಸ್ಥಗಿತವಾಗುತ್ತವೆ. ಇದರಿಂದ ಅಭಿವೃದ್ದಿ ಕಾರ್ಯ ಕುಂಠಿತವಾಗುತ್ತದೆ. ಕಳೆದ ಲೋಕಸಭೆ ಚುನಾವಣೆಗೆ ರೂ. 10,000 ಕೋ. ಗಿಂತ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಇದರಲ್ಲಿ ಕರ್ನಾಟಕದಲ್ಲಿ ರೂ. 1200 ಕೋ. ಖರ್ಚಾಗಿದೆ. ಹೀಗಾಗಿ ಇಡೀ ದೇಶ ಒಂದೇ ಚುನಾವಣೆ ಎದುರಿಸಿದರೆ ಅಭಿವೃದ್ದಿ ಕೆಲಸ ಕಾಮಗಾರಿಗಳನ್ನು ಮಾಡಲು ಹಾಗೂ ಆರ್ಥಿಕ ಹೊರೆ ಕಡಿಮೆ ಮಾಡಲು ಅನಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ವಿಶೇಷ ಅಧಿವೇಶನ ಕರೆದಿದ್ದಾರೆ. ಈ ಸಂದರ್ಭದಲ್ಲಿ ನಮ್ಮ ಸರಕಾರ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳುತ್ತದೆ. ಪ್ರಧಾನಿಗಳ ಈ ನಿರ್ಣಯವನ್ನು ಸ್ವಾಗತಿಸುತ್ತೇನೆ ಎಂದು ಅವರು ಹೇಳಿದರು.
ವಕ್ಫ್ ಆ್ಯಕ್ಟ ರದ್ದು ಮಾಡಲು ಆಗ್ರಹ
ಇದೇ ವೇಳೆ, ವಕ್ಫ್ ಆ್ಯಕ್ಟ್ ರದ್ದು ಮಾಡಬೇಕೆಂದು ಕೇಂದ್ರ ಸರಕಾರವನ್ನುಒತ್ತಾಯಿಸಿದ ಅವರು, ವಕ್ಫ್ ಆ್ಯಕ್ಟ್ ರದ್ದು ಮಾಡುವಂತೆ ಆಗ್ರಹಿಸಿ ಪ್ರಧಾನಿಯವರಿಗೆ ಪತ್ರ ಬರೆಯುತ್ತೇನೆ. ವಕ್ಪ್ ಹೆಸರಿನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಲಾಗುತ್ತಿದೆ. ದೇಶದಲ್ಲಿ 15 ಸಾವಿರ ಎಕರೆ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಇದರಿಂದ ಯಾವುದೇ ಪ್ರಯೋಜನವಿಲ್ಲ. ದೆಹಲಿಯಲ್ಲಿ ಜಾಮೀಯಾ ಮಸೀದಿ ಸಹಿತವಾಗಿ 150 ಆಸ್ತಿಗಳನ್ನು ಕೇಂದ್ರ ವಾಪಸ್ ತೆಗೆದುಕೊಂಡಿದೆ. ಅದೇ ಮಾದರಿಯಲ್ಲಿ ಇಡೀ ದೇಶದಲ್ಲಿ ವಕ್ಫ್ ಕಾನೂನು ವಾಪಸ್ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ವಕ್ಫ್ ಆ್ಯಕ್ಟ್ ಕುರಿತು ನಾನು ವಿಧಾನಸಭೆಯಲ್ಲಿ ಮಾತನಾಡಿದ್ದೆನೆ. ವಕ್ಫ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕೂಡ ಅಸಹಾಯಕವಾಗಿದೆ. ಅದ್ದರಿಂದ ವಕ್ಫ್ ಕಾನೂನು ಹಿಂಪಡೆದರೆ ಲಕ್ಷಾಂತರ ಕೋಟಿ ಆಸ್ತಿ ಉಳಿಯಲಿದೆ ಎಂದು ಅವರು ಹೇಳಿದರು.
