ವಿಜಯಪುರ: ಪರಿಸರವನ್ನು ಕಾಪಾಡಿದರೆ, ಪ್ರಕೃತಿ ನಮ್ಮೆಲ್ಲರನ್ನು ರಕ್ಷಿಸುತ್ತದೆ ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಹೇಳಿದ್ದಾರೆ.
ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ಇಂಡಿಯನ್ ಅಸೋಶಿಯೇಶನ್ ಆಪ್ ಪ್ರಿವೆಂಟಿವ್ ಆಂಡ್ ಸೋಷಿಯಲ್ ಮೆಡಿಸೀನ್ ಆಯೋಜಿಸಿರುವ 3ನೇ ರಾಜ್ಯ ಮಟ್ಟದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಪರಿಸರ ಹದಗೆಡಲು ಮನುಷ್ಯರೇ ಕಾರಣ. ಆಹಾರ, ನೀರು, ಗಾಳಿ ಸೇರಿದಂತೆ ಪ್ರತಿಯೊಂದೂ ಕಲುಷಿತವಾಗುತ್ತಿದ್ದು, ಇದರ ದುಷ್ಪರಣಿಮಾಮಗಳು ಮನುಷ್ಯರು ಮತ್ತು ಪ್ರಾಣಿಗಳ ಮೇಲಾಗುತ್ತಿದೆ. ಉತ್ತಮ ಪರಿಸರ ಪ್ರಕೃತಿಯ ಕೊಡುಗೆಯಾಗಿದ್ದು, ಅದನ್ನು ಪ್ರತಿಯೊಬ್ಬರು ಜವಾಬ್ದಾರಿಯಿಂದ ಸಂರಕ್ಷಿಸಿದರೆ ಅದು ನಮ್ಮನ್ನು ಕಾಪಾಡುತ್ತದೆ ಎಂದು ಅವರು ಹೇಳಿದರು.
ಕುಲಪತಿ ಡಾ. ಆರ್. ಎಸ್. ಮುಧೋಳ ಮಾತನಾಡಿ, ಪರಿಸರ ಮತ್ತು ಆರೋಗ್ಯ ಒಂದಕ್ಕೊಂದು ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಜನಜಾಗೃತಿ ಅಗತ್ಯವಾಗಿದೆ. ಈ ಸಮ್ಮೇಳನದಲ್ಲಿ ಆಯ್ದುಕೊಂಡಿರುವ ವಿಷಯಗಳು ಮತ್ತು ಘೋಷವಾಕ್ಯ ಪ್ರಸಕ್ತ ಅಗತ್ಯವನ್ನು ಒತ್ತಿ ಹೇಳುತ್ತಿದೆ. ಪರಿಸರ ಸಂರಕ್ಷಿಸಿ ಉತ್ತಮ ಆರೋಗ್ಯಕ್ಕಾಗಿ ಎಲ್ಲರೂ ಶ್ರಮಪಡೋಣ ಎಂದು ಹೇಳಿದರು.
ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಡಾ. ಎಂ. ಸಿ. ಯಡವಣ್ಣನವರ ಮಾತನಾಡಿ, ಸುಸ್ಥಿರ ಆರೋಗ್ಯ ಪೂರ್ಣ ಪರಿಸರಕ್ಕಾಗಿ ಎಲ್ಲರೂ ಕೈಜೋಡಿಸಬೇಕಿದೆ. ಈ ನಿಟ್ಟಿನಲ್ಲಿ ವಿಭಾಗದ ವತಿಯಿಂದ ನಾನಾ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಲಾಗುತ್ತಿದೆ ಎಂದು ತಿಳಿಸಿದರು.
ಸಮ್ಮೇಳನ ಸಂಘಟನಾ ಸಮಿತಿ ಅಧ್ಯಕ್ಷೆ ಡಾ. ಶೈಲಜಾ ಪಾಟೀಲ ಮಾತನಾಡಿ, ನವಜಾತ ಶಿಶುವಿನಿಂದ ಹಿಡಿದು ಹಿರಿಯ ನಾಗರಿಕರು ಹಾಗೂ ಪ್ರತಿಯೊಂದು ಜೀವಿಯ ಜೀವನಕ್ಕೆ ಉತ್ತಮ ಪರಿಸರ ಮತ್ತು ಆರೋಗ್ಯ ಮುಖ್ಯವಾಗಿದೆ ಎಂದು ಹೇಳಿದರು.
ಸಮ್ಮೇಳನದ ಅಂಗವಾಗಿ ಸ್ಮರಣ ಸಂಚಿಕೆ ಮತ್ತು ಮಕ್ಕಳ ಆರೋಗ್ಯದ ಮೇಲೆ ಪರಿಸರದ ಪರಿಣಾಮಗಳು ಸೇರಿದಂತೆ ಮೂರು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಯುನಿಸೆಪ್ ಕರ್ನಾಟಕ ಮತ್ತು ತೆಲಗಾಂಣ ಕ್ಷೇತ್ರ ಅಧಿಕಾರಿ ಡಾ. ಝೆಲೆಲೆಮ್ ಬಿರ್ಹಾನು ಟಫ್ಪೆಸ್ಸಿ, ಸಮಕುಲಪತಿ ಡಾ. ಅರುಣ ಚಂ. ಇನಾಮದಾರ, ಐ.ಎ.ಪಿ.ಎಸ್.ಎಂ ರಾಷ್ಟ್ರೀಯ ಅಧ್ಯಕ್ಷ ಡಾ. ಎ. ಎಂ. ಕದರಿ, ಡಾ. ಅಣ್ಣಾರಾವ ಕುಲಕರ್ಣಿ, ಡಾ. ಪುರುಷೋತ್ತಮ ಗಿರಿ, ಡಾ. ವಿನಯ ಎಂ. ಡಾ. ಡಿ. ಪ್ರಭಾಕರನ ಮುಂತಾದವರು ಉಪಸ್ಥಿತರಿದ್ದರು.
ಜಂಟಿ ಸಂಘಟನಾ ಕಾರ್ಯದರ್ಶಿ ಡಾ. ಎಂ. ಆರ್. ಗುಡದಿನ್ನಿ ಪರಿಚಯಿಸಿದರು. ಸಂಘಟನಾ ಸಹ- ಕಾರ್ಯದರ್ಶಿ ಡಾ. ರೇಖಾ ಎಸ್. ಉದಗಿರಿ ವಂದಿಸಿದರು.