ರಾಜ್ಯಕ್ಕೆ ಮೂರು ಜನ ಡಿಸಿಎಂ ಅಗತ್ಯವಿಲ್ಲ- ಸಿಎಂ, ಡಿಸಿಎಂ ಸಮರ್ಥರಿದ್ದಾರೆ- ಸಚಿವ ಶಿವಾನಂದ ಎಸ್. ಪಾಟೀಲ

ವಿಜಯಪುರ: ರಾಜ್ಯಕ್ಕೆ ಮೂರು ಡಿಸಿಎಂ ಗಳ ಅವಶ್ಯಕತೆ ಇಲ್ಲ. ಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಉಪಮುಖ್ಯಮಂತ್ರಿಯೂ ಸಮರ್ಥರಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ಹೈಕಮಾಂಡ್ ನಿರ್ಣಯ ಮಾಡಿದರೆ ಅದು ಹೈಕಮಾಂಡಿಗೆ ಬಿಟ್ಟಿದ್ದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಮತ್ತು ಎ. ಪಿ. ಎಂ. ಸಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಧ್ಯಕ್ಕೆ ಹೊಸದಾಗಿ ಡಿಸಿಎಂ ಗಳ ಅವಶ್ಯಕತೆ ಇಲ್ಲ. ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳು ಜಾರಿಯಾಗಿವೆ ಎಂದು ಅವರು ಹೇಳಿದರು.

ಸಾಮಾಜಿಕ ನ್ಯಾಯ ಒದಗಿಸಲು ಡಿಸಿಎಂ ಗಳ ಬೇಡಿಕೆ ಇಡಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾಮಾಜಿಕ ನ್ಯಾಯದಡಿ ಉಪಮುಖ್ಯಮಂತ್ರಿ ಮಾಡದಿದ್ದರೆ ನ್ಯಾಯ ಸಿಗುವುದಿಲ್ಲವೇ? ಆ ಪರಂಪರೆ ಕರ್ನಾಟಕದಲ್ಲಿ ಬಹಳ ಕಡಿಮೆಯಿತ್ತು. ಆದರೆ, ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಹೆಚ್ಚಿಗೆ ಮಾಡಿದ್ದರು. ಈಗ ಆ ವಿಚಾರ ಹೈಕಮಾಂಡಿಗೆ ಸಂಬಂಧಿಸಿದೆ. ನನಗೆ ಆ ರೀತಿ ವರ್ತಮಾನ ಎಲ್ಲಿಯೂ ಬಂದಿಲ್ಲ. ನಿಮಗೆ ಎಲ್ಲಿಯಾದರೂ ಬಂದಿದ್ದರೆ ಸಾಕ್ಷಿ ಸಮೇತ ಹೇಳಿದರೆ ನೋಡೋಣ ಎಂದು ಸಚಿವರು ಹೇಳಿದರು.

ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರು ಹೇಳಿಕೆ ನೀಡಿರುವುದು ಅದು ಅವರ ವೈಯಕ್ತಿಕ ಅಭಿಪ್ರಾಯ. ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ ಎಂದು ಅವರು ತಿಳಿಸಿದರು.

ಎ ಪಿ ಎಂ ಸಿ ಹಳೆಯ ಕಾನೂನು ಮರು ಜಾರಿ ವಿಚಾರ

ಬಿಜೆಯಿಯವರು ಮಾಡಿದ್ದ ನೂತನ ಎಪಿಎಂಸಿ ಕಾನೂನನ್ನು ರದ್ದು ಪಡಿಸಿ ನಾವು ಹಳೆಯ ಕಾನೂನನ್ನು ಮತ್ತೆ ಜಾರಿಗೆ ತರುತ್ತಿದ್ದೇವೆ. ಸೆಲೆಕ್ಟ್ ಕಮಿಟಿಯಿಂದ ವರದಿ ಸಲ್ಲಿಕೆಯಾದ ಬಳಿಕ ಮತ್ತೆ ಹಳೆಯ ಕಾನೂನು ಜಾರಿಯಾಗಲಿದೆ ಎಂದು ಅವರು ತಿಳಿಸಿದರು.

