ವಿಜಯಪುರ: ಸನಾತನ ಧರ್ಮ ಉಳಿದರೆ ಮಾತ್ರ ಹಿಂದುಗಳು, ದಲಿತರು ಮತ್ತು ಸಂವಿಧಾನ ಉಳಿಯಲು ಸಾಧ್ಯ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಶಂಖನಾದ ಕಾರ್ಯಕ್ರಮದಲ್ಲಿ ಪಾಲ್ಗೋಂಡು ಅವರು ಮಾತನಾಡಿದರು.
ಕರ್ನಾಟಕದ ಸಿಎಂ ಟ್ವೀಟ್ ಮಾಡಿ, ಮನುವಾದ ಮತ್ತು ಮನುಸ್ಮೃತಿ ಚರ್ಚೆ ಮಾಡುತ್ತಾರೆ. ನಾವು ಎಂದಾದರೂ ಮನುಸ್ಮೃತಿ ಬಗ್ಗೆ ಚರ್ಚೆ ಮಾಡಿದ್ದೇವಾ? ಸಂವಿಧಾನ ಬದಲು ಮಾಡುವುದಾಗಿ ಹೇಳಿದ್ದೀವಾ? ಎಂದು ಅವರು ಪ್ರಶ್ನಿಸಿದರು.
ಮೀಸಲಾತಿ ಪ್ರಮಾಣ ಹೆಚ್ಚು ಮಾಡಿದ್ದೇ ಬಿಜೆಪಿ. ಅಂಬೇಡ್ಕರ್ ಅವರಿಗೆ ಇದೇ ಕಾಂಗ್ರೆಸ್ಸಿನವರು ಭಾರತ ರತ್ನ ಕೊಟ್ಟಿಲ್ಲ. ಅವರು ನಿಧನರಾದಾಗ ದೆಹಲಿಯಲ್ಲಿ ಅಂತ್ಯಕ್ರಿಯೆಗೆ ಜಾಗ ನೀಡದೇ ಅವಮಾನ ಮಾಡಿದ್ದಾರೆ ಎಂದು ಶಾಸಕರು ವಾಗ್ದಾಳಿ ನಡೆಸಿದರು.
ಭಾಷಣದುದ್ದಕ್ಕೂ ಪ್ರತಿಪಕ್ಷಗಳು ಮತ್ತು ಪ್ರತಿಪಕ್ಷಗಳ ಮುಖಂಡರ ವಿರುದ್ಧ ಕಿಡಿ ಕಾರಿದ ಅವರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಪಡೆಯಲಿದೆ. ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸಾಮಾಜಿಕ ಜಾಲ ತಾಣಗಳನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು. ವಿರೋಧಿಗಳ ಪೋಸ್ಟ್ ಗೆ ಅಲ್ಲೇ ಕಾಮೆಂಟ್ ಮಾಡುವ ಮೂಲಕ ಸೂಕ್ತ ಉತ್ತರ ನೀಡಬೇಕು ಎಂದು ಹೇಳಿದರು.