ಬೆಂಗಳೂರಿನಲ್ಲಿ ಬಿ. ಎಲ್. ಸಂತೋಷ ಸಭೆ ವಿಚಾರ
ಕಾಂಗ್ರೆಸ್ಸಿನ 40 ಶಾಸಕರು ತಮ್ಮ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ. ಎಲ್. ಸಂತೋಷ ಗುರುವಾರ ರಾಜಧಾನಿ ಬೆಂಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ ಹಾಲಿ ಮತ್ತು ಮಾಜಿ ಶಾಸಕರು ಹಾಗೂ ಮುಖಂಡರ ಸಭೆ ನಡೆಸಿದ್ದಾರೆ. ಅವರಿಗೆ ಎಲ್ಲವೂ ಗಮನಕ್ಕೆ ಬಂದಿರುತ್ತದೆ. ರಾಜ್ಯದಲ್ಲಿ ಏನೋ ಗಡಿಬಿಡಿ ಇದೆ ಎಂದು ನಾನು ಮೊದಲೇ ಹೇಳಿಕೊಂಡು ಬಂದಿದ್ದೇನೆಯ ಏನು ಗಡಿಬಿಡಿ ಇದೆ? ಎಂದು ಹೇಳುವ ಪರಿಸ್ಥಿತಿ ಇಲ್ಲ. ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಬಹಳಷ್ಟು ಶಾಸಕರು ಅಸಮಾಧಾನವಾಗಿದ್ದಾರೆ ಎಂದು ನನಗೆ ಅನಿಸುತ್ತದೆ. ಶಾಸಕರಿಗೆ ಸಚಿವರು ಬೆಲೆ ಕೊಡುತ್ತಿಲ್ಲ ಎಂದು ಹೇಳಿದ್ದಾರೆ. ರಾಜ್ಯ ಸರಕಾರ ಅಭಿವೃದ್ಧಿಗೆ ಹಣ ನೀಡುತ್ತಿಲ್ಲ. ಸರಕಾರದ ಐದು ಗ್ಯಾರೆಂಟಿಗಳಿಗೆ ವಾರ್ಷಿಕವಾಗಿ ರೂ. 52 ಸಾವಿರ ಕೋ. ಬೇಕು. ಇಷ್ಟು ಹಣ ಸಂಗ್ರಹಿಸಿಲು ರಾಜ್ಯ ಸರಕಾರ ಬೇರೆ ಬೇರೆ ರೀತಿಯ ಟ್ಯಾಕ್ಸ್ ಹಾಕುತ್ತಿದ್ದಾರೆ. ಮತ್ತೇ ವಿದ್ಯುತ್ ದರ ಏರಿಕೆ ಇದಕ್ಕೆ ಸಾಕ್ಷಿಯಾಗಿದೆ. ಒಂದು ಯುನಿಟ್ ಗೆ ಒಂದು ರೂಪಾಯಿ ಏರಿಕೆ ಮಾಡಿದ್ದಾರೆ. ಇದರ ಮದ್ಯೆ ಆಡಳಿತ ಪಕ್ಷದ ಶಾಸಕರಿಗೆ ಅನುದಾನ ಇಲ್ಲ ಎನ್ನುತ್ತಿದ್ದಾರೆ. ಗುತ್ತಿಗೆದಾರರ ಬಿಲ್ ಪಾವತಿಯಾಗುತ್ತಿಲ್ಲ. ಕೆಲವು ಜನ ಹಿರಿಯ ಶಾಸಕರಿಗೆ ಮಂತ್ರಿ ಮಾಡಿಲ್ಲ ಎಂಬ ಅಸಮಾಧಾನ ಕೂಡ ಇದೆ ಎಂದು ಅವರು ಕಾಂಗ್ರೆಸ್ ಗೆ ಟಾಂಗ್ ನೀಡಿದರು.
ಬಿಜೆಪಿ ಶಾಸಕರಿಗೆ ಕಿವಿಮಾತು
ಇದೇ ವೇಳೆ ಬಿಜೆಪಿ ಶಾಸಕರಿಗೆ ಕಿವಿಮಾತು ಹೇಳಿದ ಅವರು, ಯಾರೂ ಆಪರೇಷನ್ ಹಸ್ತಕ್ಕೆ ಬಲಿಯಾಗಬೇಡಿ. ದುಡುಕಿನ ನಿರ್ಣಯ ತೆಗೆದುಕೊಳ್ಳಬೇಡಿ. ಇಲ್ಲವಾದರೆ ಆಪರೇಷನ್ ಹಸ್ತಕ್ಕೆ ಬಲಿಯಾದರೆ ನಾ ಘರ್ ಕಾ, ನಾ ಘಾಟ್ ಕಾ ಎಂಬಂಥ ಪರಿಸ್ಥಿತಿ ಎದುರಾಗುತ್ತದೆ. ಅಲ್ಲೂ ಇಲ್ಲ, ಇಲ್ಲೂ ಇಲ್ಲ ಎಂಬಂತೆ ಆಗಬೇಡಿ ಎಂದು ಹೇಳಿದರು.
ಏನಾದರೂ ಅನಾಹುತ ಆದರೆ ನೀವು ಇಲ್ಲಿಯೂ ಎಂ ಎಲ್ ಎ ಆಗಿರುವುದಿಲ್ಲ. ಅಲ್ಲಿಯೂ ಎಂ ಎಲ್ ಎ ಆಗೋದಿಲ್ಲ. ಹೀಗಾಗಿ ಸುಮ್ಮನೆ ಬಿಜೆಪಿಯಲ್ಲಿ ಇದ್ದುಬಿಡಿ. ಎಲ್ಲರೂ ಸೇರಿ ಎಂಪಿ ಎಲೆಕ್ಷನ್ ಮಾಡೋಣ. ಲೋಕಸಭಾ ಚುನಾವಣೆಗೂ ಮೊದಲು ಅಥವಾ ಬಳಿಕ ಏನೋ ಆಗಲಿದೆ. ಬಹಳಷ್ಟು ಜಿಗದಾಡಿ ಕಾಂಗ್ರೆಸ್ ಗೆ ಹೋಗುತ್ತೇನೆ. ನನಗೆ ಕಾಂಗ್ರೆಸ್ಸಿನವರು ಕರೆದಿದಾರೆ. ನನಗೆ ಡಿಕೆ ಕರೆದಿದಾನೆ. ಸಿದ್ದರಾಮಯ್ಯ ಕರೆದಿದಾನೆ. ರಾಹುಲ್ ಗಾಂಧಿ ಕರೆದಿದಾನೆ ಎಂದು ಹೋಗಿ ಡಬ್ಬು ಬಿದ್ದರೆ ನಿಮ್ಮ ಕಥೆ ಮುಗೀತು ಎಂದು ಅವರು ಹೇಳಿದರು.
