ಜ್ಞಾನಯೋಗಾಶ್ರಮದ ಮಹಿಳಾ ಭಕ್ತರ ನಿರ್ದಾರ- ದೇಹದಾನ, ನೇತ್ರದಾನಕ್ಕೆ ನಿರ್ಧರಿಸಿದ ತಾಯಿ, ಮಗಳು ಸೇರಿ 5 ಜನ ಮಹಿಳೆಯರು

ವಿಜಯಪುರ: ತಾಯಿ ಮತ್ತು ಮಗಳು ಸೇರಿದಂತೆ ಒಟ್ಟು 5 ಜನ ಮಹಿಳೆಯರು ಬಿ.ಎಲ್.ಡಿ.ಇ ಸಂಸ್ಥೆಯ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯಕ್ಕೆ ದೇಹದಾನ ಮತ್ತು ನೇತ್ರದಾನ ಮಾಡುವುದಾಗಿ ಒಪ್ಪಿಗೆ ಪತ್ರ ನೀಡುವ ಮೂಲಕ ಮಾದರಿ ನಡೆ ಅನುಸರಿಸಿದ್ದಾರೆ.

ನಗರದ ಜ್ಞಾನಯೋಗಾಶ್ರಮದ ಬಳಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಅವರ ಮಾರ್ಗದರ್ಶನದಲ್ಲಿ ಸಭೆ ನಡೆಯಿತು. ಈ ಸಭೆಯಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಅಕ್ಕನ ಬಳಗದ ಸದಸ್ಯರಾಗಿರುವ ಮತ್ತು ವಿಶ್ವೇಶ್ವರ ನಗರದ ನಿವಾಸಿಗಳಾದ ಒಂದೇ ಕುಟುಂಬದ ತಾಯಿ ಲೀಲಾವತಿ ಚ. ಸಮಗೊಂಡ ಮತ್ತು ಅವರ ಮಗಳಾದ ಜಯಶ್ರೀ ಗು. ಗೊಳಸಂಗಿ, ಬಳಗದ ಸದಸ್ಯರಾದ ಮಹಾದೇವಿ ಬಿರಾದಾರ, ಪ್ರಜಾವತಿ ಮ. ಪೂಜಾರಿ ಹಾಗೂ ಪಾರ್ವತಿ ಮ. ಮರನೂರ ಅವರು ದೇಹದಾನ ಮತ್ತು ನೇತ್ರದಾನ ಮಾಡಲು ಒಪ್ಪಿಗೆ ಸೂಚಿಸಿದರು. ಅಲ್ಲದೇ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಹಾಗೂ ಅಂಗ ರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರುದ್ರಗೌಡ ಎಸ್. ಬುಲಗೌಡ ಅವರಿಗೆ ದೇಹದಾನ ಮತ್ತು ನೇತ್ರದಾನ ಮಾಡುವ ಒಪ್ಪಿಗೆ ಪತ್ರ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ದೇಹದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನವಾಗಿದೆ. ಇದರಿಂದ ನಾನಾ ಅಂಗಾಂಗಳ ವೈಫಲ್ಯದಿಂದ ಬಳಲುವ ರೋಗಿಗಳಿಗೆ ಪುರ್ನಜನ್ಮ ನೀಡಬಹುದಾಗಿದೆ. ನೇತ್ರದಾನದಿಂದ ಅಂಧರ ಬಾಳಿನಲ್ಲಿ ಬೆಳಕು ಮೂಡಿಸಬಹುದಾಗಿದೆ ಎಂದು ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ. ಅರವಿಂದ ಪಾಟೀಲ ಮಾತನಾಡಿ, ತಾವು ದೇಹದಾನ ಹಾಗೂ ನೇತ್ರದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಿರಿ ಎಂದು ನೇತ್ರದಾನ ಹಾಗೂ ಅಂಗದಾನ ಮಾಡಿದ ಮಹಿಳೆಯರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.

ಬಿ.ಎಲ್.ಡಿ.ಇ ಸಂಸ್ಥೆಯ ನಿರ್ದೇಶಕ ಸಂಗು ಸಜ್ಜನ ಮಾತನಾಡಿ, ದೇಹದಾನ ಮತ್ತು ನೇತ್ರದಾನಗಳ ಮಹತ್ವ ತಿಳಿಸಿಕೊಟ್ಟರು.

ಬಿ.ಎಲ್.ಡಿ.ಇ. ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ. ಬಿ.ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರದ ಅಂಗ ರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ರುದ್ರಗೌಡ ಎಸ್. ಬುಲಗೌಡ ಮಾತನಾಡಿ, 1992 ರಂದು ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಅಮೃತ ಹಸ್ತದಿಂದ ಕಾಲೇಜಿನ ದೇಹದಾನ ವಿಭಾಗಕ್ಕೆ ಚಾಲನೆ ನೀಡಿದ್ದಾರೆ. ಇಲ್ಲಿಯವರೆಗೆ 748 ಜನರು ದೇಹದಾನ ಮಾಡುವ ಕುರಿತು ನೊಂದಣಿ ಮಾಡಿದ್ದು, ಈಗಾಗಲೇ 117 ಜನರ ದೇಹವನ್ನು ಸ್ವೀಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ವೈಷ್ಣವಿ ಪಾಟೀಲ, ಅಂಗ ರಚನಾಶಾಸ್ತ್ರ ವಿಭಾಗದ ಸಿಬ್ಬಂದಿ ಆರ್. ಪಿ. ಮೆಳ್ಳಿ ಉಪಸ್ಥಿತರಿದ್ದರು.

ದೇಹದಾನ ಮತ್ತು ನೇತ್ರದಾನ ಮಾಡಲು ಇಚ್ಛಿಸುವವರಿಗೆ ಮಾಹಿತಿ

ದೇಹದಾನ ಮಾಡಲು ಇಚ್ಛಿಸುವವರು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ, ಡಾ. ರುದ್ರಗೌಡ ಎಸ್. ಬುಲಗೌಡ, ಮುಖ್ಯಸ್ಥರು, ಅಂಗ ರಚನಾಶಾಸ್ತ್ರ ವಿಭಾಗ, ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ, ವಿಜಯಪುರ. ದೂರವಾಣಿ ಸಂಖ್ಯೆ- 08352-262770, ವಿಸ್ತರಣೆ- 2211, ಮೊ.ಸಂ: 9845130231 ಇವರನ್ನು ಸಂಪರ್ಕಿಸಬಹುದಾಗಿದೆ.

ನೇತ್ರದಾನ ಮಾಡಲು ಇಚ್ಛಿಸುವವರು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ, ಡಾ. ಸುನೀಲ ಬಿರಾದಾರ, ನೇತ್ರ ಚಿಕಿತ್ಸಾ ವಿಭಾಗ, ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋದನಾ ಕೇಂದ್ರ, ವಿಜಯಪುರ. ದೂರವಾಣಿ ಸಂಖ್ಯೆ- 08352-262770, ವಿಸ್ತರಣೆ- 2027, ಮೊ.ಸಂ: 9844067130 ಇವರನ್ನು ಸಂಪರ್ಕಿಸಬಹುದಾಗಿದೆ.

Leave a Reply

ಹೊಸ ಪೋಸ್ಟ್‌