ಬಡ ವಿದ್ಯಾರ್ಥಿಗಳು ವೈದ್ಯರಾಗುವ ಕನಸು ನನಸು ಮಾಡಲು ಸಹಾಯ ಹಸ್ತ ಚಾಚಿದ ಸಚಿವ ಎಂ. ಬಿ. ಪಾಟೀಲ

ವಿಜಯಪುರ: ನೀಟ್ ಪಾಸಾಗಿ ವೈದ್ಯಕೀಯ ಸೀಟು ಸಿಕ್ಕರೂ ಆರ್ಥಿಕ ಸಮಸ್ಯೆಯಿಂದಾಗಿ ಪರದಾಡುತ್ತಿದ್ದ ಇಬ್ಬರು ಬಡ ವಿದ್ಯಾರ್ಥಿಗಳಿಗೆ ಎಂ.ಬಿ.ಬಿ.ಎಸ್. ಪ್ರವೇಶ ಪಡೆಯಲು ನೆರವಾಗುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ಸಹಾಯ ಹಸ್ತ ಚಾಚಿದ್ದಾರೆ‌.

ಬಬಲೇಶ್ವರ ತಾಲೂಕಿನ ಸಂಗಾಪೂರ ಎಸ್. ಎಚ್. ಮತ್ತು ವಿಜಯಪುರ ತಾಲೂಕಿನ ಬರಟಗಿ ಗ್ರಾಮದ ಬಡ ವಿದ್ಯಾರ್ಥಿಗಳ ವೈದ್ಯಕೀಯ ಶಿಕ್ಷಣ ವೆಚ್ಚವನ್ನು ಬಿ. ಎಲ್. ಡಿ. ಇ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಸಚಿವ ಎಂ. ಬಿ. ಪಾಟೀಲ ಅವರು ಭರಿಸುವ ಮೂಲಕ ವಿದ್ಯಾರ್ಥಿಗಳ ವೈದ್ಯರಾಗುವ ಕನಸು ನನಸಾಗಲು ಕಾರಣರಾಗಿದ್ದಾರೆ.

ಸಂಗಾಪೂರ ಎಸ್.ಎಚ್ ಗ್ರಾಮದ ಸಚಿನ ಶ್ರೀಶೈಲ ಜಾನೋಜಿ ಹುಬ್ಬಳ್ಳಿ ಕಿಮ್ಸ್ ಕಾಲೇಜಿನಲ್ಲಿ ಎಂ. ಬಿ. ಬಿ. ಎಸ್. ಸೀಟು ಪಡೆದಿದ್ದು, ಮೊದಲ ವರ್ಷದ ಪ್ರವೇಶ ಮತ್ತೀತರ ಶುಲ್ಕವಾದ ರೂ.120140 ಮತ್ತು ಬರಟಗಿ ಗ್ರಾಮದ ಲಕ್ಷ್ಮೀ ಶ್ರೀಧರ ಹೆಗಡೆ ವಿಜಯಪುರದ ಅಲ್- ಅಮೀನ್ ಮೆಡಿಕಲ್ ಕಾಲೇಜಿನಲ್ಲಿ ಸೀಟು ಪಡೆದಿದ್ದು, ಅವರಿಗೆ ಮೊದಲ ವರ್ಷದ ಪ್ರವೇಶ ಮತ್ತೀತರ ಶುಲ್ಕವಾದ ರೂ.171696 ಚೆಕ್ ನ್ನು ಬಿ.ಎಲ್.ಡಿ.ಇ ನಿರ್ದೇಶಕ ಬಸನಗೌಡ(ರಾಹುಲ) ಎಂ. ಪಾಟೀಲ ಅವರು ಫಲಾನುಭವಿಗಳಿಗೆ ಇಂದು ಗುರುವಾರ ವಿತರಿಸಿದರು.

