ವಿಜಯಪುರ ಜಿಲ್ಲೆಯಲ್ಲಿ 3ನೇ ಶನಿವಾರ ಅಂಗನವಾಡಿ ಮಕ್ಕಳ ಪಾಲಕರ ಸಭೆ- 48315 ಜನ ಭಾಗಿ- ಜಿ. ಪಂ. ಸಿಇಓ ರಾಹುಲ ಶಿಂಧೆ

ವಿಜಯಪುರ: ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಗ್ರಾ. ಪಂ. ಗಳ ಮೂಲಕ ಮಕ್ಕಳ ಸ್ನೇಹಿ ಕುರ್ಚಿ ಮತ್ತು ಮೇಜು ಒದಗಿಸಿರುವುದು ಮಕ್ಕಳು ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾಗಲು ಮತ್ತು ಆಸಕ್ತಿ ತಳೆಯಲು ಸಹಕಾರಿಯಾಗಿದೆ ಎಂದು ಜಿ. ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ ಶಿಂದೆ ತಿಳಿಸಿದ್ದಾರೆ.

ಪ್ರತಿ ಮೂರನೇ ಶನಿವಾರ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ನಡೆಯುತ್ತದೆ.  ಈ ಸಭೆಗೆ ಆಗಮಿಸಿದ್ದ ಮಕ್ಕಳ ಪಾಲಕರು, ಕೇಂದ್ರದಲ್ಲಿ ಆಗಿರುವ ಬದಲಾವಣೆಯಿಂದ ತಮ್ಮ ಮಕ್ಕಳು ಓದಿನಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.  ಅಲ್ಲದೇ, ಸಂತಸದಿಂದ ಕೇಂದ್ರಗಳಿಗೆ ಬರಲು ಉತ್ಸಾಹ ತೋರಿಸುತ್ತಿದ್ದಾರೆ ಎಂದು ಸ್ವತಃ ಪಾಲಕರೇ ಸಂತಸ ವ್ಯಕ್ತಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲೆಯಲ್ಲಿರುವ 2755 ಅಂಗನವಾಡಿ ಕೇಂದ್ರಗಳಲ್ಲಿ ಶನಿವಾರ ಪಾಲಕರ ಸಭೆ ನಡೆಸಲಾಯಿತು.  ಈ ಸಭೆಯಲ್ಲಿ 48315 ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು.  ಜಿಲ್ಲಾದ್ಯಂತ ಇರುವ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಪಾಲಕರ ಸಭೆ ಆಯೋಜಿಸಲಾಗುತ್ತಿದ್ದು, ಪಾಲಕರು ಭಾಗವಹಿಸಿ, ತಮ್ಮ ಮಕ್ಕಳ ಶೈಕ್ಷಣಿಕ, ಆಟೋಟ ಪ್ರಗತಿ ತಿಳಿದುಕೊಳ್ಳುತ್ತಿ್ದ್ದಾರೆ.  ಅಂಗನವಾಡಿಯಲ್ಲಿ ದೊರೆಯುವ ಪೌಷ್ಟಿಕ ಆಹಾರದಿಂದ ಮಕ್ಕಳು ದೈಹಿಕ ಹಾಗೂ ಬೌದ್ಧಿಕವಾಗಿ ಸದೃಢರಾಗುವಲ್ಲಿಯೂ ಸಹಕಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಅಂಗನವಾಡಿ ಕೇಂದ್ರಗಳ ಪಾಲಕರ ಸಭೆಯನ್ನು ಉಪನಿರ್ದೇಶಕ ಕೆ. ಕೆ. ಚವ್ಹಾಣ ಉದ್ಗಾಟಿಸಿದ್ದಾರೆ

