ಬಣಜಿಗ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ವಿಜಯಪುರ: ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ, ನಗರ ಮತ್ತು ತಾಲೂಕ ಘಟಕಗಳ ವತಿಯಿಂದ ಪ್ರತಿಭಾ ವಿಧ್ಯಾರ್ಥಿಗಳಿಗೆ  ಹಾಗೂ ನಾನಾ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಗರದ ಎಪಿಎಂಸಿ.ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆಯಿತು.

ಕಾರ್ಯಕರ್ಮ ಉದ್ಘಾಟಿಸಿದ ಶಿರೋಳದ ಶ್ರೀ ಶಂಕರಾರೂಢ ಸ್ವಾಮೀಜಿ ಮಾತನಾಡಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವರಿಂದ ಅವರು ಮತ್ತಷ್ಟು ಸೇವೆ ಮಾಡಲು ಸ್ಪೂರ್ತಿಯಾಗುತ್ತದೆ.  ಇವರು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದು ಶುಭ ಹಾರೈಸಿದರು.

ವಿಜಯಪುರದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ನಡೆಯಿತು

ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಮಾತನಾಡಿ, ಇಂಥ ಸತ್ಕಾರ ಸಮಾರಂಭ ಕಾರ್ಯಕ್ರಮಗಳು ನಡೆಯುವುದರಿಂದ ವಿದ್ಯಾರ್ಥಿಗಳಿಗೆ ಹೊಸ ಹುರುಪು ನೀಡುತ್ತವೆ.  ಶಿಕ್ಷಣ ಅಮೂಲ್ಯವಾಗಿದ್ದು, ಹಣಕ್ಕಿಂತ ಗುಣ ಮತ್ತು ಶಿಕ್ಷಣ ಜೀವನಕ್ಕೆ ಮಾರ್ಗದರ್ಶನ ಮಾಡುತ್ತವೆ.  ಈಗಿನ ವಿದ್ಯಾರ್ಥಿಗಳು ಬಹಳ ಪ್ರತಿಭಾವಂತರಾಗಿದ್ದು, ಅವರಿಗೆ ಪಾಲಕರು ಮತ್ತು ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡಿ ಅವರ ಸರ್ವಾಂಗೀಣ ಅಭಿವೃದ್ಧಿಗೆ ಪ್ರೋತ್ಸಾಹ ನೀಡಬೇಕು ಎಂದು ಕರೆ ನೀಡಿದರು.

ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ರೂಡಗಿ ಮಾತನಾಡಿ, ಸಂಘದ ವತಿಯಿಂದ ಜಿಲ್ಲಾ ಹಾಗೂ ತಾಲೂಕುಗಳಲ್ಲಿ ನಾನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಇದಕ್ಕೆ ಹಿರಿಯರ ಹಾಗೂ ಯುವ ಮಿತ್ರರ ಹೆಚ್ಚಿನ ಸಹಯೋಗ ನೀಡಿದರೆ ಇನ್ನೂ ಹೆಚ್ಚಿಗೆ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು.

ಶ್ರೀ ಸಿದ್ದೇಶ್ವರ ಸಹಕಾರಿ ಬ್ಯಾಂಕಿನ ಉಪಾಧ್ಯಕ್ಷಗಿ ಅವಿರೋಧವಾಗಿ ಆಯ್ಕೆಯಾದ ಸೌಭಾಗ್ಯ ಭೋಗಶೆಟ್ಟಿ ಹಾಗೂ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆಗೆ ನೂತನ ನಿರ್ದೇಶಕ ಗುರುಲಿಂಗಪ್ಪ ಅಂಗಡಿ, ಉನ್ನತ ಶಿಕ್ಷಣ ಪಡೆದ ಸತೀಶ ಸೋಮನಾಳ, ಡಾ.ರಚನಾ ಡೊಳ್ಳಿ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಸಂಘದ ವಿಜಯಪುರ ನಗರ ಘಟಕದ ಅಧ್ಯಕ್ಷ ಸಂಗಪ್ಪ ಎಸ್. ಬಣಜಿಗೇರ ಅಧ್ಯಕ್ಷತೆ ವಹಿಸಿದ್ದರು.  ಶಂಕ್ರಪ್ಪ ಹೊಸೂರ, ವಿವೇಕಾನಂದ ಕೋರಿ, ಮಲ್ಲಮ್ಮ ಜೋಗುರ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಕಿರಣ್ ಪೂಜಾರಿ ಪ್ರಾರ್ಥಿಸಿದರು.  ಆರ್. ಎಸ್. ಪಟ್ಟಣಶೆಟ್ಟಿ ಸ್ವಾಗತಿಸಿದರು. ಉಪನ್ಯಾಸಕ ಅಶೋಕ ಅಂಜಲಿ ಪರಿಚಯಿಸಿದರು.  ನಗರ ಘಟಕದ ಉಪಾಧ್ಯಕ್ಷ ಮೃತ್ಯುಂಜಯ ಶಿರೂರ ಪ್ರಾಸ್ತಾವಿಕವಾಗಿ ಮಾತನಾಡಿದರು.  ಸುಭಾಷ ಕನ್ನೂರ ನಿರೂಪಿಸಿದರು.

ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲೆಯ ನಾನಾನ ಗಣ್ಯ ವ್ಯಾಪಾರಸ್ಥರು, ಸಾಹಿತಿಗಳು, ವಿದ್ಯಾರ್ಥಿಗಳ ಪಾಲಕರು ಮುಂತಾದವರು ಇನ್ನಿತರರು ಉಪಸ್ಥಿತರಿದ್ದರು.

 

Leave a Reply

ಹೊಸ ಪೋಸ್ಟ್‌