ಗುಮ್ಮಟ ನಗರಿಯಲ್ಲಿ ಶೋ ರೋಂ ಮೇಲ್ಛಾವಣಿ ಮೇಲೆ 102 ಕಿ. ವ್ಯಾ. ಸೋಲಾರ್ ವಿದ್ಯುತ್ ಉತ್ಪಾದನೆ- ಎಲ್ಲಿ, ಅದರ ವಿಶೇಷತೆಗಳೇನು ಗೊತ್ತಾ?

ವಿಜಯಪುರ: ಬಸವ ನಾಡಿನಲ್ಲಿ ಇದೇ ಮೊದಲ ಬಾರಿಗೆ ಅಟೊ ಮೊಬೈಲ್ ಶೋ ರೂಂ ಒಂದು ಮೇಲ್ಛಾವಣಿ ಮೇಲೆ ಪ್ರತಿನಿತ್ಯ 102 ಕಿಲೋ ವ್ಯಾಟ್ ವಿದ್ಯುತ್ ಉತ್ಪಾದನೆಗಾಗಿ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸಿಕೊಳ್ಳುವ ಮೂಲಕ ವಿದ್ಯುತ್ ಸ್ವಾವಲಂಬಿ ಎಂಬ ಖ್ಯಾತಿಗೆ ಪಾತ್ರವಾಗಿದೆ.

ವಿಜಯಪುರ ನಗರದ ಆಲಮಟ್ಟಿ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 50 ರಲ್ಲಿರುವ ನಾರಾಯಣ ಹುಂಡೈ ಕಾರ್ಸ್ ಪ್ರೈವೆಲದ ಲಿಮಿಟೆಡ್ ಮಾಲಿಕರಾದ ಗೋವಿಂದ ಜೋಶಿ ವಿದ್ಯುತ್ ಬಳಕೆಯಲ್ಲಿ ಸ್ವಾವಲಂಬಿಯಾಗಲು ಬೆಂಗಳೂರಿನ ಓ ಆರ್ ಬಿ ಎನರ್ಜಿ ಕಂಪನಿಯಿಂದ ಸೌರ ವಿದ್ಯುತ್ ಉತ್ಪಾದನೆ ಫಲಕಗಳನ್ನು ಅಳವಡಿಸಿಕೊಂಡಿದ್ದಾರೆ. ಈ ಮೇಲ್ಛಾವಣಿ ವಿದ್ಯುತ್ ಉತ್ಪಾದನೆಗೆ ವಿಜಯಪುರ ಜಿಲ್ಲಾ ಕೈಗಾರಿಕೋದ್ಯಮಿಗಳ ಸಂಘದ ಅಧ್ಯಕ್ಷ ಎಸ್. ವಿ. ಪಾಟೀಲ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶೋ ರೂಂ ಮಾಲಿಕ ಗೋವಿಂದ ಜೋಶಿ, ಸೋಲಾರ ವಿದ್ಯುತ್ ಉತ್ಪಾದನೆ ಪರಿಸರಕ್ಕೆ ಪೂರಕವಾಗಿದ್ದು, ಬಳಕೆದಾರರಿಗೂ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಬಳಸಲು ನೆರವಾಗಲಿದೆ. ಪ್ರತಿಯೊಬ್ಬ ಕೈಗಾರಿಕೋದ್ಯಮಿಗಳು ತಂತಮ್ಮ ಕೈಗಾರಿಕೆ ಘಟಕಗಳ ಮೇಲೆ ಸೌರ ವಿದ್ಯುತ್ ಸ್ಥಾವರ ಅಳವಡಿಸಿಕೊಂಡರೆ ಪ್ರತಿ ತಿಂಗಳು ವಿದ್ಯುತ್ ಶುಲ್ಕದಲ್ಲಿ ಲಕ್ಣಾಂತರ ರೂಪಾಯಿ‌‌ ಉಳಿತಾಯ ಮಾಡಬಹುದು.  ಈಗ ನಮ್ಮಲ್ಲಿ ಉತ್ಪಾದನೆಯಾಗುವ ಸಂಪೂರ್ಣ ವಿದ್ಯುತ್ ನ್ನು ನಾವೇ ಬಳಕೆ ಮಾಡುತ್ತೇವೆ ಎಂದು ಹೇಳಿದರು.

