ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಒದಗಿಸಲು ವಿಷಯದಲ್ಲಿ ಶಾಸಕ ಬಸನಗೌಡ ಪಾಟೀಲ ತಮ್ಮ ಸರಕಾರದಲ್ಲಿ ನ್ಯಾಯ ಒದಗಿಸಿದ್ದಾರೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯತ್ನಾಳ ಅವರು ತಮ್ಮ ಸರಕಾರದ ಅವಧಿಯಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟಗಾರರಿಗೆ ನ್ಯಾಯ ಕೊಡಿಸಿದ್ದಾರೆ ಎಂದು ಹೇಳಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಮ್ಮ ಸರಕಾರದ ಅವಧಿಯಲ್ಲಿ ತಮ್ಮ ಸಮಾಜಕ್ಕೆ ಏನು ಕೊಡುಗೆ ಕೊಡಬೇಕು ಅದನ್ನು ಕೊಡಿಸಿದ್ದಾರೆ. ಈ ಮೂಲಕ ನ್ಯಾಯ ಕೊಡಿಸಿದ್ದಾರೆ. ಈಗ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರುವ ಕಾರಣ ಅವರು ಹೋರಾಟದಲ್ಲಿ ಭಾಗಿಯಾಗಿಲ್ಲ. ಈ ಸರಕಾರದಲ್ಲಿರುವ 11 ಜನ ಪಂಚಮಸಾಲಿ ಸಮುದಾಯದ ಶಾಸಕರಿದ್ದು ಅವರು ಹೋರಾಟ ಮುಂದಿವರೆಸಲಿ ಎಂದಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಅವರನ್ನು ಹೋರಾಟದ ಸಂದರ್ಭದಲ್ಲಿ ಯಾವ ರೀತಿ ಬಳಸಿಕೊಳ್ಳಬೇಕು ಆ ರೀತಿ ಸಹಾಯ ಪಡೆಯುತ್ತೇವೆ. ಅವರು ಯಾವತ್ತೂ ಮಾನಸಿಕವಾಗಿ ನಮ್ಮ ಜೊತೆ ಇದ್ದೆ ಇರುತ್ತಾರೆ. ಈಗ ಅಧಿಕಾರದಲ್ಲಿರುವ ಕಾಂಗ್ರೆಸ್ ಶಾಸಕರು ಒತ್ತಡ ತರಲಿ ಎಂಬುದ ಅವರ ಉದ್ದೇಶವಾಗಿದೆ. ಈಗ ಕಾಂಗ್ರೆಸ್ಸಿನಲ್ಲಿರುವ ಪಂಚಮಸಾಲಿ ಸಚಿವರಾದ ಶಿವಾನಂದ ಪಾಟೀಲ ಮತ್ತು ಲಕ್ಷ್ಮಿ ಹೆಬ್ಬಾಳಕ ಅವರಿಗೆ ಈ ಕುರಿತು ಮನವಿ ಮಾಡಿದ್ದೇನೆ. ಪಾರ್ಲಿಮೆಂಟ್ ಚುನಾವಣೆಯೊಳಗೆ ನಮಗೆ 2ಎ ಮೀಸಲಾತಿ ಮತ್ತು ಎಲ್ಲ ಲಿಂಗಾಯಿತರನ್ನು ಓಬಿಸಿಗೆ ಸೇರಿಸಲು ಒತ್ತಾಯಿಸಿದ್ದೇನೆ. ಈಗಾಗಲೇ ಹಾಲುಮತ ಸಮಾಜವನ್ನು ಕೇಂದ್ರ ಸರಕಾರಕ್ಕೆ ಶಿಫಾರರು ಮಾಡಿರುವ ಉದಾಹರಣೆ ಇದೆ. ಈ ಹಿನ್ನೆಲೆಯಲ್ಲಿ ಎಲ್ಲ ಲಿಂಗಾಯಿತರನ್ನು ಕೇಂದ್ರ ಓಬಿಸಿ ಪಟ್ಟಿಗೆ ಸೇರಿಸಲು ಆಗ್ರಹಿಸಿದ್ದೇನೆ. 2024ರ ಒಳಗೆ ಮುಖ್ಯಮಂತ್ರಿಗಳು ಯಾವ ರೀತಿಯಲ್ಲಿ ಪ್ರಯತ್ನ ಮಾಡುತ್ತಾರೋ ಮಾಡಲಿ ಎಂಬ ಉದ್ದೇಶದಿಂದ ಮೊದಲ ಹಂತದಲ್ಲಿ ಶಾಂತಿಯುತವಾಗಿ ಹೋರಾಟವನ್ನು ಮುಂದುವರೆಸಿದ್ದೇವೆ ಎಂದು ಹೇಳಿದರು.
