ಆವಾಸ್ ಯೋಜನೆ ಅನುದಾನ ಬಿಡುಗಡೆ- ಜಿಪಿಎಸ್ ಮಾಡಿಸಲು ಅಧಿಕಾರಿಗಳಿಗೆ ಎಂ.ಎಲ್ಸಿ ಸುನೀಲಗೌಡ ಬಿ. ಪಾಟೀಲ ಸೂಚನೆ

ವಿಜಯಪುರ: ಬಬಲೇಶ್ವರ ಹಾಗೂ ತಿಕೋಟಾ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಲ್ಲಿ ಪ್ರಧಾನಮಂತ್ರಿ ಆವಾಸ ಯೋಜನೆಯಡಿ 2021-22 ನೇ ಸಾಲಿನಲ್ಲಿ ವಸತಿ ರಹಿತರಿಗೆ ಮನೆ ಕಟ್ಟಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಆದ್ದರಿಂದ ಕೂಡಲೇ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಈ ಮನೆಗಳ ಜಿ.ಪಿ.ಎಸ್ ಮಾಡಿ, ಫಲಾನುಭವಿಗಳು ಮನೆಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಬಿ. ಪಾಟೀಲ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಿಕೋಟಾ ತಾಲೂಕಿನ ಅರಕೇರಿ, ಬಾಬಾನಗರ, ಬರಟಗಿ, ಬಿಜ್ಜರಗಿ, ಘೋಣಸಗಿ, ಹೊನವಾಡ, ಜಾಲಗೇರಿ, ಕನಮಡಿ, ಕೋಟ್ಯಾಳ, ಲೋಹಗಾಂವ, ಸಿದ್ದಾಪುರ ಕೆ, ತಾಜಪೂರ ಎಚ್, ಟಕ್ಕಳಕಿ, ತೊರವಿ(ಅತಾಲಟ್ಟಿ) ಗ್ರಾಮಗಳಲ್ಲಿ ಒಟ್ಟು 238 ಮನೆಗಳು ಮತ್ತು ಬಬಲೇಶ್ವರ ತಾಲೂಕಿನ ಅರ್ಜುಣಗಿ, ಬೋಳಚಿಕ್ಕಲಕಿ, ದೇವರಗೆಣ್ಣೂರ, ಗುಣದಾಳ, ಹಲಗಣಿ, ಹೊನಗನಹಳ್ಳಿ, ಹೊಸೂರ, ಜೈನಾಪುರ, ಕಂಬಾಗಿ, ಕಾರಜೋಳ, ಕಾಖಂಡಕಿ, ಕುಮಠೆ, ಮಮದಾಪುರ, ನಿಡೋಣಿ, ಸಾರವಾಡ ಗ್ರಾಮಗಳಲ್ಲಿ ಒಟ್ಟು 366 ಮನೆಗಳು ಮಂಜೂರಾಗಿವೆ. ಈ ಎಲ್ಲ ಮನೆಗಳ ನಿರ್ಮಾಣಕ್ಕೆ ಎಸ್.ಸಿ ಫಲಾನುಭವಿಗಳಿಗೆ ರೂ. 43,750 ಮತ್ತು ಇತರೆ ಫಲಾನುಭವಿಗಳಿಗೆ ರೂ.30,000 ಅನುದಾನವನ್ನು ಸರಕಾರ ಫಲಾನುಭವಿಗಳಿಗೆ ಖಾತೆಗಳಿಗೆ ನೇರವಾಗಿ ಜಮೆ ಮಾಡಿದೆ. ಗ್ರಾ.ಪಂ ಅಧಿಕಾರಿಗಳು ಈ ನಿಟ್ಟಿನಲ್ಲಿ ಕೂಡಲೇ ಜಿ.ಪಿ.ಎಸ್ ಮಾಡಿಸಿ, ವಸತಿ ರಹಿತ ಫಲಾನುಭವಿಗಳು ಮನೆ ಕಟ್ಟಿಕೊಳ್ಳುವಂತೆ ಮಾಹಿತಿ ನೀಡಬೇಕು. ಅಲ್ಲದೇ, ಜಿ.ಪಿ.ಎಸ್ ಮಾಡಿದ ಪ್ರತಿಯನ್ನು ವಿಧಾನ ಪರಿಷತ್ ಸದಸ್ಯರ ಕಚೇರಿಗೆ ಸಲ್ಲಿಸುವಂತೆ ಸುನೀಲಗೌಡ ಬಿ. ಪಾಟೀಲ ತಿಕೋಟಾ ಹಾಗೂ ಬಬಲೇಶ್ವರ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯರ ಕಚೇರಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

ಹೊಸ ಪೋಸ್ಟ್‌