ವಿಜಯಪುರ: ನಾನು ಹುಟ್ಟಿನಿಂದಲೂ ಕಾಂಗ್ರೆಸ್ ವಿರೋಧಿಯಾಗಿ ಬೆಳೆದಿದ್ದೇನೆ. ಕಾಂಗ್ರೆಸ್ ಸೇರುವ ಪ್ರಶ್ನೆಯೇ ಇಲ್ಲ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ವಿಜಯಪುರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಾಂಗ್ರೆಸ್ ವಿರೋಧಿಯಾಗಿ ರಾಜಕಾರಣ ಮಾಡಿದ್ದೇನೆ. 45 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ. ಇನ್ನೇನು ವಯಸ್ಸಾಗಿದೆ. ಮತ್ತೆ ಪಾರ್ಟಿ ಚೇಂಜ್ ಮಾಡಿ ಏನು ರಾಜಕಾರಣ ಮಾಡುವುದಿದೆ? ಮಾಡುವುದಾದರೆ ನಮ್ಮ ವಂಶಕರು ಮಾಡಬೇಕಷ್ಟೇ ಎಂದು ಸ್ಪಷ್ಟಪಡಿಸಿದರು.
ನಾನಂತೂ ಕಾಂಗ್ರೆಸ್ ಗೆ ಹೋಗಲ್ಲ. ಟಿಕೆಟ್ ಸಿಗದಿರಲು ನನಗೇನೂ ಇನ್ನೂ ವಯಸ್ಸಿನ ವಯಸ್ಸಾಗಿಲ್ಲ. ವಯಸ್ಸು ಯಾರಿಗೆ ಆಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ನಸುನಕ್ಕರು.
ಕೆಲವು ಸಂಸದರಿಗೆ ಸ್ಪರ್ಧಿಸಬೇಕು ಎಂಬ ಇಚ್ಛೆ ಇದೆ. ಇನ್ನೂ ಕೆಲವರಿಗೆ ಸ್ಪರ್ಧಿಸಬಾರದು ಸಾಕು ಎನ್ನುವ ಇಚ್ಛೆ ಇದೆ. ನಾನೇನು ಯಾವತ್ತೂ ಸ್ಪರ್ಧಿಸಲ್ಲ ಎಂದಿಲ್ಲ. ಪಕ್ಷದವರು ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ. ಇಲ್ಲಾಂದ್ರೆ ಮನೆಯಲ್ಲಿರುತ್ತೇನೆ. ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಕಾಯಿ ಒಡೆದು ಬಿಡುತ್ತೇನೆ ಎಂದು ಅವರು ಹೇಳಿದರು.
ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ಸಿಗುವುದರ ಬಗ್ಗೆ ಜಿಗಜಿಣಗಿ ಯೋಚಿಸಲಿ ಎಂದು ಸಚಿವ ಎಂ. ಬಿ. ಪಾಟೀಲ ನೀಡಿರುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಎಂ. ಬಿ. ಪಾಟೀಲ ತಮ್ಮ ಪಾರ್ಟಿದು ಹೇಳಿಕೊಳ್ಳಲಿ. ನಮ್ಮ ಪಾರ್ಟಿದು ಹೇಳೋಕೆ ಅವತು ಯಾರು? ನಮ್ಮ ಪಾರ್ಟಿ ಇದೆ. ಅಧ್ಯಕ್ಷರಿದ್ದಾರೆ. ನಮಗೆ ಟಿಕೆಟ್ ಕೊಡುತ್ತಾರೆ ಎಂಬ ಭರವಸೆ ನನಗಿದೆ. ಎಂ. ಬಿ. ಪಾಟೀಲರು ಏನು ಬಿಜೆಪಿ ಪಕ್ಷದಲ್ಲಿದ್ದಾರೆಯೇ?
ಬಿಜೆಪಿಗೆ ಬಾ ಎಂದು ಹೇಳಲಿ ಆಗ ನಿಜ ಅಂತೀನಿ ಎಂದು ಅವರು ಹೇಳಿದರು.
