ಬಸವ ನಾಡಿನಲ್ಲಿದೆ ತಿರುಪತಿ ವೆಂಕಟೇಶ್ವರನ ದೇವಸ್ಥಾನ- ಇಲ್ಲಿ ವರ್ಷಕ್ಕೊಂದು ಬಾರಿ ಮಾತ್ರ ಸಿಗುತ್ತೆ ಭಕ್ತರಿಗೆ ದರ್ಶನ

ವಿಜಯಪುರ: ತಿಮ್ಮಪ್ಪ ಎಂದರೆ ಸಾಕು ಎಲ್ಲರಿಗೆ ತಟ್ಟನೆ ನೆನಪಾಗುವುದು ತಿರುಪತಿ ತಿಮ್ಮಪ್ಪನ ದೇವಸ್ಥಾನ.  ಆದರೆ, ಗ್ರಾಮಸ್ಥರು ನಿರ್ಮಿಸಿರುವ ವೆಂಕಟೇಶ್ವರನ ದೇವಸ್ಥಾನವೊಂದು ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿದೆ. 

ವರ್ಷಕ್ಕೊಂದು ಬಾರಿ ಭಕ್ತರ ದರ್ಶನಕ್ಕಾಗಿ ಬಾಗಿಲು ತೆರೆಯುವುದು ಇಲ್ಲಿನ ಸಂಪ್ರದಾಯವಾಗಿದ್ದು, ಭಕ್ತರು ಕೂಡ ಈ ಒಂದು ಶುಭ ದಿನಕ್ಕಾಗಿ ವರ್ಷವಿಡೀ ಕಾಯುವುದು ಗಮನಾರ್ಹವಾಗಿದೆ.

ಹೀಗೆ ಜಿಟಿಜಿಟಿ ಮಳೆಯ ನಡುವೆ ಕೈಯ್ಯಲ್ಲೊಂದು ಛತ್ರಿ, ತಲೆಯ ಮೇಲೋಂದು ಬುತ್ತಿಯ ಬುಟ್ಟಿ ಇಟ್ಟುಕೊಂಡು ಈ ಮಹಿಳೆಯರು ಹೊರಿರುವುದು ಇದೇ ತಿಮ್ಮಪ್ಪ ಅರ್ಥಾತ್ ವೆಂಕಟೇಶ್ವರನ ದರ್ಶನಕ್ಕಾಗಿ.  ಸುತ್ತಮುತ್ತ ಹಚ್ಚ ಹಸುರಿನ ವಾತಾರವಣದಲ್ಲಿರುವ ಈ ದೇವಸ್ಥಾನಕ್ಕೆ ಅದರದೇ ಆದ ಐತಿಹ್ಯವಿದೆ.  ಈ ದೇವಸ್ಥಾನ ನಿಡಗುಂದಿ ಸಮೀಪದ ಅಡಕಲ‌್‌ ಗುಂಡಪ್ಪನ‌ ಸನ್ಮಿಧಿಯಲ್ಲಿದೆ.