ಹಿಂದೂ ಸನಾತನ ಧರ್ಮ ಕಾಗೆ ಇದ್ದ ಹಾಗೆ ಎಂದು ಬಹುಭಾಷಾ ನಟ ಪ್ರಕಾಶ ರಾಜ ಹೇಳಿದ್ದ. ಅದಕ್ಕೆ ನಾನು ಪ್ರಕಾಶ ರಾಜ ಹಂದಿ ಎಂದು ಉತ್ತರ ಕೊಟ್ಟಿದ್ದೆ. ಸುಖಾಸುಮ್ಮನೆ ಮಾತನಾಡದೇ ಬರೋಬ್ಬರಿಯಾಗಿ ಉತ್ತರಿಸಬೇಕು ಎಂದು ಯತ್ನಾಳ ಬಿಜೆಪಿ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಮರ್ಯಾದೆ ಕೊಟ್ಟರೆ ಮರ್ಯಾದೆ ಕೊಡೋಣ. ಯಾಕಲೋ ಎಂದರೆ ಯಾಕೋ….. ಮಗನೇ ಎನ್ನಬೇಕು. ಈ ಹಿಂದೆ ಮೀಡಿಯಾ ಎಡಪಂಥಿಯ ಸಿದ್ದಾಂತದವರ ಕೈಯ್ಯಲ್ಲಿತ್ತು. ಮೋದಿ ಬೆಂಬಲಿಸುವ ಮಾಧ್ಯಮಗಳಿಗೆ ಗೋದಿ ಮೀಡಿಯಾ ಎನ್ನುತ್ತಾರೆ. 14 ನಿರೂಪಕರನ್ನು ಇಂಡಿಯಾ ಅಲೈನ್ಸ್ ಯಾಕೆ ನಿಷೇಧಿಸಿದೆ? ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ರಾಹುಲ್ ಗಾಂಧಿ ವಿರುದ್ದ ಹರಿಹಾಯ್ದ ಯತ್ನಾಳ, ಅಯೋಗ್ಯ ರಾಹುಲ್ ಗಾಂಧಿ ಜಿ. ಎಸ್. ಟಿ ಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಟೀಕಿಸುತ್ತಿದ್ದ. 2024 ರ ನಂತರ ಗಣಪತಿ ಪಾಕಿಸ್ತಾನದಲ್ಲಿ ಕೂರಿಸುವ ತೀರ್ಮಾನ ಮಾಡಬೇಕು. 2024 ರ ನಂತರ ಭಾರತತದ ಭೂಪಟ ಬದಲಾಗುತ್ತ ಹೋಗುತ್ತದೆ. ಅಪಘಾನಿಸ್ಥಾನದವರೆಗೂ ಭಾರತದ ನಕಾಶೆ ಬದಲಾಗುತ್ತದೆ ಎಂದು ಶಾಸಕರು ಹೇಳಿದರು. ಈ ಮೂಲಕ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನವನ್ನು ನಾಶ ಮಾಡಿ ಭಾರತಕ್ಕೆ ಸೇರಿಸುತ್ತೇವೆ ಎಂದು ಪರೋಕ್ಷವಾಗಿ ಹೇಳಿದರು.
ರೈತರು ಪರಿಹಾರದ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಸಚಿವರೊಬ್ಬರು ಹೇಳಿದ್ಧಾರೆ. ಅವರಿಗೆ ರೂ. 5 ಕೋ. ಹಣ ಕೊಡುತ್ತೇನೆ. ನೇಣು ಹಾಕಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಅವರು ಪರೋಕ್ಷವಾಗಿ ಸಕ್ಕರೆ, ಜವಳಿ ಮತ್ತು ಎಪಿಎಂಸಿ ಸಚಿವ ಶಿವಾನಂದ ಪಾಟೀಲ ವಿರುದ್ದವೂ ಅವರು ಹರಿಹಾಯ್ದರು.
ಸಚಿವರ ಹೇಳಿಕೆಗೆ ಕೆಪಿಸಿಸಿ ಆಧ್ಯಕ್ಷ ಡಿ ಕೆ ಶಿವಕುಮಾರ ಬೆಂಬಲಿಸಿದರು. ಅಕ್ರಮ ಮಾಡಿ ಬಹಳ ಆಸ್ತಿ ಸಂಪಾದನೆ ಮಾಡಿರುವ ಅವರಿಗೆ ರೂ. 25 ಕೋ. ಕೊಡುತ್ತೇನೆ. ನೇಣು ಹಾಕಿಕೊಳ್ಳಿ ಎಂದು ಹೇಳಿರುವುದಾಗಿ ಅವರು ತಿಳಿಸಿದರು.
2024 ರ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆಯಬೇಕು. ನಮ್ಮಲ್ಲಿ ಏನೇ ಜಗಳಗಳಿದ್ದರೂ ಸಹ ಚುನಾವಣೆಯಲ್ಲಿ ನಾವೇ ಗೆಲ್ಲಬೇಕು ಎಂದು ಯತ್ನಾಳ ಕರೆ ನೀಡಿದರು.
ಈ ಸಂದರ್ಭದಲ್ಲಿ ವಿಜಯಪುರ ಸಂಸದ ರಮೇಶ ಜಿಗಜಿಣಗಿ, ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ ಸೇರಿದಂತೆ ನಾನಾ ಮುಖಂಡರು ಉಪಸ್ಥಿತರಿದ್ದರು.