ಹೊಸ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಎಲ್ಲ ಶಾಸಕರು ಸಿಎಂ ಅವರನ್ನು ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೇವೆ. ಸಭೆ ಕರೆಯುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೆ ಸಭೆ ಕರೆಯದ ಕಾರಣ ಶಾಸಕ ವಿನಯ ಕುಲಕರ್ಣಿ ಈ ಕುರಿತು ಧ್ವನಿ ಎತ್ತಿದ್ದಾರೆ. ಈಗ ಸರಕಾರ ರಚನೆಯಾಗಿದ್ದರಿಂದ ಹೋರಾಟವನ್ನು ತೀವ್ರಗೊಳಿಸುವುದಿಲ್ಲ. ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಐದು ವರ್ಶ ಶಾಂತವಾಗಿದ್ದೇವು. ಮುಂದೆ ಅವರು ಎರಡನೇ ಬಾರಿ ಸಿಎಂ ಆಗಿದ್ದಾಗ ಶಾಂತಿಯುತವಾಗಿ ಹೋರಾಟ ಪ್ರಾರಂಭ ಮಾಡಿದ್ದೇವು. ಆದರೂ, ಅವರು ಬೆಂಡ್(ಮಣಿಯಲಿಲ್ಲ) ಆಗಲಿಲ್ಲವೋ ಆಗ ಮತ್ತೆ ಹೋರಾಟ ತೀವ್ರ ಮಾಡಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.
ಯತ್ನಾಳ ಮನವೊಲಿಸುವ ಕೆಲಸ ಮಾಡುತ್ತಿರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ. ಎಲ್ಲ ಭಾರವನ್ನು ಒಬ್ಬರ ಮೇಲೆ ಹಾಕಲು ಆಗುವುದಿಲ್ಲ. ಈಗ ಕಾಂಗ್ರೆಸ್ ಶಾಸಕರಿದ್ದು, ಅವರು ಹೋರಾಟ ಮುಂದುವರೆಸುತ್ತಾರೆ. ಈಗೀನ ಸರಕಾರಕ್ಕೆ ಯಾವುದೇ ಡೆಡ್ ಲೈನ್ ನೀಡುವುದಿಲ್ಲ. ಸರಕಾರ ಬಂದು ಮೂರು ತಿಂಗಳಾಗಿದೆ. ಮುಂದಿನ ದಿನಗಳಲ್ಲಿ ನಮ್ಮನ್ನು ಕರೆದು ಮಾತನಾಡುವ ಆಶಯ ಇದೆ. ರಾಜ್ಯದ ನಾನಾ ಜಿಲ್ಲೆಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಮೊದಲ ಹಂತದ ಹೋರಾಟ ನಡೆಯುತ್ತಿದೆ. ಮೊದಲ ಹಂತದ ಹೋರಾಟ ಮುಗಿದ ಬಳಿಕ ಮುಂದಿನ ಹೋರಾಟದ ರೂಪರೇಷೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.
ಲಿಂಗಾಯತ ಸಮಾಜಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ವಿಚಾರ.
ಒಂದು ವೇಳೆ ಕಾಂಗ್ರೆಸ್ ಪಕ್ಷ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಪಂಚಮಸಾಲಿ ಸಮಾಜಕ್ಕೆ ನೀಡಲಿ. ನಮ್ಮ ಸಮಾಜದ 11 ಶಾಸಕರು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದಾರೆ. ಲಿಂಗಾಯತರಿಗೆ ನೀಡುವುದಾದರೆ ಪಂಚಮಸಾಲಿ ಸಮಾಜಕ್ಕೆ ನೀಡಲಿ ಎಂದು ಹೇಳುವ ಮೂಲಕ ಸ್ವಾಮೀಜಿ ಪಂಚಮಸಾಲಿ ಸಮಾಜಕ್ಕೆ ಡಿಸಿಎಂ ಸ್ಥಾನದ ಬೇಡಿಕೆಯಿಟ್ಟರು.
ಯತ್ನಾಳಗೆ ಪ್ರತಿಪಕ್ಷದ ನಾಯಕನ ಸ್ಥಾನ ವಿಚಾರ
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೆ ಪ್ರತಿಪಕ್ಷದ ನಾಯಕನಾಗಬೇಕು ಎಂದು ಜನ ಬಯಸಿದ್ದಾರೆ. ಬಿಜೆಪಿ ಹೈಕಮಾಂಡ್ ಇದನ್ನು ಗಮನಿಸಲಿ ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಿಜೆಪಿ ನಾಯಕರಿಗೆ ಸಲಹೆ ನೀಡಿದರು.