ವಿಜಯಪುರ: ವಿಜಯಪುರ ನಗರದಿಂದ ಅಸ್ತಮಾ ಮತ್ತು ದರಿದ್ರತನ ಓಡಿ ಹೋಗಿದೆ ಎಂದು ಶಾಸಕ ಬಸನಗೌಡ ರಾ. ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರ ನಗರ ವಲಯ ವ್ಯಾಪ್ತಿಯ ಅಫಜಲಪುರ ಟಕ್ಕೆಯ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ-49 ರಲ್ಲಿ ನೂತನವಾಗಿ ಅಳವಡಿಸಲಾದ ಸಿಸಿ ಕ್ಯಾಮೆರಾ ಉದ್ಘಾಟಿಸಿ ಅವರು ಮಾತನಾಡಿದರು.
ನಗರದಲ್ಲಿ ರಸ್ತೆಗಳು ಅಭಿವೃದ್ಧಿ ಆಗಿರುವುದರಿಂದ ಧೂಳು ಕಡಿಮೆಯಾಗಿದೆ. ಇದರಿಂದ ಸಾರ್ವಜನಿಕರಿಗೆ ತಲೆ ನೋವಾಗಿದ್ದ ಅಸ್ತಮಾ ಓಡಿ ಹೋಗಿದೆ ಎಂದು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದಾಗ ಸ್ವತ ವೈದ್ಯರೇ ಹೇಳಿದ್ದಾರೆ. ಕಳೆದ ಅಧಿಕಾರಾವಧಿಯಲ್ಲಿ ಅಫಜಲಪುರ ಟಕ್ಕೆ ಪ್ರದೇಶಕ್ಕೆ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ ರೂ.4.25 ಕೋಟಿ ಅನುದಾನದಲ್ಲಿ ಆಂತರಿಕ ರಸ್ತೆ, ಒಳಚರಂಡಿ ಕಾಮಗಾರಿ ಕೈಗೊಳ್ಳಲಾಗಿದೆ. ಲೋಕೋಪಯೋಗಿ ಇಲಾಖೆಯ ರೂ.1 ಕೋ. ಅನುದಾನದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಪ್ರಗತಿಯಲ್ಲಿದೆ. ಹನುಮಾನ ಮತ್ತು ಮಲ್ಲಿಕಾರ್ಜುನ ದೇವಸ್ಥಾನಕ್ಕೆ ತಲಾ ರೂ.5 ಲಕ್ಷ, ಬಸವೇಶ್ವರ ದೇವಸ್ಥಾನಕ್ಕೆ ರೂ.4.5 ಲಕ್ಷ, ಮರಗಮ್ಮ ದೇವಸ್ಥಾನಕ್ಕೆ ರೂ.22 ಲಕ್ಷ, ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ರೂ.20 ಲಕ್ಷ ಹೀಗೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮುಂಬೈನ ಸೇಠ ತಪಿದಾಸ ತುಳಸಿದಾಸ ವೃಜದಾಸ ಚಾರಿಟೇಬಲ್ ಟ್ರಸ್ಟ್ ನಿರ್ದೇಶಕ ಸಂದೀಪ ಮೇರಚಾಂತ ಮಾತನಾಡಿದರು. ಎಸ್.ಡಿ.ಎಂ.ಸಿ ಅಧ್ಯಕ್ಷ ಯೋಗೀಶ ನಡುವಿನಕೇರಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಶಾಲೆಗೆ ದೇಣಿಗೆ ನೀಡಿದ 20ಕ್ಕೂ ಹೆಚ್ಚು ದಾನಿಗಳಿಗೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯ ಅಲ್ತಾಫ್ ಇಟಗಿ, ತಹಸೀಲ್ದಾರ್ ಕವಿತಾ ಆರ್., ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ತಳವಾರ, ಸಿಪಿಐ ರಾಯಗೊಂಡ ಜಾನರ, ಶಿಕ್ಷಣ ಸಂಯೋಜಕ ಎ. ಕೆ. ದಳವಾಯಿ, ಸಿ ಆರ್ ಪಿ ಬಸವರಾಜ ಪಡಗಾನೂರ, ವಕೀಲರಾದ ಎಸ್. ಎಸ್. ಜಹಾಗೀರದಾರ, ವೀರನಗೌಡ ಪಾಟೀಲ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಚಂದ್ರಕಾಂತ ಕನಸೆ ಸ್ವಾಗತಿಸಿದರು. ಶಿಕ್ಷಕಿ ಸವಿತಾ ತಿಗಡಿ ಸ್ವಾಗತ ಗೀತೆ ಹಾಡಿದರು. ಸಿ ಆರ್ ಪಿ ಜಿ. ಎಂ. ಗುಂಡಳ್ಳಿ ನಿರೂಪಿಸಿದರು. ಶಿಕ್ಷಕ ಮಲ್ಲಯ್ಯ ಸ್ವಾಮಿ ವಂದಿಸಿದರು.