ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಕಲಿಸಬೇಕು- ಶ್ರೀ ಸೋಮನಾಥ ಶಿವಾಚಾರ್ಯ

ವಿಜಯಪುರ: ಮಕ್ಕಳಿಗೆ ಶಿಕ್ಷಣದ ಮೌಲ್ಯಯುತ ಶಿಕ್ಷಣ ನೀಡುವುದು ಅಗತ್ಯವಾಗಿದೆ ಎಂದು ಕನ್ನೂರ ಶ್ರೀ ಮದ್ ರಂಭಾಪುರಿ ಶಾಖಾ ಗುರುಮಠದ ಸೋಮನಾಥ ಶಿವಾಚಾರ್ಯ ಹೇಳಿದ್ದಾರೆ.

ನಗರದ ಸಂಗನಬಸವ ಸಮುದಾಯ ಭವನದಲ್ಲಿ ಜಿ. ಪಂ, ತಾ. ಪಂ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ವಿಜಯಪುರ ಗ್ರಾಮೀಣ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಂಯುಕ್ತಾಶ್ರಯದಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆ ಅಂಗವಾಗಿ ನಡೆದ ಶಿಕ್ಷಕರ ದಿನೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಕಲ್ಲಿನ ದೇವರ ನಿರ್ಮಾಣಕ್ಕಿಂತ ಮಕ್ಕಳಿಗೆ ಶಿಕ್ಷಣ ನೀಡುವ ಜೀವಂತ ದೇವಾಲಯ ಶಾಲೆ ನಿರ್ಮಿಸಬೇಕು. ನೂರು ದೇವಾಲಯ ನಿರ್ಮಾಣಕ್ಕಿಂತ ಒಂದು ಶಾಲೆ ಆರಂಭಿಸುವುದು ಉತ್ತಮ. ಶಿಕ್ಷಣಕ್ಕೆ ಮಹತ್ವ ನೀಡಿದಷ್ಟು ಸಂಸ್ಕೃತಿಗೂ ಮಹತ್ವ ಕೊಡಬೇಕು. ಶಿಕ್ಷಣ ವ್ಯಾಪಾರಿಕರಣ ಮಾಡದೇ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡಬೇಕು ಎಂದು ಹೇಳಿದರು.

ವಿಜಯಪುರ ನಗರದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕನ್ನುರಿನ ಶ್ರೀ ಮದ್ ರಂಭಾಪುರಿ ಶಾಖಾ ಗುರುಮಠದ ಸೋಮನಾಥ ಶಿವಾಚಾರ್ಯರು ಮಾತನಾಡಿದರು

ನಾಗಠಾಣ ಕಾಂಗ್ರೆಸ್ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಮಾತನಾಡಿ, ಮಾತೃ, ಗುರು, ಪಿತೃರನ್ನು ದೇವರೆಂದು ಕಾಣುವುದು ನಮ್ಮ ಸಂಪ್ರದಾಯವಾಗಿದೆ. ಅಂಧಕಾರದಿಂದ ಬೆಳಕಿನೆಡೆಗೆ ಒಯ್ಯುವವರು ಗುರುಗಳು. ಗುರುಗಳ ಋಣ ತೀರಿಸಲಾಗುವದಿಲ್ಲ. ವ್ಯಕ್ತಿಯ ವಿಕಸನದಲ್ಲಿ ಗುರುವಿನ ಪಾತ್ರ ಮಹತ್ವದ್ದಾಗಿದೆ. ದೇಶದ ಉನ್ನತ ಹುದ್ದೆ ಹೊಂದಿದರೂ ಗುರುವನ್ನು ಮರೆಯಬಾರದು. ಒಬ್ಬ ಗುರು ದಾರಿ ತಪ್ಪಿದರೆ ಇಡೀ ಸಮಾಜ ನಾಶವಾಗುತ್ತದೆ‌. ಸಮಾಜ ನಿರ್ಮಾಣದಲ್ಲಿ ಗುರುವಿನ ಪಾತ್ರ ಅನನ್ಯವಾಗಿದೆ ಎಂದು ಹೇಳಿದರು.

