ಮಾಧ್ಯಮಗಳಲ್ಲಿರುವ ಹತ್ತಾರು ಅವಕಾಶಗಳನ್ನು ಪತ್ರಿಕೋದ್ಯಮ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು- ಡಾ. ವಿಲಾಸ ನಾಂದೋಡಕರ

ವಿಜಯಪುರ: ಮಾಧ್ಯಮ ಒಂದು ಆಸಕ್ತಿದಾಯಕ ಕ್ಷೇತ್ರವಾಗಿದ್ದು, ಹತ್ತು-ಹಲವಾರು ಅವಕಾಶಗಳಿದ್ದು ನೀವೆಲ್ಲ ವಿದ್ಯಾರ್ಥಿಗಳು ಅದರ ಸದುಪಯೋಗಪಡೆಸಿಕೊಳ್ಳಬೇಕು ಎಂದು ಬೆಂಗಳೂರಿನ ಟಿವಿ9 ಕನ್ನಡ ಸುದ್ದಿವಾಹಿನಿಯ ಇನ್‌ಪುಟ್ ಮುಖ್ಯಸ್ಥ ಮತ್ತು ಮುಖ್ಯ ಕಾರ್ಯ ನಿರ್ವಾಹಕ ನಿರ್ಮಾಪಕ ಡಾ. ವಿಲಾಸ ನಾಂದೋಡ್ಕರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ.

ವಿಜಯಪುರ ನಗರದ ಹೊರ ವಲಯದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮಹಿಳಾ ಮಿಡಿಯಾ ಕ್ಲಬ್ ಮತ್ತು ಐಎಎಸ್ ಅಧಿಕಾರಿ ಗಂಗೂಬಾಯಿ ಮಾನಕರ ಅವರು ತಮ್ಮ ಅಜ್ಜ ಮಲ್ಲಪ್ಪ ರಾಮಪ್ಪ ಮಾನಕರ ಅವರ ಹೆಸರಿನಲ್ಲಿ ಸ್ಥಾಪಿಸಿರುವ ದತ್ತಿನಿಧಿ ಅಡಿಯಲ್ಲಿ ಬುಧವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಟಿವಿ ನ್ಯೂಸ್ ಬುಲೆಟಿನ್ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿಗೆ ಬಂದಿರುವ ಬ್ಲಾಗ್ ಬರವಣಿಗೆ, ರೀಲ್ಸ್ ಹವ್ಯಾಸ, ಪೋಟೋಗ್ರಾಫಿ, ಆ್ಯಡ್ ಎಜೆನ್ಸಿ ಹಲವಾರು ವೃತ್ತಿಗಳು ಮಾಧ್ಯಮ ಕ್ಷೇತ್ರಗಳಲ್ಲಿವೆ. ನೀವು ವಿದ್ಯಾರ್ಥಿ ದೆಸೆಯಿಂದಲೇ ನಿಮ್ಮಲ್ಲಿರುವ ಕೌಶಲ್ಯಗಳನ್ನು ಗುರುತಿಸಿಕೊಂಡು ಅಭಿವೃದ್ಧಿಪಡಿಸಿಕೊಳ್ಳುವ ಮೂಲಕ ಅಂತಹ ಆಸಕ್ತಿ ಕ್ಷೇತ್ರಗಳನ್ನು ಅರಸಿ ಹೋಗಬಹುದು. ಅಷ್ಟೇ ಅಲ್ಲದೇ ಮನೆಯಲ್ಲಿಯೇ ಕುಳಿತುಕೊಂಡು ಕೆಲಸ ಮಾಡುವ ಅವಕಾಶಗಳು  ಸಹ ನಿಮಗೆ ದೊರಕಲಿವೆ ಎಂದರು.

