ವಿಜಯಪುರ: ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯರು ರೋಗಿಯೊಬ್ಬನ ಮೆದುಳಿನಲ್ಲಿ ಬೆಳೆದಿದ್ದ ಗಡ್ಡೆಯನ್ನು ತೆಗೆಯುವ ಮೂಲಕ ಅಪರೂಪದ ಶಸ್ತçಚಿಕಿತ್ಸೆಯನ್ನು ನಡೆಸಿದ್ದಾರೆ.
52 ವರ್ಷದ ವ್ಯಕ್ತಿಯೊಬ್ಬರು ತೀವ್ರ ತೆಲೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ರೋಗಿಯನ್ನು ಪರೀಕ್ಷಿಸಿದ ನರರೋಗ ತಜ್ಞ ಡಾ. ಮಲ್ಲಪ್ಪ ವಿ. ಹುಗ್ಗಿ ಎಲ್ಲ ವ್ಯದ್ಯಕೀಯ ತಪಾಸಣೆ ನಡೆಸಿದಾಗ ರೋಗಿಯ ತಲೆಯಲ್ಲಿ ಗಡ್ಡೆ ಬೆಳೆದಿರುವುದು ಪತ್ತೆಯಾಗಿದೆ. ಆಗ ವೈದ್ಯರು ಸತತ ನಾಲ್ಕು ಗಂಟೆಗಳ ಕಾಲ ಶಸ್ತçಚಿಕಿತ್ಸೆ ನಡೆಸಿ ರೋಗಿಯನ್ನು ಗುಣಪಡಿಸಿದ್ದಾರೆ.
ಈ ರೋಗಿಗೆ ಫ್ರಂಟಲ್ ಕಾನ್ವೆಕ್ಸೀಟಿ ಮೆನಿಂಜಿಯೊಮಾ (Frontal Convexity Meningioma) ಎಂಬ ಅಪರೂಪದ ಕಾಯಿಲೆ ಉಂಟಾಗಿತ್ತು. ಒಂದು ಲಕ್ಷ ಜನರಲ್ಲಿ ಸುಮಾರು ಶೇ. 8.60 ಜನರಲ್ಲಿ ಕಾಣಿಸುವ ಅಪರೂಪದ ಕಾಯಿಲೆ ಇದಾಗಿದ್ದು, ಈ ಸಮಸ್ಯೆ ಕಾಣಿಸಿಕೊಳ್ಳುವ ರೋಗಿಗೆ ತೀವ್ರವಾದ ತೆಲೆನೋವು ಕಾಣಿಸುವುದು ಇದರ ಗುಣಲಕ್ಷಣವಾಗಿದೆ. ಈ ರೋಗಿ ಈಗ ಚೇತರಿಸಿಕೊಂಡಿದ್ದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಇದೇ ರೀತಿ ಡಾ. ಮಲ್ಲಪ್ಪ ವಿ. ಹುಗ್ಗಿ ಅವರು 58 ವರ್ಷದ ರೈತನೊಬ್ಬನ ಮೆದುಳಿನಲ್ಲಿ ರಕ್ತನಾಳದಲ್ಲಿ ರಕ್ತ ಹೆಪ್ಪುಗಟ್ಟಿತ್ತು (Superior Sagittal Sinus Injury). ಈ ರೈತ ಬಿದ್ದ ಪರಿಣಾಮ ಆತನ ತಲೆಯಲ್ಲಿನ ಎಲುಬಿಗೆ ಗಾಯವಾಗಿತ್ತು. ಈ ರೈತನಿಗೆ ಕೂಡಲೇ ಶಸ್ತ್ರಚಿಕಿತ್ಸೆ ನಡೆಸಿದ ಡಾ. ಮಲ್ಲಪ್ಪ ಹುಗ್ಗಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಅಷ್ಟೆ ಅಲ್ಲ, ಅಪಘಾತಯೊಂದರಲ್ಲಿ ಕುತ್ತಿಗೆ ಎಲುಬು ಸರಿದ ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ 35 ವರ್ಷದ ಯುವಕನಿಗೆ ಶಸ್ತ್ರಚಿಕಿತ್ಸೆ ನಡೆಸಿ ಆತನನ್ನು ಗುಣಪಡಿಸಿದ್ದಾರೆ. ವೈದ್ಯರ ಈ ಯಶಸ್ವಿ ಶಸ್ತçಚಿಕಿತ್ಸೆಗೆ ಬಿ. ಎಲ್. ಡಿ. ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುದೋಳ ಮತ್ತು ಮೆಡಿಕಲ್ ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಕುಲಕರ್ಣಿ ಅಭಿನಂದನೆ ಸಲ್ಲಿಸಿದ್ದಾರೆ.
ಬಿ.ಎಲ್.ಡಿ.ಇ ಆಸ್ಪತ್ರೆಯ ನರರೋಗ ಶಸ್ತ್ರಚಿಕಿತ್ಸೆ ವಿಭಾಗದ ವೈದ್ಯರಾದ ಡಾ. ಬಸವರಾಜ ಬಡದಾಳ ಮತ್ತು ಮಲ್ಲಪ್ಪ ವಿ. ಹುಗ್ಗಿ ನೇತೃತ್ವದಲ್ಲಿ ಮೆದುಳು ಮತ್ತು ನರರೋಗಗಳಿಗೆ ಪ್ರತಿ ತಿಂಗಳು ಸುಮಾರು 30 ರಿಂದ 35 ನಾನಾ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸುತ್ತಿದ್ದಾರೆ. ಅಲ್ಲದೇ, ಆಸ್ಪತ್ರೆಯಲ್ಲಿ ಈಗ ಶಸ್ತ್ರಚಿಕಿತ್ಸೆಗೆ ಅಗತ್ಯವಾಗಿರುವ ಎಲ್ಲ ಅತ್ಯಾಧುನಿಕ ಸಲಕರಣೆಗಳು ಮತ್ತು ತಂತ್ರಜ್ಞಾನವನ್ನು ಸಂಸ್ಥೆಯ ಅಧ್ಯಕ್ಷರಾದ ಎಂ. ಬಿ. ಪಾಟೀಲ ಅವರು ಒದಗಿಸಿದ್ದಾರೆ. ಇದರಿಂದಾಗಿ ನಾನಾ ಕಾಯಿಲೆಗಳಿಂದ ಬಳಲುವ ರೋಗಿಗಳು ಶಸ್ತ್ರಚಿಕಿತ್ಸೆಗಾಗಿ ದೂರದ ಮಹಾನಗರಗಳಿಗೆ ಅಲೆದಾಡುವುದು ತಪ್ಪಿದಂತಾಗಿದೆ. ಅಲ್ಲದೇ, ಈ ಆಸ್ಪತ್ರೆಯಲ್ಲಿ ಸರಕಾರಿ ಆರೋಗ್ಯ ವಿಮೆ ಯೋಜನೆಯಡಿ ಚಿಕಿತ್ಸೆ ಲಭ್ಯವಿರುವುದರಿಂದ ಸಾರ್ವಜನಿಕರು ಇದರ ಲಾಭವನ್ನು ಪಡೆಯಬಹುದಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ ತಿಳಿಸಿದ್ದಾರೆ.