ಲಿಂಗಾಯಿತ ಮೀಸಲಾತಿ ಹೋರಾಟ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಶಿವಾನಂದ ಎಸ್. ಪಾಟೀಲ, ಕೂಡಲ ಸಂಗಮ ಸ್ವಾಮೀಜಿ ವಿಚಾರ ಅವರು ತಮ್ಮ ವಿಚಾರ ಹೇಳಿದ್ದಾರೆ. ನಾನು ಎಲ್ಲ ಸಂದರ್ಭದಲ್ಲಿಯೂ ಹೋಗಿದ್ದೇನೆ. ಮೊನ್ನೆ ಜಮಮಖಂಡಿಯಲ್ಲಿಯೂ ಹೋಗಿದ್ದೇನೆ. ಅದು ಒಂದು ಸಮಾಜದ ಬೇಡಿಕೆ. ಈಗ ಓಬಿಸಿಗೆ ಲಿಂಗಾಯಿತರ ಎಲ್ಲ ಒಳಪಂಗಡಗಳನ್ನು ಸೇರಿಸಬೇಕು ಎಂಬ ಒತ್ತಾಯವೂ ಇದೆ. ಅದಕ್ಕೆ ನಮ್ಮ ಬೆಂಬಲವೂ ಇದೆ ಎಂದು ಸ್ಪಷ್ಟಪಡಿಸಿದರು.

ತಮಿಳುನಾಡಿಗೆ ನೀರು ಬಿಟ್ಟಿರುವ ವಿಚಾರ

ಈಗಾಗಲೇ ಈ ಕುರಿತು ನೀರಾವರಿ ಸಚಿವರು, ಸಿಎಂ ಪ್ರತಿಕ್ರಿಯೆ ನೀಡಿದ್ದಾರೆ. ಅದನ್ನು ಅವರು ಸಮರ್ಥನೆ ಮಾಡಿಕೊಳ್ಳುತ್ತಾರೆ. ಸಮರ್ಥವಾಗಿ ನಿರ್ವಹಣೆ ಮಾಡದಿದ್ದರೆ ಏನು ಪರಿಸ್ಥಿತಿ ಉಂಟಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಹಿಂದೆ ಎಸ್. ಎಂ. ಕೃಷ್ಣಾ ಅವರ ಸರಕಾರ ಇದ್ದಾಗ ಏನಾಗಿದೆ ಎಂಬುದು ನಮ್ಮೆಲ್ಲರಿಗೂ ಗಮನಕ್ಕಿದೆ. ಅದನ್ನು ಮುಂದಾಲೋಚನೆಯಲ್ಲಿ ಇಟ್ಟುಕೊಂಡು ನ್ಯಾಯಾಲಯಕ್ಕೂ ಮಾನ್ಯತೆ ಕೊಡಬೇಕು. ರೈತರ ಹಿತ ಕೂಡ ಕಾಪಾಡಬೇಕು ಎಂದು ಅವರು ತಿಳಿಸಿದರು.

