ವಿಜಯಪುರ: ಅತೀ ಸಣ್ಣ ಕೈಗಾರಿಕೆಗಳು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯಮಗಳನ್ನು ಸ್ಥಾಪಿಸಿದರೆ, ಅವಶ್ಯಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದ್ದಾರೆ.
ನಗರದ ಸುಕೂನ ಕಾಲನಿ ಬಳಿಯ ಸ್ಪೂರ್ತಿ ರೆಸಾರ್ಟ ಮತ್ತು ಕ್ಲಬ್ ಹೌಸನಲ್ಲಿ ಸಿಡ್ಬಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಸಿಡ್ಬಿ ಕಾಶಿಯಾ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಸಾಕಷ್ಟು ಅವಕಾಶಗಳಿದ್ದು, ಉದ್ದಿಮೆದಾರರು ಉದ್ದಿಮೆಗಳನ್ನು ಸ್ಥಾಪಿಸಲು ಮುಂದಾಗಬೇಕು. ವಿಜಯಪುರ ಜಿಲ್ಲೆಯು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಈ ನಿಟ್ಟಿನಲ್ಲಿ ಸಣ್ಣ ಮತ್ತು ಅತೀ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಇರುವ ಹಲವು ತೊಂದರೆಗಳನ್ನು ನಿವಾರಿಸಲು ಅನೇಕ ಮಾಹಿತಿಗಳನ್ನು ನೀಡಲಾಗುತ್ತಿದೆ. ರಾಷ್ಟ್ರ ಹಾಗೂ ರಾಜ್ಯದಲ್ಲಿ ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚು ನೆರವು ಒದಗಿಸಲಾಗುತ್ತಿದೆ. ಅದರಂತೆ ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಿಗೂ ಹಣಕಾಸಿನ ಹಾಗೂ ಇತರೆ ಕೊರತೆ ಇರುವುದರಿಂದ ಹಂತ-ಹಂತವಾಗಿ ಇಂಥ ಕೈಗಾರಿಕೆಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಬ್ಯಾಂಕುಗಳೂ ಕೂಡ ಸಣ್ಣ ಕೈಗಾರಿಕೋದ್ಯಮಿಗಳಿಗೆ ವಿಳಂಬ ದೋರಣೆಗೆ ಅವಕಾಶವನ್ನು ನೀಡದೆ ಆದ್ಯತೆ ಮೇಲೆ ಅವರಿಗೆ ಹಣಕಾಸಿನ ನೆರವು ಒದಗಿಸುವುದರಿಂದ ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಿ, ಉದ್ಯೋಗ ಸೃಜನೆ ಜನರು ವಲಸೆ ಹೋಗುವುದನ್ನು ತಡೆಗಟ್ಟಬಹುದು ಜಿಲ್ಲೆಯ ಅಭಿವೃದ್ಧಿಗೂ ನೆರವಾಗಲಿದೆ ಎಂದು ಅವರು ಹೇಳಿದರು.
ಬೆಂಗಳೂರಿನ ಪ್ರಾದೇಶಿಕ ಕಚೇರಿ ಸಿಡ್ಬಿಯ ಉಪ ಪ್ರಧಾನ ವ್ಯವಸ್ಥಾಪಕ ಬಿ.ಉಲಗಿಯನ್ ಮಾತನಾಡಿ, ಸಣ್ಣ ಅಸತೀ ಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕ್‌ಗಳಿAದ ಯಾವ ರೀತಿ ನೆರವು ಹನಕಾಸಿನ ನೆರವು ಪಡೆದುಕೊಳ್ಳಬೇಕು, ತರಬೇತಿ ಪಡೆಯುವುದು ಹೇಗೆ ಎಂಬುದರ ಕುರಿತು ವಿವರಣೆ ನೀಡಿದರು.