ವಿಜಯಪುರ ಜಿಲ್ಲೆಯ ತಿಡಗುಂದಿ- ಆಲಮಟ್ಟಿ ಮಧ್ಯದಲ್ಲಿರುವ ತಿರುಪತಿ ವೆಂಕೇಶ್ವರ ದೇವಸ್ಥಾನ

ಈ ದೇವಸ್ಥಾನಕ್ಕೆ ಬರುವ ಭಕ್ತರೆಲ್ಲರೂ ಇದೇ ನಿಡಗುಂಡಿ ತಾಲೂಕಿನ ಸುಕ್ಷೇತ್ರ ಯಲಗೂರು ಗ್ರಾಮಸ್ಥರಾಗಿರುವುದು ಗಮನಾರ್ಹ.  ಇದೇ ಗ್ರಾಮಸ್ಥರು ಇಲ್ಲಿಗೆ ಬರಲೂ ಕೂಡ ಒಂದು ಪ್ರಮಉಖ ಕಾರಣವಿದೆ.  ಯಲಗೂರು ಗ್ರಾಮಸ್ಥರು ಹೇಳುವಂತೆ ಈ ಹಿಂದೆ ತಮ್ಮ ಗ್ರಾಮದ ಭಕ್ತರೆಲ್ಲರೂ ಸೇರಿಕೊಂಡು ಪ್ರತಿವರ್ಷ ಪಲ್ಲಕ್ಕಿಯನ್ನು ಹೊತ್ತುಕೊಂಡು ಪಾದಯಾತ್ರೆಯ ಮೂಲಕ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುತ್ತಿದ್ದರು.  ಆದರೆ, ಭಕ್ತರ ಕಷ್ಟವನ್ನ ಮನಗಂಡ ತಿರುಪತಿ ತಿಮ್ಮಪ್ಪ ಸ್ವತಃ ಇನ್ನುಮುಂದೆ ನೀವು ಈ ತಿರುಪತಿ ಕ್ಷೇತ್ರಕ್ಕೆ ಬರವುದು ಬೇಡ.  ನಾನು ಯಲಗೂರೇಶನ ವಾಸಸ್ಥಾನವಾದ ಗುಂಡಿಕೆರೆಯ ಬೆಟ್ಟದಲ್ಲಿ ಬಂದು ನೆಲೆಸುತ್ತೇನೆ ಎಂದು ಕಾರ್ಣಿಕರೊಬ್ಬರ ಕಡೆಯಿಂದ ಹೇಳಿಕೆ ಮೂಲಕ ಸಂದೇಶ ನೀಡಿದದ ನಂತರ ಅಂದಿನಿಂದ‌ ಈ ಭಕ್ತರು ತಿರುಪತಿಗೆ ತೆರಳುವುದನ್ನೆ ಬಿಟ್ಟು ಇಲ್ಲಿರುವ ಬೆಟ್ಟಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ.

ಏಕಶಿಲೆಯಲ್ಲಿರುವ ಮೂರ್ತಿಗಿದೆ ನೂಾರಾರು ವರ್ಷಗಳ ಇತಿಹಾಸ ವರ್ಷಕ್ಕೊಮ್ಮೆ ಭಕ್ತರಿಗಾಗಿ ದೇವರ ದರ್ಶನ

ತಿರುಪತಿ ತಿಮ್ಮಪ್ಪನ ಪ್ರತೀಕವಾಗಿ ಈ ಬೆಟ್ಟದಲ್ಲಿ ಏಕಶಿಲೆಯಲ್ಲಿ ವೆಂಕಟರಮಣ ಮತ್ತು ಲಕ್ಷಅಮಿ ಮೂರ್ತಿಗಳಿದ್ದು, ಇವು ನೂರಾರು ವರ್ಷಗಳಿಂದ ಇಲ್ಲಿ ಸ್ಥಾಪಿತವಾಗಿವೆ ಎನ್ನುತ್ತಾರೆ ಭಕ್ತರು.

ಈ ಭಾಗದಲ್ಲಿ ಅರಣ್ಯ ಪ್ರದೇಶ ಇರುವ ಕಾರಣ ಈ ದೇವಸ್ಥಾನಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ.  ಬೇರೇ ಯಾರೂ ಇತ್ತ ಕಡೆ ಸುಳಿಯುವುದೂ ಇಲ್ಲ.  ಪ್ರತಿ ವರ್ಷ ಶ್ರಾವಣ ಮಾಸದ ಮೂರನೇ ಸೋಮವಾರ ಮಾತ್ರ ಒಂದು ದಿನದ ಮಟ್ಟಿಗೆ ಈ ದೇವಸ್ಥಾನದ ಬಾಗಿಲು ತೆರೆಯುತ್ತದೆ.  ಈ ದಿನ ಮಾತ್ರ ಭಕ್ತರು ನಡೆದುಕೊಂಡು, ಟ್ರ್ಯಾಕ್ಟರ್ ಸೇರಿದಂತೆ ನಾನಾ ವಾಹನಗಳಲ್ಲಿ ಇಲ್ಲಿಗೆ ಬಂದು ದೇವರ ದರ್ಶನ ಪಡೆಯುತ್ತಾರೆ.

