ವಿಜಯಪುರ: ಯತ್ನಾಳ ಮತ್ತು ನಾನು ಸ್ನೇಹಿತರು. ಇಂದು ವೇದಿಕೆಯಲ್ಲಿ ಅಕ್ಕಪಕ್ಕದಲ್ಲಿಯೇ ಕುಳಿತಿದ್ದೇವೆ. ನಾವೆಲ್ಲ ಒಂದೇ ಇದ್ದೇವೆ ಎಂದು ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ತಿಳಿಸಿದ್ದಾರೆ.
ವಿಜಯಪುರದಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಮತ್ತು ತಾವು ಇಬ್ಬರೂ ಕಾರ್ಯಕ್ರಮದಲ್ಲಿ ಅಕ್ಕಪಕ್ಕದಲ್ಲಿಯೇ ಕುಳಿತಿದ್ದರೂ ಯಾಕೆ ಮಾತನಾಡಿಲ್ಲ? ಭಿನ್ನಮತ ಮುಂದುವರೆದಿದೆಯೇ ಎಂದು ಪತ್ರಕರ್ತರು ಕೇಳಿದಾಗ ಸಂಸದ ರಮೇಶ ಜಿಗಜಿಣಗಿ ಜಾಣತನದ ಉತ್ತರ ನೀಡಿದರು.
ನಾವಿಬ್ಬರೂ ಸ್ನೇಹಿತರು. ನೀವು ಈ ರೀತಿ ಸುದ್ದಿ ಹುಟ್ಟಿಸಬೇಡಿ. ನಾವೆಲ್ಲರೂ ಒಂದೇ ಇದ್ದೇವೆ ಎಂದು ಮಾರ್ಮಿಕವಾಗಿ ಹೇಳುವ ಮೂಲಕ ಸಂಸದರು ಗಮನ ಸೆಳೆದರು.
ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾಮಾಜಿಕ ಜಾಲತಾಣಗಳು ಜನರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಮಧ್ಯೆ ಸೇತುವೆಯಾಗಿ ಕೆಲಸ ಮಾಡಬೇಕು. ಆದರೆ, ಇವುಗಳು ಈಗ ದುರ್ಬಳಕೆಯಾಗುತ್ತಿವೆ. ಸಾಮಾಜಿಕ ಜಾಲತಾಣ ಬಳಸುವವರು ಯಾರೇ ಆಗಿರಲಿ, ಓರ್ವ ವ್ಯಕ್ತಿಯ ವರ್ಚಸ್ಸನ್ನು ವೃದ್ಧಿಸುವ ಕೆಲಸ ಮಾಡಬೇಕು. ಅದು ಸಾಧ್ಯವಿಲ್ಲ ಎಂದಾದರೆ, ಆ ವ್ಯಕ್ತಿಯ ಘನತೆಯನ್ನು ಕುಂದಿಸುವ ಕೆಲಸ ಮಾಡಬಾರದು. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಹೇಳಿದರು.