ಎಂ. ಬಿ. ಪಾಟೀಲ ಅವರಿಗೆ ಬಿಜೆಪಿಗೆ ಆಹ್ವಾನ ಕೊಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಂಸದರು, ನಾವ್ಯಾಕೆ ಆಹ್ವಾನ ಕೊಡಬೇಕು? ಬರುವ ಇಚ್ಛೆ ಇದ್ದರೆ ಬರಲಿ. ಬಿಡುವ ಇಚ್ಛೆ ಇದ್ದರೆ ಬಿಡಲಿ. ಬಿಜೆಪಿಯಲ್ಲಿ ಏನು ಕಡಿಮೆ ಇಲ್ಲ ಎಂದು ಸಂಸದರು ಹೇಳಿದರು.
ಕಳೆದ ಒಂಬತ್ತು ವರ್ಷಗಳ ಅವಧಿಯಲ್ಲಿ ಬಿಜೆಪಿ ನೇತೃತ್ವದ ಸರಕಾರ ವಿಜಯಪುರ ಜಿಲ್ಲೆಯ ಕುಡಿಯುವ ನೀರಿಗೆ ಆದ್ಯತೆ ನೀಡಿದ್ದು, ರೂ. 11050.50 ಕೋ. ಅನುದಾನ ಖರ್ಚು ಮಾಡಲಾಗಿದೆ. ವಿಜಯಪುರ ಜಿಲ್ಲೆಗೆ ಸಂಬಂಧಿಸಿದಂತೆ ರೈಲ್ವೆ ಜಾಲ ವಿಸ್ತರಣೆ, ರಸ್ತೆ ಸಂಪರ್ಕ ಸೇರಿದಂತೆ ಅನೇಕ ಭೌತಿಕ ಕಾಮಗಾರಿಗೆ ಆದ್ಯತೆ ನೀಡಿದಂತೆ ಪ್ರತಿಯೊಬ್ಬರಿಗೂ ಶುದ್ಧವಾದ ಕುಡಿಯುವ ನೀರು ಒದಗಿಸುವ ಸಂಕಲ್ಪವನ್ನು ಸಾಕಾರಗೊಳಿಸಲಾಗಿದೆ. ಕೇಂದ್ರ ಪುರಸ್ಕೃತ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನವನ್ನು ಸದ್ಭಳಕೆ ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಅಮೃತ ಯೋಜನೆಯಡಿ ವಿಜಯಪುರ ನಗರದ ನೀರು ಪೂರೈಕೆಗಾಗಿ ರೂ. 195.35 ಕೋ. ಅನುದಾನ ನೀಡಲಾಗಿದೆ. ಅದೇ ರೀತಿ ವಿಜಯಪುರ ನಗರದ ಆರು ಉದ್ಯಾನವನಗಳ ನಿರ್ಮಾಣಕ್ಕಾಗಿಯೂ ಈ ಯೋಜನೆಯಡಿಯಲ್ಲಿ ರೂ. 4 ಕೋ. ಅನುದಾನ ಒದಗಿಸಲಾಗಿದೆ. ಗ್ರಾಮೀಣ ಕುಡಿಯುವ ನೀರಿಗಾಗಿ ಜಲ ಜೀವನ್ ಮಿಷನ್ ಅಡಿಯಲ್ಲಿ ಭೌತಿಕವಾಗಿ 1016 ನಳಗಳ ಜೋಡಣೆಗಾಗಿ ರೂ. 406.25 ಕೋ. ಖರ್ಚು ಮಾಡಲಾಗಿದೆ. ಬಹುಹಳ್ಳಿ ಯೋಜನೆಯಡಿ ಇಂಡಿ ತಾಲೂಕಿನ 76 ಗ್ರಾಮಗಳಲ್ಲಿ ರೂ. 110 ಕೋ. ಅನುದಾನ ಖರ್ಚು ಮಾಡಲಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಮಾಹಿತಿ ನೀಡಿದರು.
ನೀರಿಗೆ ಕೇಂದ್ರ ಸರಕಾರ ಪ್ರಥಮ ಆದ್ಯತೆ ನೀಡುತ್ತಿದೆ. ಈ ಹಿಂದಿನ ಯುಪಿಎ ಸರಕಾರ ಜಲಶಕ್ತಿ ಮಂತ್ರಾಯಕ್ಕೆ ರೂ. 15265 ಕೋ. ಹಣ ಖರ್ಚು ಮಾಡಿದ್ದರೆ, ಈಗಿನ ಎನ್‌ಡಿಎ ಸರಕಾರ ಕೇವಲ ಒಂದೇ ವರ್ಷ ಅವಧಿಯಲ್ಲಿ ರೂ. 97278 ಕೋ. ಅಂದರೆ ಶೇ. 537.26 ಕ್ಕಿಂತ ಹೆಚ್ಚು ಅನುದಾನವನ್ನು ಖರ್ಚು ಮಾಡಿದೆ ಎಂದು ಅವರು ತಿಳಿಸಿದರು.
