ವಿಜಯಪುರ: ಬಿಜೆಪಿ ಮುಳುಗಿದ ಹಡಗು. ಕರ್ನಾಟಕದಲ್ಲಿ ಗಂಟುಮೂಟೆ ಕಟ್ಟುವ ಸಮಯ ಬರಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ವಿಜಯಪುರದಲ್ಲಿ ಸೈನಿಕ ಶಾಲೆಯ ವಜ್ರಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ಚೈತ್ರಾ ಕುಂದಾಪುರ ಅವರು ಬಿಜೆಪಿ ಟೆಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿರುವ ಆರೋಪ ಮತ್ತು ಇಂಥ ಪ್ರಕರಣಗಳಿಂದ ಉಂಟಾಗುತ್ತಿರುವ ವಿದ್ಯಮಾನಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಈಗ ಮುಳಗುತ್ತಿರುವ ಹಡಗು ಅಲ್ಲ. ಮುಳುಗಿರುವ ಹಡಗು. ಕರ್ನಾಟಕದಿಂದ ಬಿಜೆಪಿ ಗಂಟುಮೂಟೆ ಕಟ್ಟುವ ಕಾಲ ಬರಲಿದೆ ಎಂದು ಹೇಳಿದರು.
ಮೂರು ಜನ ಡಿಸಿಎಂ ಮಾಡಬೇಕು ಎಂದು ಸಹಕಾರ ಸಚಿವ ಕೆ. ಎನ್. ರಾಜಣ್ಣ ನೀಡಿರುವ ಹೇಳಿಕೆಯ ಕುರಿತು ಪ್ರತಿಕ್ರಿಯೆ ನೀಡಿದ ಸಚಿವ ಎಂ. ಬಿ. ಪಾಟೀಲ, ರಾಜಣ್ಮ ಅವರ ಹೇಳಿಕೆಯ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಈ ಬಗ್ಗೆ ಹೈಕಮಾಂಡ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.
ಒಂದು ವೇಳೆ ಹೈಕಮಾಂಡ್ ಈ ಬಗ್ಗೆ ತಮ್ಮ ಅಭಿಪ್ರಾಯ ಕೇಳಿದರೆ ಎಂದು ಪ್ರಶ್ನಿಸಿದಾಗ ಅವರು ಕೇಳಿದಾಗ ನಾನು ಉತ್ತರ ಕೊಡತ್ತೇನೆ ಎಂದು ತೀಕ್ಷಣವಾಗಿ ಪ್ರತಿಕ್ರಿಯೆ ನೀಡಿದರು.
ಧಾರವಾಡ ಬಳಿ ಮುತ್ತಯ್ಯ ಮುರಳಿಧರನ್ ಕೈಗಾರಿಕೆ ಸ್ಥಾಪನೆಗೆ ವಿರೋಧ ವಿಚಾರ
ಅಂತಾರಾಷ್ಟ್ರೀಯ ಮಾಜಿ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ಅವರು ಧಾರವಾಡ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಕೈಗಾರಿಕೆಗೆ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾಗಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅವಶ್ಯ ಬಿದ್ದರೆ ಪತ್ರ ಬರೆದಿರುವ ಪರಿಸರವಾದಿ ಸುರೇಶ ಹೆಬ್ಳೀಕರ್ ಜೊತೆಗೆ ಮಾತನಾಡ್ತೇನೆ. ಈ ಕುರಿತು ಪರಿಶೀಲನೆ ಮಾಡಲಾಗುವುದು. ಕೈಗಾರಿಕೆಗೆ ನೀರು ಬೇಕಾಗುತ್ತೆ. ನೀರು ಹಂಚಿಕೆಯ ವಿಚಾರವೂ ಇರುತ್ತದೆ. ಇದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.
ಬರಪೀಡಿತ ತಾಲೂಕುಗಳ ಪಟ್ಟಿಗೆ ತಿಕೋಟಾ ಸೇರ್ಪಡೆ ವಿಚಾರ
ರಾಜ್ಯ ಸರಕಾರ ಘೋಷಣೆ ಮಾಡಿರುವ ಬರಪೀಡಿತ ತಾಲೂಕುಗಳ ಪಟ್ಟಿಗೆ ವಿಜಯಪುರ ಜಿಲ್ಲೆಯ 12 ತಾಲೂಕುಗಳನ್ನು ಸೇರ್ಪಡೆ ಮಾಡಲಾಗಿದ್ದು, ತಿಕೋಟಾ ತಾಲೂಕನ್ನು ಕೈಬಿಡಲಾಗಿದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಈ ಕುರಿತು ಮಖ್ಯಮಂತ್ರಿ ಎಸ್. ಸಿದ್ಧರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದರು.
ತಾಂತ್ರಿಕ ಕಾರಣಗಳಿಂದಾಗಿ ತಿಕೋಟಾ ತಾಲೂಕಿನ ಹೆಸರು ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿಲ್ಲ. ಈಗಾಗಲೇ ವಿಜಯಪುರ ಜಿಲ್ಲಾಡಳಿತ ಈ ಕುರಿತು ರಾಜ್ಯ ಸರಕಾರಕ್ಕೆ ಶಿಫಾರಸು ಮಾಡಿದ್ದು, ಈ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ. ಅಲ್ಲದೇ, ಕಂದಾಯ ಸಚಿವರ ಗನಮಕ್ಕೂ ತರಲಾಗಿದೆ. ಈ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲಾಗುತ್ತದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವ ಎಂ. ಬಿ. ಪಾಟೀಲ ಸ್ಪಷ್ಟಪಡಿಸಿದರು.