ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ

ವಿಜಯಪುರ: ವಿಜಯಪುರದ ಲೀಡ್ ಎನ್ ಜಿ ಓ ಗ್ರಾಮೀಣಾಭಿವೃದ್ಧಿ ಸಂಸ್ಥೆ(ಐ.ಆರ್.ಡಿ), ಮುತ್ತೂಟ್ ಫೈನಾನ್ಸ್ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ನಗರದ ಜಲನಗರದ ಮುಖ್ಯ ರಸ್ತೆಯಲ್ಲಿ ಗಿಡಗಳನ್ನು ನೆಡುವ ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ಧಿನ್ ಸೌದಾಗರ ಚಾಲನೆ ನೀಡಿದ್ದಾರೆ. 

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಐ ಆರ್ ಡಿ ಸಂಸ್ಥೆಯು ಮಹಾನಗರ ಪಾಲಿಕೆ ಸಹಕಾರದೊಂದಿಗೆ ನಗರದ ಜಲನಗರ ಮುಖ್ಯರಸ್ತೆಯ ಎರಡೂ ಬದಿಗಳಲ್ಲಿ ಸುಮಾರು 500 ಕ್ಕೂ ಹೆಚ್ಚು ಗಿಡಗಳನ್ನು ನೆಡುತ್ತಿದ್ದು ಈ ಕಾರ್ಯಕ್ಕೆ ಮುತ್ತೂಟ್ ಫೈನಾನ್ಸ್ ಸಂಸ್ಥೆ ಸುಮಾರು 900 ಗಿಡಗಳ ರಕ್ಷಾ ಕವಚ ಒದಗಿಸಿರುವುದು ಶ್ಲಾಘನೀಯbಾಗಿದೆ.  ಮರಗಿಡಗಳ ಪಾಲನೆ, ಪೋಷಣೆ ಹಾಗೂ ಪರಿಸರ ಸಂರಕ್ಷಣೆ ಸಮಾಜದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಸದಸ್ಯ ಪ್ರೇಮಾನಂದ ಬಿರಾದಾರ ಮಾತನಾಡಿ, ಮನುಕುಲದ ಉಳಿವಿಗಾಗಿ ಎಲ್ಲರಲ್ಲೂ ಪರಿಸರ ಪ್ರಜ್ಞೆ ಅತ್ಯವಶ್ಯಕವಾಗಿದೆ.  ಗ್ರಾಮೀಣಾಭಿವೃದ್ಧಿ ಸ್ವಯಂ ಸೇವಾ ಸಂಸ್ಥೆ ಕಳೆದ ಎರಡು ದಶಕಗಳಿಂದ ಜಿಲ್ಲೆಯಲ್ಲಿ ನಿರಂತರ ನೆಲ, ಜಲ, ಪರಿಸರ ಸಂರಕ್ಷಣೆ ಮಾಡಿಕೊಂಡು ಬರುತ್ತಿದೆ.  ಗಿಡಮರಗಳ ಸಂರಕ್ಷಣೆ, ಜೈವಿಕ ಇಂಧನ ಬಳಕೆ, ಸ್ವಚ್ಚತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಮಹತ್ವದ ಕೆಲಸ ಮಾಡುತ್ತಿದೆ.  ಜಲನಗರದಲ್ಲಿ ಕೈಗೊಂಡಿರುವ ಹಸಿರೀಕರಣ ಕಾರ್ಯಕ್ಕೆ ವೈಯಕ್ತಿಕವಾಗಿ ಎಲ್ಲ ರೀತಿಯಲ್ಲೂ ಸಹಕಾರ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಕುಮಾರ ಗಡಗಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಿಇಓ ಡಾ. ಬಾಬು ಸಜ್ಜನ, ಪ್ರಧಾನ ಕಾರ್ಯದರ್ಶಿ ಬಸವರಾಜ ಸಜ್ಜನ ಸೇರಿದಂತೆ ಜಲನಗರದ ಹಿರಿಯರು, ಯುವಕರು ಮತ್ತು ಮುಖಂಡರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