ಇಂದು ಬೆಳಿಗ್ಗೆ ವ್ಯಕ್ತಿಯೊಬ್ಬರು ಚೈತ್ರಾ ಕುಂದಾಪುರ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿ ಹಾಕಿದ್ದಾರೆ. ಆದರೆ, ಆ ಯಮ್ಮನ ಮುಖವನ್ನೂ ನೋಡಿಲ್ಲ. ಆ ಯಮ್ಮನ ಊರೂ ಗೊತ್ತಿಲ್ಲ. ಆ ಯಮ್ಮನ ಹೆಸರು ನನಗೆ ಗೊತ್ತಿಲ್ಲ. ನಿನ್ನೆ ಟಿವಿ ಮತ್ತು ಪತ್ರಿಕೆಗಳಲ್ಲಿ ಅವರ ಕಥೆ ಬಂದ ಮೇಲೆ ನನಗೆ ಈ ವಿಷಯ ಗೊತ್ತಾಗಿದೆ. ಓರ್ವ ವ್ಯಕ್ತಿಯ ಚಾರಿತ್ರ್ಯ ಹರಣದ ಸಾಧನವಾಗಿ ಇದು ದುರ್ಬಳಕೆಯಾಗಬಾರದು. ಪತ್ರಿಕೆಗಳೂ ಜವಾಬ್ದಾರಿಯೂ ಅಷ್ಟೇ. ಓರ್ವ ವ್ಯಕ್ತಿಯ ವ್ಯಕ್ತಿತ್ವವನ್ನು ಹೆಚ್ಚು ಮಾಡಲು ಆಗದಿದ್ದರೂ ಅವನ ವ್ಯಕ್ತಿತ್ವವನ್ನು ಕುಗ್ಗಿಸುವ ಸಹವಾಸಕ್ಕೆ ಹೋಗಬಾರದು ಎಂದು ಅವರು ಕಿವಿಮಾತು ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ಸುಳ್ಳು ಸುದ್ದಿಗಳ ಭರಾಟೆ ಹೆಚ್ಚುತ್ತಿದೆ. ಆದರೆ, ನೈಜ ವರದಿ ಬಿತ್ತರಿಸಬೇಕು. ರಾಜಕಾರಣಿಗಳ ಏಳು ಬೀಳಿಗೂ ಸಾಮಾಜಿಕ ಜಾಲ ತಾಣಗಳು ಪಾತ್ರ ವಹಿಸುತ್ತವೆ. ಈ ಸೂಕ್ಷ್ಮತೆಯ ಅರಿವು ಇರಬೇಕು. ಆದರೆ, ಕೆಲವರು ಸುದ್ದಿಗಳಿಗೆ ಉಪ್ಪು ಖಾರ ಹಚ್ಚಿ ಸ್ವಾದ ಕೆಡಿಸುವ ಕೆಲಸ ಮಾಡುತ್ತಾರೆ. ಇದು ನಡೆಯಬಾರದು ಎಂದು ಸಂಸದರು ಹೇಳಿದರು.
ರಾಜಕಾರಣಿಗಳ ಭವಿಷ್ಯ ಬರೆಯುವುದು ಕಾರ್ಯಕರ್ತರು, ಮಾಧ್ಯಮಗಳ ಕೈಯ್ಯಲ್ಲಿದೆ. ತಾವೆಲ್ಲರೂ ಉತ್ತಮ ಭವಿಷ್ಯ ಬರೆಯಬೇಕು. ನಾವು 1947 ಮಂದಿ. ಅಂದು ಈ ರೀತಿ ಇರಲಿಲ್ಲ. ಕೇವಲ ದಿನಪತ್ರಿಕೆಗಳು ಮತ್ತು ರೇಡಿಯೋಗಳು ಮಾತ್ರ ಇದ್ದವು. ಈಗ ಮಾಧ್ಯಮಗಳು ಬದಲಾಗಿವೆ.
ಕಾರ್ಯಕ್ರಮದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವಿಜಯಪುರ ನಗರ ಶಾಸಕ ಮತ್ತು ತಾವು ಇಬ್ಬರೂ ಅಕ್ಕಪಕ್ಕದಲ್ಲಿಯೇ ಕುಳಿತಿದ್ದರೂ ಯಾಕೆ ಮಾತನಾಡಲಿಲ್ಲ ಎಂದು ಮಾಧ್ಯಮದವರು ಪ್ರಶ್ನಿಸಿದರು. ಆಗ, ಇದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ ಅವರು,
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಕಾರ್ಪೋರೇಟರ್ ಶಿವರುದ್ರ ಬಾಗಲಕೋಟ, ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ ವಿಜಯ ಜೋಶಿ, ಮುಖಂಡರಾದ ಚಿದಾನಂದ ಚಲವಾದಿ ಮುಂತಾದವರು ಉಪಸ್ಥಿತರಿದ್ದರು.