ನಮ್ಮ ಶೋ ರೂಂ ಮೇಲ್ಛಾವಣಿ ಮೇಲೆ ಸುಮಾರು ರೂ. 40 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಿ ಸುಮಾರು 700 ಚದರ ಅಡಿ ಪ್ರದೇಶದಲ್ಲಿ 226 ಸೋಲಾರ ಫಲಕಗಳನ್ನು ಅಳವಡಿಸಿದ್ದೇವೆ. ಇದರಿಂದ ಪ್ರತಿದಿನ 103 ಕಿ. ವ್ಯಾ. ಅಂದರೆ 408 ಯುನಿಟ್ ವಿದ್ಯುತ್ ಉತ್ಪಾದಿಸಬಹುದಾಗಿದೆ. ಪ್ರತಿ ತಿಂಗಳು ಶೇ. 90 ರಷ್ಡು ವಿದ್ಯುತ್ ಖರೀದಿ ತಪ್ಪಲಿದ್ದು, ಮಾಸಿಕವಾಗಿ ರೂ. 1.25 ಲಕ್ಷ ಉಳಿತಾಯವಾಗಲಿದೆ ಎಂದು ತಿಳಿಸಿದರು.

ವಿಜಯಪುರದಲ್ಲಿ ನಾರಾಯಣ ಹುಂಡೈ ಕಾರ್ಸ್ ಶೋ ರೂಂ ನಲ್ಲಿ ಸೌರ ವಿದ್ಯುತ್ ಬಳಕೆಗೆ ಗೋವಿಂದ ಜೋಶಿ ಚಾಲನೆ ನೀಡಿದರು

ಶೋ ರೂಂಗಳ ಮೇಲ್ಛಾವಣಿ ಮೇಲೆ ಸೌರ ವಿದ್ಯುತ್ ಫಲಕಗಳನ್ನು ಅಳವಡಿಸುವುದರಿಂದ ವಿದ್ಯುತ್ ವೆಚ್ಚ ಕಡಿತವಷ್ಟೇ ಅಲ್ಲ, ಸುದೀರ್ಘವಾಗಿ ಅಂದರೆ 25 ವರ್ಷಗಳ ವರೆಗೆ ಈ ಫಲಕಗಳ ಜೀವಿತಾವಧಿ ಇದೆ. ಅಲ್ಲದೇ, ಸೌರ ವಿದ್ಯುತ್ ಉತ್ಪಾದನೆ ಶುದ್ಧ ಮತ್ತು ನವೀಕರಿಸಬಹುದಾದ ಮೂಲವಾಗಿದೆ. ಇದು ಹಸಿರುಮಣೆ ಅನಿಲಗಳ ಹೊರ ಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಎಂದು ಗೋವಿಂದ ಜೋಶಿ ತಿಳಿಸಿದರು.

ಓ.ಆರ್.ಬಿ ಎನರ್ಜಿ ಪ್ರಾಜೆಕ್ಟ್ ಜನರಲ್ ಮ್ಯಾನೇಜರ್ ರಮೇಶ ಕೆ. ಮಾತನಾಡಿ, ಕೈಗಾರಿಕೆಗಳು ವಿದ್ಯುತ್ ಶುಲ್ಕ ಉಳಿಸಲು ಮತ್ತು ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ಸೌರ ವಿದ್ಯುತ್ ಉತ್ಪಾದನೆ ಮತ್ತು ಬಳಕೆ ಪರ್ಯಾಯ ಮಾರ್ಗವಾಗಿದೆ. ವಿಜಯಪುರದ ನಾರಾಯಣ ಹುಂಡೈ ಶೋ ರೂಂ ಅತೀ ಹೆಚ್ಚು ಪ್ರಮಾಣದ ಸೌರ ವಿದ್ಯುತ್ ಸ್ಥಾವರ ಹೊಂದಿದ ಜಿಲ್ಲೆಯ ಮೊದಲ ಅಟೋಮೊಬೈಲ್ ಶೋ ರೂಂ ಎಂಬ ಸಾಧನೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

ವಿಜಯಪುರ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಮಾತನಾಡಿ, ವಿದ್ಯುತ್ ದರ ಹೆಚ್ಚಳವಾಗಿರುವ ಇಂದಿನ ದಿನಗಳಲ್ಲಿ ಕೈಗಾರಿಕೆಗಳು ನಷ್ಟದಿಂದ ಹೊರಬರಲು ಸೌರ ವಿದ್ಯುತ್ ಬಳಕೆ ವರದಾನವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉದ್ಯಮಿಗಳಾದ ಆನಂದ ನಲವಡೆ, ಹೇಮಂತ ರಜಪೂತ, ಶಿವಕುಮಾರ ಕಮಾಲಕರ, ಸಂಗಮೇಶ ಅಂಗಡಿ, ಮಂಜುನಾಥ, ಪ್ರಶಾಂತರಾವ, ಗಿರೀಶ ಪಾಟೀಲ, ಶಿವಾಜಿ ಪಾಟೀಲ, ಪ್ರಸಾದ ಸೇರಿದಂತೆ ಶೋರೂಂ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