0-6 ವರ್ಷದ ವಯೋಮಾನದ ಮಕ್ಕಳ ಆರೋಗ್ಯ ತಪಾಸಣೆ, ಮಕ್ಕಳ ಪೌಷ್ಠಿಕ ಮಟ್ಟ ಹೆಚ್ಚಿಸಲು ಹಾಲು, ಮೊಟ್ಟೆ ಹಾಗೂ ಮೊಳಕೆ ಕಾಳು ವಿತರಣೆ ಹಾಗೂ ಕೇಂದ್ರಗಳಿಗೆ ನಿಯಮಿತವಾಗಿ ಆಹಾರ ಸಾಮಗ್ರಿ ಪೂರೈಕೆ, ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಲು ಐಸಿಡಿಎಸ್ ಮಿಷನ್ ಮೂಲಕ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣದಡಿ ದಿನಬಳಕೆ ಸ್ಥಳೀಯ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಅಂಗನವಾಡಿ ಕೇಂದ್ರವನ್ನು ಮಕ್ಕಳ ಕಲಿಕಾ ಸ್ನೇಹಿ ಕೇಂದ್ರವಾಗಿರುವ ಬಗ್ಗೆ ತಿಳಿಸಲಾಯಿತು.ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಕೇಂದ್ರಗಳಲ್ಲಿ ಏರ್ಪಡಿಸುತ್ತಿರುವ ಹಾಗೂ ಅದರಲ್ಲಿ ಮಕ್ಕಳು ಭಾಗವಹಿಸುವಿಕೆ ಕುರಿತು ಮಕ್ಕಳಿಂದ ಅಭಿನಯ ಗೀತೆ, ಕಥೆ ಹೇಳಿಸುವ ಪ್ರಾತ್ಯಕ್ಷಿಕೆ ನೋಡಿ ಪಾಲಕರು ಅಭಿಮಾನ ಪಟ್ಟು ಸಂಭ್ರಮಿಸಿದರು ಎಂದು ಅವರು ಹೇಳಿದ್ದಾರೆ.

ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ನಿಗದಿಯಂತೆ ಚುಚ್ಚುಮದ್ದುಗಳನ್ನು ನೀಡಲು ಅರಿವು ಮೂಡಿಸಲಾಯಿತು. ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆಯೂ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯತೆ ಸರಿಯಾಗಿ ನೋಡಿಕೊಳ್ಳುವಂತೆಯೂ ತಾಯಂದಿರಿಗೆ ತಿಳಿಸಲಾಯಿತು.  ಇಲಾಖೆಯ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ದಿ, ಪ್ರಧಾನಮಂತ್ರಿ ಮಾತೃವಂದನಾ ಹಾಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆಯೂ, ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ನೀಡಲು ದಾನಿಗಳನ್ನು ಗುರುತಿಸುವುದು ಹಾಗೂ ಶಾಲಾ ಆವರಣದಲ್ಲಿ ಕೊಠಡಿಗಳನ್ನು ಪಡೆಯಲು ಪಾಲಕರು ಸಹಭಾಗಿತ್ವದ ಮಹತ್ವ ತಿಳಿಸಲಾಯಿತು. ಕೇಂದ್ರಗಳಲ್ಲಿ ವಿದ್ಯುತ್, ಫ್ಯಾನ್, ಕುಡಿಯುವ ನೀರು, ಶೌಚಾಲಯ, ಕೈ ತೋಟ ಸೇರಿದಂತೆ ಮೂಲಭೂತ ಸೌಕರ್ಯಗಳ ಕಲ್ಪಿಸಿಕೊಡಲು ಪಾಲಕರಲ್ಲಿ ಮನವಿ ಮಾಡಲಾಯಿತು ಎಂದು ರಾಹುಲ ಶಿಂದೆ ಮಾಹಿತಿ ನೀಡಿದ್ದಾರೆ.