ತಿಕೋಟಾ ತಾ. ಪಂ. ಕಾರ್ಯ ನಿರ್ವಾಹಣಾಧಿಕಾರಿ ಬಸವರಾಜ ಐನಾಪುರ ಮಾತನಾಡಿ, ಜಗತ್ತಿನ ಪ್ರತಿಯೊಬ್ಬ ಸಾಧಕನ ಹಿಂದೆ ಒಬ್ಬ ಗುರುವಿನ ಶಕ್ತಿ ಇರುತ್ತದೆ. ಸಾಧಕರ ಸಾಧನೆಯಲ್ಲಿ ಗುರುಗಳ ಸ್ಮರಣೆ ಇದೆ‌. ಮಕ್ಕಳಿಗೆ ಅಂಕ ಗಳಿಸುವ ಹುಚ್ಚು ಹಚ್ಚಿಸಿದ್ದೇವೆ ಹೊರತು ಮೌಲ್ಯಯುತ ಶಿಕ್ಷಣ ಕೊಡಲಾಗುತ್ತಿಲ್ಲ. ಉತ್ತಮ ಸಮಾಜ ನಿರ್ಮಾಣದ ಮೌಲ್ಯ ಕಲಿಸುವ ಮೂಲಕ ಮಕ್ಕಳ ಪ್ರಗತಿಗೆ ಶ್ರಮಿಸಬೇಕು ಎಂದು ಹೇಳಿದರು.

ಡಿಡಿಪಿಐ ಎನ್. ಎಚ್. ನಾಗೂರ ಮಾತನಾಡಿ, ಗುರುವಿಲ್ಲದೇ ಮುಕ್ತಿ ಇಲ್ಲ. ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗೆ, ಉತ್ತಮ ನಾಗರಿಕರ ತಯಾರಿಯಲ್ಲಿ ಶಿಕ್ಷಕರ ಪಾತ್ರ ಮುಖ್ಯವಾಗಿದೆ. ನಿಷ್ಠೆ, ಪ್ರಾಮಾಣಿಕತೆ ಮನೋಭಾವ ಹೊಂದಿದ ಶಿಕ್ಷಕರ ಹುದ್ದೆ ಎಲ್ಲಕ್ಕಿಂತ ಮಿಗಿಲಾದುದು ಎಂದು ಹೇಳಿದರು.

ತಂದೆ-ತಾಯಿ ಮಗುವಿಗೆ ಜನ್ಮ ನೀಡಿದರೆ ಗುರು ಜ್ಞಾನ ನೀಡುತ್ತಾನೆ. ಪ್ರತಿಯೊಬ್ಬರಿಗೂ ವೃತ್ತಿ ಗೌರವ ಇರಬೇಕು. ಗುರು ಮಗುವಿಗೆ ಉತ್ತಮ ಶಿಕ್ಷಣವನ್ನು ನೀಡಬೇಕು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಜಯಪುರ ಗ್ರಾಮೀಣ ಬಿಇಓ ಪ್ರಮೋದಿನಿ ಬಳೋಲಮಟ್ಟಿ, ಪುಷ್ಪಾ ಗಚ್ಚಿನಮಠ, ತಾ. ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೆ. ಹೊಂಗಯ್ಯಾ, ಬಸವರಾಜ ಐನಾಪುರ, ಜೆ. ಎಸ್. ಪಠಾಣ, ತಹಸೀಲ್ದಾರ ಕವಿತಾ ಕಲ್ಯಾಣಪ್ಪಗೋಳ, ಪ್ರಶಾಂತ ಚನಗೊಂಡ, ಸಂತೋಷ ಮ್ಯಾಗೇರಿ, ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಶಿವರಾಜ ಬಿರಾದಾರ, ವಸಂತ ನಾಯಕ, ಮಲ್ಲನಗೌಡ ಹಡಲಗೇರಿ, ಎಸ್. ಆರ್. ದೇಶಪಾಂಡೆ, ಆರ್. ಎಚ್. ಪುರೋಹಿತ, ಹಣಮಂತ ಕುಡಚಿ, ಎ. ಐ. ಜಾಧವ, ಬಿ. ಎಸ್.‌ ಮಠ, ಝಡ್. ಐ. ಇಂಡಿಕಾರ, ಎ. ಬಿ‌. ಧಡಕೆ, ಎಚ್. ಎಂ. ಚಿತ್ತರಗಿ, ವಿ. ಎಸ್. ಕಳಸಗೊಂಡ ಮುಂತಾದವರು ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕರಿಗೆ ಹಾಗೂ ವ್ರತ್ತಿಯಲ್ಲಿ ನಿಧನ ಹೊಂದಿದ ಶಿಕ್ಷಕರ ಕುಟುಂಬ ಸದಸ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಸಾವಿತ್ರಿಬಾಯಿ ಪುಲೆ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಸಲ್ಲಿಸಿದರು.

ಬಿಇಓ ಪ್ರಮೋದಿನಿ ಬಳೋಲಮಟ್ಟಿ ಸ್ವಾಗತಿಸಿದರು. ಶಿಲ್ಪಾ ಬಾಸ್ಮೆ ಮತ್ತು ಶ್ರೀಕಾಂತ ಬಿರಾದಾರ‌ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ಎಸ್. ಡಿ. ಮೊಸಲಗಿ ವಂದಿಸಿದರು.

Leave a Reply

ಹೊಸ ಪೋಸ್ಟ್‌