ಗಂಗಾ ನದಿ ಸ್ವಚ್ಛತೆಗಾಗಿ ಯುಪಿಎ ಸರಕಾರ ರೂ. 938.57 ಕೋ. ಖರ್ಚು ಮಾಡಿದರೆ, ಎನ್‌ಡಿಎ ಸರಕಾರ ಕಳೆದ 2022ರ ಡಿಸೆಂಬರ್ ತಿಂಗಳವರೆಗೆ ರೂ. 32912.40 ಕೋ. ಖರ್ಚು ಮಾಡಿದೆ ಎಂದು ಅವರು ತಿಳಿಸಿದರು.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಫೌಂಡೇಷನ್ ಹಾಕಿದ್ದು ನಮ್ಮ ಸರಕಾರ. ಅದಕ್ಕೆ ಅನುದಾನ ಕೊಟ್ಟಿದ್ದು ನಮ್ಮ ಬಿಜೆಪಿ ಸರಕಾರ. ಹಾಗಿದ್ದರೆ ಈ ಹಿಂದೆ ಸಿದ್ಧರಾಮಯ್ಯ ಅವರ ಸರಕಾರ ಅವಧಿಯಲ್ಲಿ ಏಕೆ ವಿಮಾನ ನಿಲ್ದಾಣ ಪೂರ್ಣ ಮಾಡಲಿಲ್ಲ ಎಂದು ಸಂಸದರು ಇದೇ ವೇಳೆ ಪ್ರಶ್ನಿಸಿದರು.
ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಸಂಪೂರ್ಣ ಪ್ರಗತಿಯತ್ತ ಸಾಗಿರುವುದು ಸಂತೋಷದ ಸಂಗತಿ. ಈ ವಿಮಾನ ನಿಲ್ದಾಣಕ್ಕೆ ನಾನು ಅವಿರತವಾಗಿ ಶ್ರಮಿಸಿದ್ದೇನೆ. ಶೀಘ್ರದಲ್ಲಿಯೇ ವಿಮಾನಯಾನ ಪ್ರಾರಂಭ ಮಾಡುವ ನಿಟ್ಟಿನಲ್ಲಿ ನಾನೂ ಸಹ ವೈಯುಕ್ತಿಕವಾಗಿ ಸರಕಾರದ ಮೇಲೆ ಒತ್ತಡ ಹೇರುತ್ತೇನೆ ಎಂದು ಅವರು ತಿಳಿಸಿದರು.
ಉದ್ದೇಶಿತ ವಿಮಾನ ನಿಲ್ದಾಣಕ್ಕೆ ರೂ. 347.92 ಕೋ. ಹಣ ಮಂಜೂರಾಗಿದ್ದು ಅದರಲ್ಲಿ ರೂ. 253 ಕೋ. ಖರ್ಚಾಗಿದೆ. ಈಗಾಗಲೇ ಟ್ಯಾಕ್ಸಿ ವೇ, ರನ್-ವೇ, ಐಸೋಲೇಷನ್ ಬೇ, ಒಳ ರಸ್ತೆ ಸಂಪರ್ಕ, ಆಂತರಿಕ ರಸ್ತೆ ಹಾಗೂ ಟರ್ಮಿನಲ್ ಕಾಮಗಾರಿ ಪ್ರಗತಿಯಲ್ಲಿದೆ. ಫೆಬ್ರವರಿ ತಿಂಗಳಲ್ಲಿ ಗಗನಯಾನ ಆರಂಭವಾಗಲಿ ಎಂಬುದು ನನ್ನ ಆಶಯ ಸಹ ಹೌದು. ಕ್ರೆಡಿಟ್‌ಗಿಂತಲೂ ಜನರಿಗೆ ಒಳ್ಳೆಯದಾದರೆ ಸಾಕು ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ ಉಪಸ್ಥಿತರಿದ್ದರು.