ವಿಜಯಪುರ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ- ಅಧಿಕಾರಿಗಳಿಗೆ ಶಾಸಕ ಯತ್ನಾಳ ಸೂಚನೆ

ವಿಜಯಪುರ: ನಗರದಲ್ಲಿ ಯಾವುದೇ ಕಾರಣಕ್ಕೂ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. 

ನಗರದಲ್ಲಿರುವ ಶಾಸಕರ ಸಾರ್ವಜನಿಕ ಜನಸಂಪರ್ಕ ಕಾರ್ಯಾಲಯದಲ್ಲಿ ಮಹಾನಗರ ಪಾಲಿಕೆ ಸದಸ್ಯರು, ಅಧಿಕಾರಿಗಳು, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ, ಕೆಬಿಜೆಎನ್ ಎಲ್ ಅಧಿಕಾರಿಗಳ ಜೊತೆ ಸಭೆ ನಡೆಸಿ ಅವರು ಮಾತನಾಡಿದರು.

ಮುಂಬರುವ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಆಗದಂತೆ ನಗರದಲ್ಲಿರುವ ಕೊಳವೆ ಬಾವಿಗಳ ದುರಸ್ತಿ, ತೆರೆದ ಬಾವಿಗಳ ಸ್ವಚ್ಚತೆ, ಮೋಟರ ಅಳವಡಿಕೆ ಮತ್ತಿತರೆ ಸಮಸ್ಯೆ ಸರಿಪಡಿಸಿಕೊಳ್ಳಬೇಕು.  ರಾತ್ರಿ ವೇಳೆ ಮನೆಗಳಿಗೆ ನೀರು ಬಿಟ್ಟರೆ, ತುಂಬಿಕೊಳ್ಳುವುದು ಕಷ್ಟವಾಗಲಿದೆ.  ಹೀಗಾಗಿ ಜನರಿಗೆ ಅನುಕೂಲವಾಗುವಂತೆ ಮರು ವೇಳಾಪಟ್ಟಿ ಸಿದ್ದಪಡಿಸಬೇಕು.  ವಲಯವಾರು ಶಾಸಕರು, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಒಳಗೊಂಡ ವಾಟ್ಸಪ್ ಗ್ರುಪ್ ರಚಿಸಿ, ಅಲ್ಲಿ ವೇಳಾ ಪಟ್ಟಿ ಮತ್ತು ಸಮಸ್ಯೆ ಗಳ ಕುರಿತಂತೆ ಚರ್ಚಿಸಬೇಕು.  ವಿಳಂಬ ಮಾಡದೆ, ಸಣ್ಣ ಪುಟ್ಟ ಸಮಸ್ಯೆಗಳನ್ನು ತಕ್ಷಣ ಪರಿಹರಿಸಬೇಕು ಎಂದು ಅವರು ಸೂಚನೆ ನೀಡಿದರು.

ನಗರದ ಯಾವ ಭಾಗದಲ್ಲಿ ಓವರ್ ಹೆಡ್ ಟ್ಯಾಂಕ್ ಗಳ ಅವಶ್ಯಕತೆ ಎಂಬುದರ ಕುರಿತಂತೆ ಪ್ರಸ್ತಾವನೆ ಕೊಡಿ.  ತಾಜಬಾವಡಿ ಬಳಿ ನೀರು ಶುದ್ದೀಕರಣ ಘಟಕ ಸ್ಥಾಪಿಸಲು ಟೆಂಡರ್ ಕರೆಯಿರಿ.  ಇಲ್ಲಿಯ ನೀರು ಬಳಕೆಗೆ ಅನುಕೂಲವಾಗುತ್ತದೆ.  ಆಗ ಕುಡಿಯುವ ನೀರಿನ ಕೊರತೆ ತಪ್ಪಿಸಲು ನೆರವಾಗಲಿದೆ ಎಂದು ಶಾಕರು ಹೇಳಿದರು.

ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಕುಡಿಯುವ ನೀರು ಪೂರೈಕೆ ಕುರಿತು ಅಧಿಕಾರಗಳು, ಕಾರ್ಪೋರೇಟರ್ ಗಳೊಂದಿಗೆ ಸಭೆ ನಡೆಸಿದರು

ಅನಧಿಕೃತವಾಗಿ ನಲ್ಲಿಗಳ ಜೋಡಣೆ, ಮೀಟರ್ ಕಿತ್ತಿದವರ ನೀರು ಪೂರೈಕೆ ಸಂಪರ್ಕ ಕಡಿತ ಮಾಡಬೇಕು.  ಅನಾವಶ್ಯಕವಾಗಿ ನೀರು ಹಾಳು ಮಾಡುವವರ ವಿರುದ್ದ ಕ್ರಮ ಕೈಗೊಳ್ಳುಲು ಎಚ್ಚರಿಕೆ ನೀಡಿ.  ನೀರಿನ ಬಿಲ್ ತುಂಬಿಸಿಕೊಳ್ಳಬೇಕು.  ಯಾವ ಇಲಾಖೆ ನೀರಿನ ಬಿಲ್ ಬಾಕಿ ಉಳಿಸಿಕೊಂಡಿವೆ ಎಂಬುದರ ಬಗ್ಗೆ ಮಾಹಿತಿ ನೀಡಿ, ಕೆಡಿಪಿ ಸಭೆಯಲ್ಲಿ ನಾನು ಗಮನ ಸೆಳೆಯುವೆ ಎಂದು ಅವರು ಹೇಳಿದರು.

ನಗರದಲ್ಲಿ ಗುಣಮಟ್ಟದ ಸಿಸಿ ರಸ್ತೆಗಳನ್ನು ನಿರ್ಮಿಸಲಾಗಿದೆ.  ಬೇರೆ ಕಾಮಗಾರಿಗಳ ಹೆಸರಿನಲ್ಲಿ ಈ ರಸ್ತೆಗಳನ್ನು ಅಗೆಯಬಾರದು.  ಅನಿವಾರ್ಯ ಇದ್ದರೆ ಸಂಬಂಧಿಸಿದವರಿಂದ ಕಡ್ಡಾಯವಾಗಿ ಅನುಮತಿ ಪಡೆದುಕೊಳ್ಳಬೇಕು.  ಅಲ್ಲದೆ, ಹಾಳಾದ ರಸ್ತೆಯನ್ನು ಅವರೇ ದುರಸ್ತಿ ಮಾಡಬೇಕು ಎಂದು ಶಾಸಕರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಇದೇ ವೇಳೆ ಕೆ ಬಿ ಜೆ ಎನ್ ಎಲ್ ವತಿಯಿಂದ ಲಿಂಗದಳ್ಳಿ ಜಾಕವೆಲ್ ನಿಂದ ವಿಜಯಪುರ ನಗರದ ಭೂತನಾಳ ಕೆರೆ ತುಂಬಿಸುವ ಕಾರ್ಯಕ್ಕೆ ವಿದ್ಯುತ್ ಸಮಸ್ಯೆಯಾಗುತ್ತಿದೆ ಎಂಬ ವಿಷಯ ಚರ್ಚೆಗೆ ಬಂತು.  ಈ ಸಂದರ್ಭದಲ್ಲಿ  ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದ ಅವರು, ವಿದ್ಯುತ್ ಕಡಿತಗೊಳಿಸದಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪರಶುರಾಮ ರಜಪೂತ, ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ರಾಹುಲ್ ರಜಪೂತ, ಶಿವರುದ್ರ ಬಾಗಲಕೋಟ, ಕಿರಣ ಪಾಟೀಲ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ ಕುರಿಯವರ, ಮಳುಗೌಡ ಬಿರಾದಾರ, ವಿಠ್ಠಲ ಹೊಸಪೇಟ, ಮಹೇಶ ಒಡೆಯರ, ಕಣಮುಚನಾಳ, ರಾಜು ಚವ್ಹಾಣ, ಅಶೋಕ ಬೆಲ್ಲದ, ವಿಠ್ಠಲ ನಡುವಿನಕೇರಿ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ, ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯ ಎಇಇ ಪಟ್ಟಣಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಅಹವಾಲು ಸ್ವೀಕಾರ

ಈ ಸಭೆಯ ಬಳಿಕ ಶಾಸಕರು ಸಾರ್ವಜನಿಕರ ಅಹವಾಲು ಸ್ವೀಕರಿಸಿ ಸ್ಥಳದಲ್ಲಿಯೇ ಕೆಲವು ಸಮಸ್ಯೆಗಳನ್ನು ಪರಿಹರಿಸಿದರು.   ಇನ್ನುಳಿದ ಮನವಿಗಳಿಗೆ ಸೂಕ್ತ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.  ಇದೇ ವೇಳೆ ಅಭಿಮಾನಿಗಳು ಶಾಸಕ ಬಸನಗೌಡ ಪಾಟೀಲ ಯತ್ನವಾಳ ಅವರನ್ನು ಸನ್ಮಾನಿಸಿದರು.

Leave a Reply

ಹೊಸ ಪೋಸ್ಟ್‌