ಯಾವುದೇ ಜಾತಿ, ಧರ್ಮ ಹಾಗೂ ಸಂಪ್ರದಾಯ ಭೇದಭಾವವಿಲ್ಲದೆ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.  ಮಹಿಳೆಯರು ತಂತಮ್ಮ ಮನೆಯಲ್ಲಿ ನೈವೇದ್ಯವನ್ನು ತಯಾರಿಸಿಕೊಂಡು ಇಲ್ಲಿಗೆ ತರುತ್ತಾರೆ.  ನಂತರ ಆ ನೈವೇದ್ಯವನ್ನು ದೇವರಿಗೆ ಸಮರ್ಪಿಸುತ್ತಾರೆ.  ಇದು ಇಲ್ಲಿ ತಲೆತಲಾಂತರಗಳಿಂದ ನಡೆದುಕೊಂಡು ಬಂದಿದೆ.  ನೈವೇದ್ಯವನ್ನ ವೆಂಕಟರಮನನಿಗೆ ಅರ್ಪಿಸಿದ ಬಳಿಕ ಎಲ್ಲರೂ ಒಂದೇ ಕಡೆ ಕುಳಿತು ಪ್ರಸಾದ ಸ್ವೀಕರಿಸುವುದು ವಿಶೇಷವಾಗಿದೆ.

ಸೇವಾಕರ್ತರು, ಬಾಬದವರು, ಪೂಜಾರಿಗಳು, ಹರಿದಾಸರು, ಬ್ರಾಹ್ಮಣರು, ಭಜಂತ್ರಿಗಳು ಸೇರಿದಂತೆ ನಾನಾ ಧರ್ಮಿಯ ಜನ ಸೇವೆ ಮಾಡುವವರು ಮತ್ತು ಸಪ್ತಗ್ರಾಮಗಳ ಅಂದರೆ ಏಳು ಗ್ರಾಮಗಳ ಬಾಬು ಹೊಂದಿರುವ ಗೋಪಾಳಕರ ಮನೆತನದವರು ಮಾತ್ರ ಇಲ್ಲಿಗೆ ಬಂದು ಬಿಡದೆ ಪ್ರಸಾದ ಸ್ವೀಕರಿಸುತ್ತಾರೆ.

ಈ ದೇವರಿಗೆ ಯಾವುದೇ ಜಾತಿ ಭೇದವಿಲ್ಲ.  ಬಡವ, ಬಲ್ಲಿದ ಎಂಬ ತಾರತಮ್ಯವಿಲ್ಲ.  .‌ಎಲ್ಲ ಬಾಬುದಾರರು ಹರಿಶಾವಿಗೆಯ ಪ್ರಸಾದ ಸ್ವೀಕರಿಸಲೆಬೇಕು ಎಂಬ ಕಡ್ಡಾಯ ನಿಯಮವಿದೆ.  ಈ ಪ್ರಸಾದವನ್ನ ಗೋಪಾಳದಲ್ಲಿ ತೆಗೆದುಕೊಂಡು ಹೋಗಿ ಉಪವಾಸವನ್ನ ಬಿಡುತ್ತಾರೆ.  ಜೊತೆಗೆ ಈ ಅರಣ್ಯ ಪ್ರದೇಶದಲ್ಲಿ ಬಂದು ಕೆಲ ಕಾಲ ತಿರುಗಾಡಿ ಪ್ರಕೃತಿಯ ಮಡಿಲಲ್ಲಿ ಊಟ ಮಾಡುವ ಮೂಲಕ ಸಂತಸ ಪಡುತ್ತಾರೆ.

Leave a Reply

ಹೊಸ ಪೋಸ್ಟ್‌