 

ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು, ಬಾಣಂತಿಯರು ಕೇಂದ್ರಕ್ಕೆ ಆಗಮಿಸಿ, ಪೂರಕ ಪೌಷ್ಠಿಕ ಆಹಾರ ಪಡೆಯಲು ಫಲಾನುಭವಿಗಳನ್ನು ಪ್ರೇರೆಪಿಸುವಂತೆ ತಿಳಿಸಲಾಯಿತು. ಮಕ್ಕಳು ದಿನನಿತ್ಯ ಅಂಗನವಾಡಿಗೆ ಕಳುಹಿಸಬೇಕು.ಮಕ್ಕಳ ವೈಯಕ್ತಿಕ ಶುಚಿತ್ವಕ್ಕೆ ಗಮನ, ಶೌಚಾಲಯದ ಬಳಕೆಯ ಮಹತ್ವ, ಮಕ್ಕಳಲ್ಲಿ ಶಿಸ್ತು ರೂಢಿಸುವುದರ ಬಗ್ಗೆ ತಿಳಿಸಲಾಯಿತು. ಬಾಲ ವಿಕಾಸ ಸಮಿತಿ, ತಾಯಂದಿರ ಸಭೆ, ಮಕ್ಕಳ ಕಾವಲು ಸಮಿತಿ ಹಾಗೂ ಪೋಷಕರ ಸಭೆಯಲ್ಲಿ ತಾಯಿ-ತಂದೆ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ ತಮ್ಮ ಸಹಭಾಗಿತ್ವ ಇರುವಂತೆ ನೋಡಿಕೊಳ್ಳಲೂ, ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯದಿರುವ ಯಜಮಾನಿ ಮಹಿಳೆಯರಿಗೆ ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು, ಸೆಪ್ಟೆಂಬರ್ ತಿಂಗಳನ್ನು ‘ಪೋಷಣ್ ಮಾಹೆ’ ಎಂದು ಆಚರಿಸುತ್ತಿರುವುದರಿಂದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪಾಲಕರಲ್ಲಿ ಕೋರಲಾಯಿತು ಎಂದು ಅವರು ಹೇಳಿದ್ದಾರೆ.

ಸಭೆಗೆ ಹಾಜರಾದ ಪಾಲಕರ ವಿವರ

ವಿಜಯಪುರ ನಗರ ವಲಯದಲ್ಲಿ 351 ಅಂಗನವಾಡಿ ಕೇಂದ್ರಗಳಿದ್ದು, 15874 ಮಕ್ಕಳು ಈ ಕೇಂದ್ರದಲ್ಲಿ ದಾಖಲಾಗಿದ್ದಾರೆ.  9400 ಪಾಲಕರು, ವಿಜಯಪುರ ಗ್ರಾಮೀಣ ವಲಯದಲ್ಲಿನ 400 ಅಂಗನವಾಡಿ ಕೇಂದ್ರಗಳಲ್ಲಿ 18256 ದಾಖಲಾತಿ ಇದ್ದು, 10865 ಪಾಲಕರು, ಸಿಂದಗಿ ವಲಯದಲ್ಲಿ 486 ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ 38432 ಇದ್ದು, 5400 ಪಾಲಕರು ಭಾಗವಹಿಸಿದ್ದರು.

ಚಡಚಣ ವಲಯದಲ್ಲಿ 198 ಅಂಗನವಾಡಿ ಕೇಂದ್ರಗಳಲ್ಲಿ 21509 ಮಕ್ಕಳು ದಾಖಲಾಗಿದ್ದು, 3200 ಪಾಲಕರು, ಮುದ್ದೇಬಿಹಾಳ ವಲಯದಲ್ಲಿ 458 ಅಂಗನವಾಡಿ ಪೈಕಿ, 33065 ದಾಖಲಾಗಿದ್ದು, 6450 ಪಾಲಕರು, ಇಂಡಿ ವಲಯದ 406 ಅಂಗನವಾಡಿ ಕೇಂದ್ರಗಳಲ್ಲಿ 37455 ಮಕ್ಕಳ ದಾಖಲಾತಿ ಇದ್ದು, 5735 ಪಾಲಕರು ಹಾಗೂ ಬಸವನ ಬಾಗೇವಾಡಿ ವಲಯದ 456 ಅಂಗನವಾಡಿಯಲ್ಲಿ 37384 ಮಕ್ಕಳ ದಾಖಲಾತಿ ಇರುವ ಈ ಅಂಗನವಾಡಿ ಕೇಂದ್ರಗಳಲ್ಲಿ 7265 ಪಾಲಕರು ಸೇರಿದಂತೆ, ಒಟ್ಟಾರೆ ಜಿಲ್ಲೆಯ 2755 ಅಂಗನವಾಡಿ ಕೇಂದ್ರಗಳಲ್ಲಿ ನಡೆದ ಸಭೆಯಲ್ಲಿ 48315 ಪಾಲಕರು ಭಾಗವಹಿಸಿದ್ದರು ಎಂದು ಜಿ. ಪಂ. ಸಿಇಓ ತಿಳಿಸಿದ್ದಾರೆ.