ಆಹಾರ ಉತ್ಪಾದನೆ ಹಾಗೂ ಸಂಸ್ಕರಣ ಘಟಕದ ಸೀನಿಯರ್ ಟೆಕ್ನಿಕಲ್ ಆಫೀಸರ್ ರಾಘವೇಂದ್ರ ಮಾತನಾಡಿ, ರಾಜ್ಯದ ತುಮಕೂರಿನಲ್ಲಿ 110 ಎಕರೆ ಪ್ರದೇಶದಲ್ಲಿ ಪುಡ್ ಪಾರ್ಕ್ನ್ನು ನಿರ್ಮಿಸಲಾಗಿದ್ದು, ಒಂದೇ ಸೂರಿನಡಿ ಸಣ್ಣ ಉದ್ದಿಮೆಗಳನ್ನು ಪ್ರೊತ್ಸಾಹಿಸಲು ಸ್ಥಾಪಿಸಲು ಸರ್ಕಾರದಿಂದ ಸಿಗುವಂತಹ ಎಲ್ಲ ಸೌಲಭ್ಯಗಳ ಕುರಿತು ನುರಿತ ಅಧಿಕಾರಿಗಳಿಂದ ಉಚಿತ ತರಬೇತಿಗಳನ್ನು ನೀಡಲಾಗುತ್ತಿದ್ದು, ಉದ್ದಿಮೆದಾರರ ಹೆಚ್ಚು ಉತ್ಪಾದನೆ ಕಡೆಗೆ ಹೆಚ್ಚಿನ ಗಮನಹರಿಸಲು ಇದು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಉದ್ದಿಮೆದಾರರಾದ ಎಸ್. ವಿ. ಪಾಟೀಲ ಮಾತನಾಡಿ, ನಗರದಲ್ಲಿ ಔದ್ಯೋಗಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರಕಾರದಿಂದ ಸಹಾಯ ಸಹಕಾರ ನೀಡಬೇಕು. ಅದರೊಂದಿಗೆ ಮೂಲಭೂತ ಸೌಕರ್ಯಗಳನ್ನೂ ಕೂಡ ಒದಗಿಸುವಂತಾಗಬೇಕು. ಸಾಲ ಸೌಲಭ್ಯ ಸರಳೀಕರಣಗೊಳಿಸಬೇಕು. ಪ್ರತಿ ತಾಲೂಕಿನಲ್ಲಿ 50 ರಿಂದ 100 ಎಕರೆ ಭೂಮಿಯಲ್ಲಿ ಉದ್ದಿಮೆಗಳನ್ನು ಸ್ಥಾಪಿಸಲು ಮೀಸಲಿಡಬೇಕು. ಉದ್ದಿಮೆಗಳು ಹೆಚ್ಚು ಬಂದಲ್ಲಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗಲಿವೆ. ಇದರಿಂದ ಜಿಲ್ಲೆ ಅಭಿವೃದ್ದಿ ಹೊಂದಬಲ್ಲದು ಎಂದು ಅವರು ಹೇಳಿದರು.
ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತ ನಿಂಗಣ್ಣವರ ತೆರಿಗೆಗಳನ್ನು ಬಳಸುವ ಕುರಿತು ಮಾಹಿತಿ ನೀಡಿದರು. ಕಾಸಿಯಾ ಅಧ್ಯಕ್ಷ ಸಿಎ ಶಶಿಧರ್ ಶೆಟ್ಟಿ, ಸ್ವಾಗತಿಸಿದರು.
ಈ ಸಭೆಯಲ್ಲಿ ಬೆಂಗಳೂರು ಪ್ರಾದೇಶಿಕ ಕಚೇರಿ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ, ಕಾಸಿಯಾದ ಜಿಎಸ್ಟಿ ಪ್ಯಾನಲ್ ಚೇರ್ಮನ್ ಉಮಾಶಂಕರ್, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಉಪಾಧ್ಯಕ್ಷರಾದ ಎಂ. ಜಿ. ರಾಜಗೋಪಾಲ, ಗ್ರಾಮೀಣ ಜಂಟಿ ಕಾರ್ಯದರ್ಶಿ ಅರುಣ ಪಡಿಯಾರ, ಎನ್. ಖಜಾಂಚಿ ಎಚ್. ಕೆ. ಮಲ್ಲೇಶಗೌಡ, ನಿಂಗಣ್ಣ ಎಸ್. ಬಿರಾದಾರ, ಕಿರಣ ಕುಮಾರ, ಗಂಗಾಧರ ಸಂಬಣ್ಣಿ ಸೇರಿದಂತೆ ನಾನಾ ಉದ್ಯಮಿಗಳು ಮತ್ತು ಮುಖಂಡರು ಉಪಸ್ಥಿತರಿದ್ದರು.