ಕಲ್ಪವೃಕ್ಷ ರಕ್ಷಣೆಗಾಗಿ ಆಸ್ಪತ್ರೆ ವಿನ್ಯಾಸ ಬದಲಿಸಿದ ಚಿಕ್ಕಮಕ್ಕಳ ತಜ್ಞ- ಇವರ ಪರಿಸರ ಪ್ರೇಮ ಇತರರಿಗೆ ಮಾದರಿ

ಮಹೇಶ ವಿ. ಶಟಗಾರ

ವಿಜಯಪುರ- ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ಮರಗಳನ್ನು ಕಡಿದು ಹಾಕುವ ಘಟನೆಗಳು‌ ಆಗಾಗ ನಡೆಯುತ್ತಲೇ ಇರುತ್ತವೆ. ರಸ್ತೆ ಅಗಲೀಕರಣ, ಕಟ್ಟಡಗಳ‌ ನಿರ್ಮಾಣ, ರೈಲು ಮಾರ್ಗ ನಿರ್ಮಾಣದಂಥ ಸಂದರ್ಭಗಳಲ್ಲಿ ಸಾವಿರಾರು ಮರಗಳನ್ನು ಧರೆಗುರುಳಿಸಲಾಗುತ್ತದೆ.

ಕಡಿಮೆಯಾಗುತ್ತಿರುವ ಗಿಡ ಮರಗಳನ್ನು ಬೆಳೆಸಲು ಮತ್ತು ಅರಣ್ಯ ಪ್ರದೇಶವನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯತ್ತಲೇ ಇರುತ್ತವೆ. ಒಂದು ವೃಕ್ಷ ಕಡಿದರೆ 10 ವೃಕ್ಷಗಳನ್ನು ನೆಡಬೇಕು. ಕಡಿಮೆಯಾಗುತ್ತಿರುವ ಅರಣ್ಯವನ್ನು ವೃದ್ಧಿಸಲು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಗಳು ಹಾಗೂ ಆ ಬೇಡಿಕೆಗಳಿಗೆ ಪೂರಕವಾಗಿ ಕೋಟಿ ವೃಕ್ಷ ಅಭಿಯಾನದಂಥ ಕಾರ್ಯಕ್ರಮಗಳೂ ಬಸವ ನಾಡಿನಲ್ಲಿ ನಡೆಯುತ್ತಿವೆ.

ವಿಜಯಪುರದ ಡಾ. ಎಲ್. ಎಚ್. ಬಿದರಿ ಅವರ ಆಸ್ಪತ್ರೆಯ ಒಳಗಡೆ ಇರುವ ತೆಂಗಿನ ಮರ

ಇಂಥ ಅಭಿವೃದ್ಧಿ ಕಾಮಗಾರಿ‌ ಕೈಗೊಳ್ಳುವಾಗ ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗಿನ ಮರದ ರಕ್ಷಣೆಗಾಗಿ ಚಿಕ್ಕಮಕ್ಕಳ ತಜ್ಞರೊಬ್ಬರು ತಮ್ಮ ಆಸ್ಪತ್ರೆಯ ವಿನ್ಯಾಸವನ್ನೇ ಬದಲಿಸಿ ಪರಿಸರ ಪ್ರೇಮ ಮೆರೆದಿದ್ದಾರೆ. ತಮ್ಮ ಅನುಭವ ಮತ್ತು ಕೈಗುಣಗಳ ಮೂಲಕ ಮಕ್ಕಳ ಪಾಲಿಗೆ ವೈದ್ಯೋ ನಾರಾಯಣ ಹರಿ ಎಂಬ ನಾಣ್ಣುಡಿಗೆ ತಕ್ಕಂತೆ ಕೆಲಸ ಮಾಡುತ್ತಿರುವ ಈ ವೈದ್ಯರ ಹೆಸರು ಡಾ. ಎಲ್. ಎಚ್. ಬಿದರಿ. ವೈದ್ಯ ವೃತ್ತಿಯ ಜೊತೆಗೆ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳು ಮತ್ತು ಯೋಜನೆಗಳ ಬಗ್ಗೆ ಜನಜಾಗೃತಿಯನ್ನೂ ಮೂಡಿಸುತ್ತಿರುವ ಇವರು ಜನರಿಗೆ ಉತ್ತಮ ಸೇವೆ ದೊರಕಲಿ ಎಂಬ ಸಹೃದಯವನ್ನೂ ಹೊಂದಿದ್ದು, ಇವರು ಮೂರ್ನಾಲ್ಕು ದಶಕಗಳ ಹಿಂದೆ ಪ್ರಾರಂಭಿಸಿರುವ ಅಶ್ವಿನಿ ಆಸ್ಪತ್ರೆ ವಿಜಯಪುರ ಮಾತ್ರವಲ್ಲ ಬೇರೆ ಜಿಲ್ಲೆ ಮತ್ತು ನೆರೆಯ ಮಹಾರಾಷ್ಟ್ರದ ರೋಗಿಗಳ ಪಾಲಿಗೆ ವರದಾನವಾಗಿದೆ.