ಈ ಸಂದರ್ಭದಲ್ಲಿ ಇಬ್ಬರೂ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು, ಬಿ.ಎಲ್.ಡಿ.ಡಿ. ಡೀಮ್ಡ್ ವಿವಿ ರಜಿಸ್ಟ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ, ಹಣಕಾಸು ವಿಭಾಗದ ಎಸ್. ಎಸ್. ಪಾಟೀಲ, ಆನಂದ ಚವ್ಹಾಣ, ಸತೀಶ ನಾಯಕ
ಉಪಸ್ಥಿತರಿದ್ದರು.

ವಿಜಯಪುರ ಜಿಲ್ಲೆಯ ಸಂಗಾಪೂರ ಎಸ್. ಎಚ್. ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ಸಚಿನ ಶ್ರೀಶೈಲ ಜಾನೋಜಿ ಅವರಿಗೆ ಎಂ. ಬಿ. ಬಿ. ಎಸ್. ಪ್ರವೇಶಕ್ಕೆ ಅಗತ್ಯವಾಗಿರುವ ಹಣದ ಚೆಕ್ ನ್ನು ಬಸನಗೌಡ(ರಾಹುಲ) ಎಂ. ಪಾಟೀಲ ವಿತರಿಸಿದರು

ವಿದ್ಯಾರ್ಥಿಗಳು, ಪೋಷಕರ ಸಂತಸ

ಚೆಕ್ ಸ್ವೀಕರಿಸಿದ ಬಳಿಕ ಮಾತನಾಡಿದ ಸಂಗಾಪೂರ ಎಸ್. ಎಚ್. ಗ್ರಾಮದ ಶ್ರೀಶೈಲ ಜಾನೋಜಿ ನನ್ನ ಮಗ ಸಚಿನ ಡಾಕ್ಟರ್ ಆಗುವ ಕನಸು ಹೊಂದಿದ್ದಾನೆ. ಪ್ರಾಥಮಿಕ ಶಿಕ್ಷಣದಿಂದ ಪಿಯುಸಿ ವರೆಗೆ ಉತ್ತಮ ಸಾಧನೆ ಮಾಡಿದ್ದ. ಪಿಯುಸಿ ಯಲ್ಲಿ ಶೇ.98 ರಷ್ಟು ಅಂಕ ಪಡೆದಿದ್ದ. ಆದರೆ, ಹಣಕಾಸಿನ ಸಮಸ್ಯೆಯಿಂದಾಗಿ ಶುಲ್ಕ ಭರಿಸಲು ಸಾಧ್ಯವಾಗಿರಲಿಲ್ಲ. ಕೈಚೆಲ್ಲಿ ಕುಳಿತ ನಮ್ಮ ಪಾಲಿಗೆ ಸಚಿವ ಎಂ. ಬಿ. ಪಾಟೀಲ‌ ಅವರು ದೇವರಂತೆ ಬಂದು ನೆರವಾಗಿದ್ದಾರೆ. ಆರ್ಥಿಕ ನೆರವು ನೀಡುವ ಮೂಲಕ ನಮ್ಮ‌ ಕುಟುಂಬಕ್ಕೆ ದೇವರ ರೂಪದಲ್ಲಿ ಬಂದು ಸಹಾಯ ಮಾಡಿದ್ದಾರೆ ಎಂದು ಹೇಳಿದರು.

ವಿದ್ಯಾರ್ಥಿ ಸಚಿನ ಶ್ರೀಶೈಲ‌ ಜಾನೋಜಿ ಮಾತನಾಡಿ, ನಮ್ಮ ದೇವರು ಎಂ. ಬಿ. ಪಾಟೀಲ ಅವರ ಋಣ ತೀರಿಸಲು ಸಾಧ್ಯವಿಲ್ಲ. ನಾನು ಇಟ್ಟಕೊಂಡಿರುವ ಗುರಿ ಸಾಧಿಸಿ, ಜನರ ಸೇವೆ ಮಾಡುವ ಮೂಲಕ ಅವರ ಋಣ ತೀರಿಸುತ್ತೇನೆ ಎಂದು ಸಂತಸದಿಂದ ಹೇಳಿದರು.