ಕಾಂಗ್ರೆಸ್ಸಿನ ಕೆಲ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕೈ ಶಾಸಕರ್ಯಾರೂ ನನಗೆ ಸಂಪರ್ಕ ಮಾಡಿಲ್ಲ. ಬೆಂಗಳೂರಿನಲ್ಲಿನ ಸಭೆಯಲ್ಲಿ ಮುಂದಿನ ಚುನಾವಣೆ ತಯಾರಿ ಕುರಿತು ಚರ್ಚೆ ಮಾಡಲಾಗಿದೆ. ಆದರೆ ಸಭೆಯನ್ನು ಶಕ್ತಿ ಪ್ರದರ್ಶನ ಮಾಡಲು ಮಾಡಿಲ್ಲ. ಬಿಜೆಪಿಯಲ್ಲಿ ಶಕ್ತಿ ಪ್ರದರ್ಶನ ಬಿಜೆಪಿಯಲ್ಲಿ ಮಾಡುವ ಅವಶ್ಯಕತೆ ಇಲ್ಲ. ಕಾರಣಾಂತರದಿಂದ ಕೆಲವರು ಸಭೆಗೆ ಬಂದಿಲ್ಲ. ಇದರಲ್ಲಿ ಯಾವುದೇ ಅಸಮಾಧಾನ ಇಲ್ಲ ಎಂದು ಅವರು ಹೇಳಿದರು.
ಇಂಡೋ- ಪಾಕ್ ಕ್ರಿಕೆಟ್ ಪಂದ್ಯ ವಿಚಾರ
ಶನಿವಾರ ಎಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಸೂರ್ಯ ಚಂದ್ರರು ಇರುವವರೆಗೂ ಭಾರತ ಗೆದ್ದು ಬರಲಿ ಎಂದು ಶುಭ ಹಾರೈಸಿದರು.
ನಾನು ಹೆಚ್ಚಾಗಿ ಕ್ರಿಕೆಟ್ ಪಂದ್ಯಗಳನ್ನು ನೋಡುವುದಿಲ್ಲ. ಯಾರಾದರೂ ಕ್ರಿಕೆಟ್ ನೋಡುತ್ತಿದ್ದರೂ ಅದನ್ನು ಬದಲಿಸಿ ನ್ಯೂಸ್ ಚಾನೆಲ್ ವೀಕ್ಷಿಸುತ್ತೇನೆ. ಸದ್ಯ ಏಷ್ಯಾ ಕಪ್ ಕ್ರಿಕೆಟ್ ಟೂರ್ನಾಮೆಂಟ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಬೇಕೆಂದು ಪ್ರಾರ್ಥನೆ ಮಾಡುವೆ ಎಂದು ಅವರು ಹೇಳಿದರು.
ಭಾರತ ಯಾವಾಗಲೂ ಗೆಲ್ಲುತ್ತಾ ಹೋಗಬೇಕು. ಭಾರತ ಹೇಗೆ ಚಂದ್ರಯಾನದಲ್ಲಿ ಸಾಧನೆ ಮಾಡಿದೆಯೋ ಅದೇ ರೀತಿ ಭಾರತತೀಯ ಕ್ರಿಕೆಟ್ ತಂಡ ಸಾಧನೆ ಮಾಡಲಿ. ಜಗತ್ತಿನ ಯಾವ ರಾಷ್ಟ್ರಗಳು ಮಾಡದ ಸಾಧನೆಯನ್ನು ನಾವು ಚಂದ್ರಯಾನದಲ್ಲಿ ಮಾಡಿದ್ದೇವೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಮ್ಮ ರೋವರ್ ಇಳಿದಿರುವುದು ಹಮ್ಮೆ ತಂದಿದೆ. ಸೂರ್ಯ ಚಂದ್ರರು ಇರುವವರೆಗೂ ಭಾರತ ಗೆಲ್ಲುತ್ತಾ ಹೋಗಬೇಕು ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದು ಬಸನಗೌಡ ಪಾಟೀಲ ಯತ್ನಾಳ ಶುಭ ಹಾರೈಸಿದರು.