ಮುಂಬರುವ ಪಾಲಕರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಸಹಕರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಇರುವ ಪಾಠೋಪಕರಣ ಹಾಗೂ ಪೀಠೋಪಕರಣ, ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ತಮ್ಮೂರಿನ ಎಳೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕೋರಲಾಯಿತು.

ಇಲಾಖೆಯ ಉಪನಿರ್ದೇಶಕರು  ಮತ್ತು ಪ್ರತಿ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಅಂಗನವಾಡಿ ಪಾಲಕರ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಭೆಯಲ್ಲಿ ಪಾಲ್ಗೊಂಡಿದ್ದ ಪಾಲಕರ-ಪೋಷಕರ ಅಭಿಪ್ರಾಯಗಳು

ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆಯನ್ನು ಕರೆದಿರುವುದರಿಂದ ಸಂತಸ ತಂದಿದೆ.ಅಂಗನವಾಡಿಯಲ್ಲಿ ಮಕ್ಕಳ ಶಾಲಾ ಪೂರ್ವ ಶಿಕ್ಷಣವನ್ನು ಗಮನಿಸಲು ಸಹಾಯಕವಾಗಿದೆ. ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಹಂತ-ಹಂತವಾಗಿ ಕಾಣಬಹುದಾಗಿದೆ. ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ವಿವಿಧ ಕೌಶಲ್ಯ- ಸೃಜನಾತ್ಮಕತೆ ಅವರ ಭಾಗವಹಿಸುವಿಕೆಯಿಂದ ತಿಳಿದುಕೊಳ್ಳಬಹುದಾಗಿದೆ. ಕುಂಠಿತ ಬೆಳವಣಿಗೆಯಿರುವ ಮಕ್ಕಳ ಬಗ್ಗೆ ಮುಂಜಾಗ್ರತಾ ಕ್ರಮಗಳು ಹಾಗೂ ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ ತಿಳಿಯಲು ಸಹಾಯಕವಾಗುವುದು. ಕೇಂದ್ರಗಳ ಉನ್ನತೀಕರಣದ ಬಗ್ಗೆ ಚರ್ಚಿಸಲು ಸಹಾಯಕವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ. ಮಕ್ಕಳ ಮುಂದಿನ ಶಾಲಾ ಜೀವನದ ನಿಯಮಗಳನ್ನು ಅಂಗನವಾಡಿ ಕೇಂದ್ರದಲ್ಲಿ ಬುನಾದಿಯಾಗಿ ಪರಿವರ್ತಿಸಿಕೊಳ್ಳಲು ಸಹಾಯಕವಾಗಿದೆ. ಕೇಂದ್ರದ ಎಲ್ಲ ಚಟುವಟಿಕೆ, ಬೆಳವಣಿಗೆಯ ಪರಿಶೀಲನೆ ಹಾಗೂ ಮೇಲ್ವಿಚಾರಣೆ ಮಾಡಲು ಪಾಲಕರ ಸಭೆ ಒಂದು ವೇದಿಕೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಪಾಲಕರ ಅನಿಸಿಕೆ ಹಂಚಿಕೊಂಡರು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ. ಕೆ. ಚವ್ಹಾಣ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