ಬರಟಗಿ ಗ್ರಾಮದ ಶ್ರೀಧರ ಹೆಗಡೆ ಮಾತನಾಡಿ, ನಮ್ಮ ಮಗಳು ಲಕ್ಷ್ಮಿ ಪಿಯುಸಿ ಯಲ್ಲಿ ಶೇ.83.08 ರಷ್ಟು ಅಂಕ ಗಳಿಸಿ, ನೀಟ್‍ನಲ್ಲಿ ಉತ್ತಮ ಸಾಧನೆ ಮಾಡಿದ್ದಳು. ಎಂ.ಬಿ.ಬಿ.ಎಸ್ ಸೀಟ್ ಸಿಕ್ಕಿದ್ದರೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ನಮಗೆ ಕಾಲೇಜಿಗೆ ಲಕ್ಷಗಟ್ಟಲೇ ಶುಲ್ಕ ನೀಡುವುದು ಕಷ್ಟವಾಗಿತ್ತು. ಆದರೆ, ಸಚಿವ ಎಂ. ಬಿ. ಪಾಟೀಲ ಅವರು ನಮಗೆ ಸಹಾಯ ಹಸ್ತ ಚಾಚಿದ್ದು, ಕಾಲೇಜಿನ ಪ್ರವೇಶ, ಬೋಧನೆ ಮತ್ತೀತರ ಶುಲ್ಕಗಳ ಮೊದಲ ಕಂತಿನ ಹಣದ ಚೆಕ್ ನೀಡಿದ್ದಾರೆ. ಅವರಿಗೆ ಎಷ್ಟೇ ಕೃತಜ್ಞತೆ ಸಲ್ಲಿಸಿದರೂ ಸಾಲದು ಎಂದು ಧನ್ಯವಾದ ಅರ್ಪಿಸಿದರು.

ಚೆಕ್ ಸ್ವೀಕರಿಸಿದ ವಿದ್ಯಾರ್ಥಿನಿ ಲಕ್ಷ್ಮಿ ಶ್ರೀಧರ ಹೆಗಡೆ ಮಾತನಾಡಿ, ಸಾಹೇಬರು ನಮಗೆ ಸಹಾಯ ಮಾಡಿದ್ದಾರೆ. ಇದನ್ನು ನಾನು ಎಂದೂ ಮರೆಯುವುದಿಲ್ಲ. ಮುಂದಿನ ದಿನಗಳಲ್ಲಿ ನಾನು ಕೂಡ ಸಚಿವ ಎಂ. ಬಿ. ಪಾಟೀಲ ಅವರಂತೆಯೇ ಬಡ ಮಕ್ಕಳಿಗೆ ಸಹಾಯ ಮಾಡುತ್ತೇನೆ. ಉಚಿತವಾಗಿ ಆರೋಗ್ಯ ತಪಾಸಣೆ ಮಾಡಿ ಅವರ ಋಣ ತೀರಿಸುತ್ತೇನೆ ಎಂದು ಹೇಳಿದ ಮಾತುಗಳು ಅವರ ಕೃತಜ್ಞತೆ ಭಾವನೆಗಳಿಗೆ ಸಾಕ್ಷಿಯಾಗಿತ್ತು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ರಜಿಸ್ಡ್ರಾರ್ ಡಾ. ರಾಘವೇಂದ್ರ ಕುಲಕರ್ಣಿ, ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ.ಆರ್.ಬಿ.ಕೋಟ್ನಾಳ, ವಿದ್ಯಾರ್ಥಿ ಸಚಿನ ಜಾನೋಜಿ, ತಂದೆ ಶ್ರೀಶೈಲ ಜಾನೋಜಿ, ಪ್ರಾಥಮಿಕ ಶಾಲಾ ಶಿಕ್ಷಕ , ಬಿ.ಎಲ್.ಡಿ.ಇ ಹಣಕಾಸು ವಿಭಾಗದ ಎಸ್.ಎಸ್.ಪಾಟೀಲ, ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