ಜಿಲ್ಲಾ ಪಂಚಾಯಿತಿಯಲ್ಲಿ ಮಿನಿ ಗ್ರಂಥಾಲಯ ನಿರ್ಮಾಣ- ಸಿಇಓ ಅವರ ನಡೆ ಇತರರಿಗೆ ಪ್ರೇರಣೆ- ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ

ವಿಜಯಪುರ: ಜಿ. ಪಂ. ಸಿಇಓ ಕಚೇರಿ ಮುಂದೆ ಹೊಸದಾಗಿ ನಿರ್ಮಿಸಲಾಗಿರುವ ಮಿನಿ ಗ್ರಂಥಾಲಯವನ್ನು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜಾ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ತಮ್ಮನ್ನು ಭೇಟಿಯಾಗಲು ಬರುವ ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಠಿಯಿಂದ ಮತ್ತು ಅವರ ಸಮಯವನ್ನು ಹಾಳು ಮಾಡಬಾರದು ಎಂಬ ಸದುದ್ದೇಶದಿಂದ ಜಿ. ಪಂ. ಸಿಇಓ ರಾಹುಲ ಶಿಂಧೆ ಅವರು ತಮ್ಮ ಸ್ವ ಇಚ್ಚೆಯಿಂದ ಮಿನಿ ಗ್ರಂಥಾಲಯ ಸ್ಥಾಪಿಸಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.  ಇದು ಸಾರ್ವಜನಿಕರ ಮೇಲೆ ಅವರಿಗಿರುವ ಸೇವಾ ಮನೋಭಾವನೆಯನ್ನು ತೋರಿಸುತ್ತದೆ.  ಇಂಥ ಕಾರ್ಯಗಳಿಂದ ಸಿಇಓ ಇತರರಿಗೂ ಪ್ರೇರಣೆಯಾಗಿದ್ದಾರೆ ಎಂದು ಹೇಳಿದರು.

ನಿ ಗ್ರಂಥಾಲಯದ ರೂವಾರಿ ಮತ್ತು ಜಿ. ಪಂ. ಮುಖ್ಯ ಕಾರ್ಯನಿರ್ವಾಹಕಣಾಧಿಕಾರಿ ರಾಹುಲ ಶಿಂಧೆ ಮಾತನಾಡಿ, ಕಚೇರಿ ಕೆಲಸದ ಅಂಗವಾಗಿ ಹಲವಾರು ಜನರು ಪ್ರತಿದಿನ ತಮ್ಮನ್ನು ಭೇಟಿಯಾಗಲು ಬರುತ್ತಾರೆ.  ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಬರುವುದರಿಂದ ನಾನು ಕೆಲಸದ ನಿಮಿತ್ಯ ಹೊರಗಡೆ ಹೋದಾಗ ಅಥವಾ ಹಿರಿಯ ಅಧಿಕಾರಿಗಳ ಸಭೆಯಲ್ಲಿದ್ದಾಗ ಸಾರ್ವಜನಿಕರು ಬೇಸರದಿಂದ ಕಾಯುತ್ತಿರುತ್ತಾರೆ.  ಅವರ ಬೇಸರವನ್ನು ಹೋಗಲಾಡಿಸಲು ಈ ಮಿನಿ ಗ್ರಂಥಾಲಯವನ್ನು ಆರಂಭಿಸಲಾಗಿದೆ.  ಈಗಾಗಲೇ ಕನ್ನಡದ ಒಳ್ಳೆಯ ಪುಸ್ತಕ, ಕನ್ನಡ ಮತ್ತು ಆಂಗ್ಲ ಭಾಷೆಯ ನಾನಾ ದಿನಪತ್ರಿಕೆ, ಮಾಸ ಪತ್ರಿಕೆ, ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ನಾನಾ ಯೋಜನೆಗಳ ಮಾಹಿತಿ ಪುಸ್ತಕಗಳನ್ನು ಇಡಲಾಗಿದೆ.  ಮುಂಬರುವ  ದಿನಗಳಲ್ಲಿ ಇನ್ನೂ ಹೆಚ್ಚಿನ ಪುಸ್ತಕಗಳನ್ನು ಇಡಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಡಾ. ವಿಜಯಕುಮಾರ ಆಜೂರ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಮುಖ್ಯ ಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಪಿ. ಆರ್. ಇ. ಡಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ನಬಿಲಾಲ ಸೇರಿದಂತೆ ಜಿ. ಪಂ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