ಡಾ. ಎಲ್. ಎಚ್. ಬಿದರಿ

ಇವರು ಕೆಲವು ವರ್ಷಗಳ ಹಿಂದೆ ತಮ್ಮ ಆಸ್ಪತ್ರೆಯ ನವೀಕರಣ ಮತ್ತು ಕಟ್ಟಡ ವಿಸ್ತರಣೆ ಸಂದರ್ಭದಲ್ಲಿ ತೆಂಗಿನ‌ ಮರಗಳು ಆಸ್ಪತ್ರೆಯ ಒಳಾಂಗಣದ ವ್ಯಾಪ್ತಿಯಲ್ಲಿ ಬೆಳೆದು ಕಟ್ಟಡಕ್ಕೆ ಅಡ್ಡಿಯಾಗಿದ್ದವು. ಆದರೆ, ಇತರರಂತೆ ಯೋಚಿಸದ ಅವರು ಆ ತೆಂಗಿನ ಮರಗಳ ಸುತ್ತ ಮೇಲ್ಛಾವಣಿ ಬರುವಂತೆ ಮತ್ತು ಆ ಮರಕ್ಕೆ ಕಿಂಚಿತ್ತೂ ತೊಂದರೆಯಾಗದಂತೆ ಕಟ್ಟಡದ ವಿನ್ಯಾಸ ಬದಲಿಸಿದ್ದಾರೆ.  ಮರದ ಒಂದು ಬುಡ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗುವ ಕೋಣೆಯ ಒಳಭಾಗದಲ್ಲಿದ್ದು, ಅದಕ್ಕೆ ಬಿಳಿ ಬಣ್ಣ ಬಳಿದು ಯಾರಿಗೂ ಇದು ತೆಂಗಿನ ಮರ ಎಂದು ಭಾಸವಾಗದಂತೆ ಆಕರ್ಷಣೀಯವಾಗಿ ಮಾಡಿದ್ದಾರೆ.

ಈ ಆಸ್ಪತ್ರೆಯ ಕಟ್ಟಡ ವಿಸ್ತರಣೆ ಮತ್ತು ನವೀಕರಣ ಸಂದರ್ಭದಲ್ಲಿ ಕಲ್ಪವಕ್ಷ ಎಂದೇ ಕರೆಯಲಾಗುವ ತೆಂಗಿನ ಮರ ಅಡ್ಡಿಯಾಗಿತ್ತು.  ಆಗ ವೈದ್ಯರ ಸಂಬಂಧಿಗಳು ಮತ್ತು ಆಸ್ಪತ್ರೆಯ ಬಹುತೇಕ ಸಿಬ್ಬಂದಿ ಈ ಮರವನ್ನು ತೆಗೆದು ಬೇರೆ ಕಡೆ ಮರ ನೆಟ್ಟರಾಯಿತು ಎಂದು ಸಲಹೆ ನೀಡಿದರು.  ಆದರೆ, ಡಾ. ಎಲ್. ಎಚ್. ಬಿದರಿ ಮಾತ್ರ ಇದಕ್ಕೆ ಸುತಾರಾಂ ಒಪ್ಪಲಿಲ್ಲ.  ಏನಾದರೂ ಮಾಡಿ.  ಈ ಮರ ಉಳಿಯಲೇ ಬೇಕು ಎಂದು ಕಟ್ಟಡದ ವಿನ್ಯಾಸ ರೂಪಿಸಿದ ಎಂಜಿನಿಯರ್ ಮತ್ತು ಕಟ್ಟಡ ನಿರ್ಮಾಪಕರಿಗೆ ಸೂಚನೆ ನೀಡಿದರು.  ಹೀಗಾಗಿ ಈಗ ಮರ ಈಗ ಉಳಿಸುವುದು ಅನಿವಾರ್ಯವಾಯಿತು.  ಇದು ನಮ್ಮ ಸರ್ ಪರಿಸರದ ಬಗ್ಗೆ ಹೊಂದಿರುವ ಪ್ರೀತಿಗೆ ಸಾಕ್ಷಿ ಎನ್ನುತ್ತಾರೆ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ರೇವಣಸಿದ್ಧೇಶ್ವರ ವಿ ಹಿರೇಮಠ.

ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಧರೆಗುರುಳಬೇಕಿದ್ದ ಕಲ್ಪವೃಕ್ಷಕ್ಕೆ ಕಾಯಕಲ್ಪ ನೀಡಿರುವ ವೈದ್ಯರ ಈ ಪರಿಸರ ಪ್ರೇಮ ಕಾರ್ಯ ಇತರರಿಗೂ ಮಾದರಿಯಷ್ಟೇ ಅಲ್ಲ, ಸ್ಪೂರ್ತಿಯೂ ಆಗಿದೆ.  ಡಾ. ಲಕ್ಷ್ಮಣ ಎಚ್. ಬಿದರಿ ಅವರ ಈ ಕಾರ್ಯಕ್ಕೆ ಬಸವ ನಾಡು ವೆಬ್ ಕೂಡ ಅಭಿನಂದನೆ ಸಲ್ಲಿಸುತ್ತದೆ.

Leave a Reply

ಹೊಸ ಪೋಸ್ಟ್‌