ನ್ಯಾಯಾಲಯಕ್ಕೆ ಮನವರಿಕೆ ಮಾಡುವಲ್ಲಿ ವಿಫಲ ಆರೋಪ ವಿಚಾರ

ತಮಿಳುನಾಡಿಗೆ ನೀರು ಬಿಡುಗಡೆ ವಿಚಾರದಲ್ಲಿ ನ್ಯಾಯಾಲಯಕ್ಕೆ ರಾಜ್ಯ ಸರಕಾರ ಮನವರಿಕೆ ಮಾಡಿಕೊಡಲು ವಿಫಲವಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರೆಯ ನೀಡಿದ ಅವರು, ನ್ಯಾಯಾಲಯದಲ್ಲಿ ಯಾವ ವ್ಯಾಜ್ಯ ಇವತ್ತಿನವರೆಗೆ ಬೇಗ ಮುಗಿದಿದೆ ಹೇಳಿ. ನಮ್ಮ ಕೆಬಿಜೆಎನ್ಎಲ್ ವಿವಾದ ಇನ್ನೂ ಮುಗಿಯುತ್ತಿಲ್ಲ. ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿದ್ದರೆ, ರಾಜ್ಯಗಳ ನಡುವಿನ ವ್ಯಾಜ್ಯಗಳು ಇಷ್ಟು ದಿವಸ ನಡೆಯುತ್ತಿರಲಿಲ್ಲ. ಹಿಂದೆ ಕುಡಿಯುವ ನೀರಿನ ವಿಚಾರ ಬಂದಾಗ ಕೇಂದ್ರ ಸರಕಾರ ಮಧ್ಯಸ್ಥಿಕೆ ವಹಿಸಿತ್ತು. ಈಗ ಯಾಕೆ ಮಧ್ಯಸ್ಥಿಕೆ ವಹಿಸಬಾರದು? ನಾವು ಗೋವಾದವರ ಜೊತ ಹೋರಾಟ ಮಾಡಬೇಕು. ಮಹಾರಾಷ್ಟ್ರದವರ ಜೊತೆಗೂ ಹೋರಾಟ ಮಾಡಬೇಕು. ಆಂಧ್ರದವರ ಜೊತೆಗೂ ಹೋರಾಟ ಮಾಡಬೇಕು. ತಮಿಳುನಾಡದವರ ಜೊತೆಗೂ ಹೋರಾಟ ಮಾಡಬೇಕು. ಕೇಂದ್ರ ಸರಕಾರ ಕೂಡ ಮಧ್ಯಸ್ಥಿಕೆ ವಹಿಸಿದರೆ ಮಾತ್ರ ಇವೆಲ್ಲ ಪರಿಹಾರ ಕಂಡುಕೊಳ್ಳಳು ಸರಳ ಹಾದಿಯಾಗಿವೆ. ವ್ಯಾಜ್ಯಗಳು ನೂರಾರು ವರ್ಷ ನಡೆಯುವುದರಿಂದ ರಾಜ್ಯಗಳಿಗೂ ಹಾನಿ. ಜನರಿಗೂ ಹಾನಿಯಾಗುತ್ತವೆ ಎಂದು ತಿಳಿಸಿದರು.

ಗ್ಯಾರಂಟಿ ಸ್ಕೀಂ ದುಡ್ಡಿನ ಕೊರತೆ ವಿಚಾರ

ಗ್ಯಾರಂಟಿ ಸ್ಕೀಂಗಳಿಗೆ ಹಣ ಹೆಚ್ಚು ಬೇಕಾಗಿರುವುದರಿಂದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನೆಡೆಯಾಗಿದೆ ಎಂಬ ಆರೋಪದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆ ರೀತಿ ಯಾವುದೇ ಯೋಜನೆ ನಿಂತಿಲ್ಲ. ಎಲ್ಲ ನಡೆದಿವೆ. ಯಾವುದೇ ಸಮಸ್ಯೆ ಇಲ್ಲ. ರಾಜ್ಯದ ಎಲ್ಲ ನೀರಾವರಿ ಯೋಜನೆಗಳಿಗೆ ಐದು ವರ್ಷದಲ್ಲಿ ಎರಡು ಲಕ್ಷ ಕೋಟಿ ಹಣ ಖರ್ಚು ಮಾಡುವುದಾಗಿ ಹೇಳಿದ್ದೇವು. ಈಗ ಯಾವುದೇ ನೀರಾವರಿ ಯೋಜನೆಗಳು ಸ್ಥಗಿತಗೊಂಡಿಲ್ಲ. ಎಲ್ಲವೂ ಪ್ರಗತಿಯಲ್ಲಿವೆ ಎಂದು ಅವರು ತಿಳಿಸಿದರು.

ನಾವು ಅಧಿಕಾರಕ್ಕೆ ಬಂದು ಈಗ ಮೂರು ತಿಂಗಳಾಗಿದೆ. ಯಾಕೆ ತಲೆ ಕೆಡಿಸಿಕೊಳ್ಳುತ್ತಿರಿ. ಇನ್ನೂ ನಾಲ್ಕು ವರ್ಷಗಳಿವೆ. ಎಲ್ಲ ಯೋಜನೆಗಳನ್ನೂ ಪೂರ್ಣಗೊಳಿಸುತ್ತೇವೆ ಎಂದು ಶಿವಾನಂದ ಎಸ್. ಪಾಟೀಲ ತಿಳಿಸಿದರು.

Leave a Reply

ಹೊಸ ಪೋಸ್ಟ್‌