ವಿಜಯಪುರ: ಆಯುಷ್ಮಾನ ಭಾರತ ಅಭಿಯಾನ ಕೇಂದ್ರ ಸರಕಾರದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆರೋಗ್ಯ ಸೇವೆ ಒದಗಿಸುವ ಮಹತ್ವಾಕಾಂಕ್ಷೆ ಯೋಜನೆಯಾಗಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದ್ದಾರೆ.
ದೇಶಾದ್ಯಂತ ಈ ಅಭಿಯಾನಕ್ಕೆ ರಾಷ್ಟ್ರಪತಿ ದ್ರೌಪದಿ ಮರ್ಮು ಅವರು ವರ್ಚುವಲ್ ಮೂಲಕ ಚಾಲನೆ ನೀಡಿದ ಅಂಗವಾಗಿ, ನಗರದಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾಸ್ಪತ್ರೆ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರಕಾರದ ಆಶಯದಂತೆ ಅಕ್ಟೋಬರ್- 2ರ ವರೆಗೆ ಪ್ರತಿಯೊಬ್ಬ ನಾಗರಿಕರಿಗೆ ಉತ್ತಮ ಆರೋಗ್ಯ ಸೌಕರ್ಯ ದೊರಕಿಸಿ ಕೊಡುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿ, ವಾರ್ಡ ಮಟ್ಟದಲ್ಲಿ ಪ್ರತಿವಾರ ಆಯುಷ್ಮಾನ ಶಿಬಿರಗಳನ್ನು ಆಯೋಜಿಸಿ ಕಾರ್ಡ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಆರೋಗ್ಯ ಜಾಗೃತಿಗಾಗಿ ಅಂತ್ಯೋದಯ ಗುರಿಯಾಗಿಸಿಕೊಂಡು ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಈ ಕುರಿತು ಜನಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುವುದು. ಕಾರ್ಡ ಹೊಂದಿರುವ ವ್ಯಕ್ತಿಗಳು ಸುಮಾರು ರೂ. 5 ಲಕ್ಷ ವರೆಗೆ 12 ನಾನಾ ಕಾಯಿಲೆಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಪಡೆದುಕೊಳ್ಳಬಹುದಾಗಿದೆ. ರಾಜ್ಯದ ಎಲ್ಲ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಜಿಲ್ಲಾ ಆಸ್ಪತ್ರೆಗಳಲ್ಲಿ ಆರೋಗ್ಯ ಸೇವೆಯನ್ನು ಪಡೆಯಬಹುದಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಮೇಶ ಜಿಗಜಿಣಗಿ ಹೇಳಿದರು.
ಆರೋಗ್ಯ ಕಾರ್ಡ ಪಡೆದುಕೊಂಡ ಎಂ. ಐ. ನಾಟೀಕಾರ ಮಾತನಾಡಿ, ಆಯುಷ್ಮಾನ ಕಾರ್ಡ ತುಂಬ ಉಪಯುಕ್ತವಾಗಿದೆ. ನಗರದ ಬಿದರಿ ಆಸ್ಪತ್ರೆಯಲ್ಲಿ ಹೃದಯ ಚಿಕಿತ್ಸೆಗೆ ಒಳಗಾಗಿದ್ದು, ಶಸ್ತ್ರ ಚಿಕಿತ್ಸೆಗಾಗಿ ಯಾವುದೇ ವೆಚ್ಚವಾಗಿಲ್ಲ. ಎಲ್ಲವೂ ಉಚಿತ ಚಿಕಿತ್ಸೆ ದೊರೆತಿದೆ. ಪ್ರತಿಯೊಬ್ಬರು ಆಯುಷ್ಮಾನ ಭಾರತ ಕಾರ್ಡ ಪಡೆದು, ಆರೋಗ್ಯಯುತ ಜೀವನ ನಡೆಸುವಂತೆ ಅವರು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಆಯುಷ್ಮಾನ ಭಾರತ ಕಾರ್ಡ ವಿತರಿಸಲಾಯಿತು.
ಜಿಲ್ಲಾ ಶಸ್ತ್ರಚಿಕಿತ್ಸಕ ಎಸ್. ಎಚ್. ಲಕ್ಕಣ್ಣವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಕವಿತಾ ದೊಡಮನಿ, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ. ಸಂಪತ ಗುಣಾರಿ, ಆರ್. ಸಿ. ಎಚ್. ಅಧಿಕಾರಿ ಡಾ. ಕೆ. ಡಿ. ಗುಂಡಬಾವಡಿ, ಡಾ. ರಾಜೇಶ್ವರಿ ಗೊಲಗೇರಿ, ಡಾ. ಜೈಬುನ್ನೀಸಾ ಬೀಳಗಿ, ಡಾ. ಎ. ಪಿ. ಹಿಟ್ನಳ್ಳಿ, ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಅಧಿಕಾರಿ ಸುರೇಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಿ. ಎಂ. ಕೋಲೂರ, ಆಯುಷ್ಮಾನ ಭಾರತ ಜಿಲ್ಲಾ ಸಂಯೋಜಕ ಡಾ. ಸತೀಶ ಶಿರೂರ, ಸಹಾಯಕ ಪ್ರಾದೇಶಿಕ ಸಮಾಲೋಚಕ ಡಾ. ಸೋಮೇಶ, ಸುರೇಂದ್ರಕುಮಾರ ಮಾನಕರ, ಆರೋಗ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸುರೇಶ ಹೊಸಮನಿ ವಂದಿಸಿದರು.