ನಮ್ಮಲ್ಲಿರುವ ಜ್ಞಾನ, ಸತತವಾದ ಪ್ರಯತ್ನ ಮತ್ತು ಆಸಕ್ತಿ ಹೊಂದಿದವರಿಗೆ ಮುಕ್ತವಾದ ವೇದಿಕೆಗಳನ್ನು ಈ ರಂಗ ಒದಗಿಸಿದೆ. ನಾವು ಸದಾ ಓದು, ಬರವಣಿಗೆ ಮತ್ತು ಭಾಷೆ ಮೇಲೆ ಹಿಡಿತ ಸಾಧಿಸಿದ್ದೇ ಆದಲ್ಲಿ ಔದ್ಯೋಗಿಕ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಪ್ರೊ. ಓಂಕಾರಗೌಡ ಕಾಕಡೆ ಮಾತನಾಡಿ, ಟಿವಿ ನ್ಯೂಸ್ ಬುಲೆಟಿನ್ ತಯಾರಿಕೆಯಲ್ಲಿ ಕೃತಕ ಬುದ್ದಿಮತ್ತೆ ಉಪಯೋಗಿಸುವ ಹೊಸ ಹೊಸ ತಂತ್ರಜ್ಞಾನಗಳನ್ನು ಟಿವಿ ಸಂಸ್ಥೆಗಳು ಅಳವಡಿಸಿಕೊಳ್ಳುತ್ತಿದ್ದು, ವಿದ್ಯಾರ್ಥಿಗಳು ಕೂಡಾ ಈ ತಂತ್ರಜ್ಞಾನದ ಕೌಶಲ್ಯಗಳನ್ನು ಕಲಿತುಕೊಳ್ಳುವ ಮೂಲಕ ಉದ್ಯೋಗವಕಾಶಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಾಧ್ಯಮ ಕ್ಷೇತ್ರದಲ್ಲಿ ಹಲವಾರು ಕ್ಷಿಪ್ರಗತಿಯ ತಂತ್ರಜ್ಞಾನದ ಬೆಳವಣಿಗೆಗಳು ನಡೆಯುತ್ತಿದ್ದು ಈ ಎಲ್ಲಾ ತಾಂತ್ರಿಕ ಬದಲಾವಣೆಗಳನ್ನು ಅಳವಡಿಸಿಕೊಳ್ಳುವ ಮೂಲಕ ತಂತ್ರಜ್ಞಾನದ ಜತೆ ಜತೆಗೆ ಸಾಗಬೇಕು ಎಂದು ಅವರು ಹೇಳಿದರು.

ಬದಲಾಗಿರುವ ಸನ್ನಿವೇಶದಲ್ಲಿ ಪತ್ರಕರ್ತರು ಮುದ್ರಣ, ಟಿವಿ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ಏಕಕಾಲಕ್ಕೆ ಕೆಲಸ ಮಾಡಬೇಕಿದೆ. ಹೀಗಾಗಿ ಮಾಧ್ಯಮ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಬರವಣಿಗೆ, ಭಾಷಾಂತರ, ವಿಡಿಯೋ ಎಡಿಟಿಂಗ್, ಗ್ರಾಫಿಕ್ ಡಿಸೈನಿಂಗ್ ಮತ್ತು ಡಿಜಿಟಲ್ ಬರವಣಿಗೆಗಳ ಕೌಶಲ್ಯಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದ ವಿಭಾಗದ ಸಹಾಯಕ ಪ್ರಾಧ್ಯಾಪಕ ಸಂದೀಪ ಮಾತನಾಡಿ, ತಂತ್ರಜ್ಞಾನಗಳ ಅಭಿವೃದ್ಧಿಯಿಂದಾಗಿ ಟಿವಿ ವಾಹಿನಿಗಳಲ್ಲಿ ಸುದ್ದಿ ಪ್ರಸ್ತುತ ಪಡಿಸುವ ವಿಧಾನದಲ್ಲಿ ಹಲವಾರು ಬದಲಾವಣೆಗಳಾಗಿವೆ. ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡಲು ಬಯಸುವ ವಿದ್ಯಾರ್ಥಿಗಳು ಬರವಣಿಗೆ ಜೊತೆಗೆ ತಂತ್ರಜ್ಞಾನದ ಜ್ಞಾನವನ್ನು ಸಹ ಪಡೆದುಕೊಳ್ಳುವುದು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಸುದ್ದಿ ನಿರ್ಮಾಣದ ವಿವಿಧ ಹಂತಗಳ ಬಗ್ಗೆ ಸಂಪೂರ್ಣವಾದ ತರಬೇತಿ ನೀಡುವುದು ಈ ಕಾರ್ಯಾಗಾರದ ಮುಖ್ಯ ಉದ್ದೇಶವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಡಾ. ವಿಲಾಸ ನಾಂದೋಡ್ಕರ ಅವರನ್ನು ಪತ್ರಿಕೋದ್ಯಮ ವಿಭಾಗದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ವಿಭಾಗದ ಸಹಾಯಕ ಪ್ರಧ್ಯಾಪಕಿ ಡಾ.ತಹಮೀನಾ ಕೋಲಾರ ಸ್ವಾಗತಿಸಿದರು, ಸಂಶೋಧನಾ ವಿದ್ಯಾರ್ಥಿಗಳಾದ ಪಿಲೋಮಿನಾ ಅತಿಥಿಗಳನ್ನು ಪರಿಚಯಿಸಿದರು. ದೀಪಾ ತಟ್ಟಿಮನಿ ನಿರೂಪಿಸಿದರು.  ಸುಷ್ಮಾ ಪವಾರ ವಂದಿಸಿದರು.  ಕಾರ್ಯಕ್ರಮದಲ್ಲಿ ಬೋಧÀಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು, ಸಂಶೋಧನಾ ಹಾಗೂ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