2ಎ ಮೀಸಲಾತಿ ಸಿಗುವವರೆಗೂ ವಿರಮಿಸುವುದಿಲ್ಲ- ಕೂಡಲ ಸಂಗಮ ಸ್ವಾಮೀಜಿ- ಝಳಕಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಿಂಗಪೂಜೆ ನಡೆಸಿ ಒತ್ತಾಯ

ವಿಜಯಪುರ: ಪಂಚಮಸಾಲಿ ಸಮುದಾಯಕ್ಕೆ ಮುಂಬರುವ ಲೋಕಸಭೆ ಚುನಾವಣೆಯೊಳಗೆ ಮೀಸಲಾತಿ ಘೋಷಿಸಿ ಆದೇಶ ಹೊರಡಿಸಬೇಕು.  ಇಲ್ಲದಿದ್ದರೆ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂದು ಕೂಡಲ ಸಂಗಮ ಲಿಂಗಾಯಿತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರಕಾರಕ್ಕೆ ಗಡುವು ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಝಳಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 52ರಲ್ಲಿ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಪಾಲ್ಗೊಂಡ ಅವರು, ಇಷ್ಟಲಿಂಗ ಪೂಜೆ ನೆರವೇರಿಸಿದ ಬಳಿಕ ಗ್ರಾಮದ ಶ್ರೀ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.

ಐತಿಹಾಸಿಕ ಹೋರಾಟವನ್ನು ಮಾಡಿದ್ದೇವೆ.  ದೇಶದ ಪ್ರಮುಖ ಟೋಲಗೇಟ್ ಗಳಲ್ಲಿ ಒಂದಾದ ಈ ಹೆದ್ದಾರಿಯಲ್ಲಿ ಬಂದ್ ಮಾಡುವುದು ಮಹತ್ವದ್ದಾಗಿದೆ.  ಹಿಂದಿನ ಬಿಜೆಪಿ ಸರಕಾರ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡಿದೆ.  ಈಗಿನ ಕಾಂಗ್ರೆಸ್ ಸರಕಾರ ಅದನ್ನು ಅನುಷ್ಠಾನ ಮಾಡಬೇಕು.  ಅಥವಾ 2ಎ ಮೀಸಲಾತಿಯಲ್ಲಿ ಪಂಚಮಸಾಲಿಯನ್ನು ಸೇರಿಸಿ ಆದೇಶ ಹೊರಡಿಸಲಿ.  ನಮ್ಮ ಸಮಾಜಕ್ಕೆ ಅಗತ್ಯವಾಗಿರುವ ಈ ಮೀಸಲಾತಿಯನ್ನು ಮುಖ್ಯಮಂತ್ರಿ ಎಸ್. ಸಿದ್ಧಾರಮಯ್ಯ ಅವರು ಬೇಗನೆ ಒದಗಿಸಿ ಋಣ ತೀರಿಸಬೇಕು ಎಂದು ಅವರು ಹೇಳಿದರು.

ಪಂಚಮಸಾಲಿ ಸಮುದಾಯದಿಂದ ಸತತವಾಗಿ ಮೂರು ವರ್ಷಗಳ ಕಾಲ ಹೋರಾಟ ಮಾಡಿದ್ದೇವೆ.  ಆಗ ನೀವು ನಮ್ಮ ಸರಕಾರ ಅಧಿಕಾರಕ್ಕೆ ಬಂದ ಮೇಲೆ 24 ಗಂಟೆಗಳಲ್ಲಿ ನಿಮ್ಮ ಸಮಾಜಕ್ಕೆ ನ್ಯಾಯ ನೀಡುವೆ ಎಂದು ಹೇಳಿದ್ದಿರಿ.  ಈಗ ನೀವು ಮಾತು ತಪ್ಪುತ್ತಿದ್ದೀರಿ.  ಈ ಹಿನ್ನೆಲೆಯಲ್ಲಿ ಈಗ ರಾಷ್ಟ್ರೀಯ ಹೆದ್ದಾರಿ ಮೇಲೆ ಇಷ್ಟ ಲಿಂಗ ಪೂಜೆ ಮಾಡುವ ಮೂಲಕ ಶಾಂತಿಯುತ ಹೋರಾಟ ಮಾಡುತ್ತಿದ್ದೇವೆ ಎಂದು ಸ್ವಾಮೀಜಿ ತಿಳಿಸಿದರು.

ಇದೇ ವೇಳೆ ಪಂಚಮಸಾಲಿ ಸಮುದಾಯದ ಜೊತೆಗೆ ಲಿಂಗಾಯಿತ ಎಲ್ಲ ಉಪ ಪಂಗಡಗಳಿಗೆ ಕೇಂದ್ರ ಸರಕಾರದ ಓ. ಬಿ. ಸಿ. ಮೀಸಲಾತಿಗೆ ಶಿಫಾರಸು ಮಾಡಬೇಕು ಎಂದು ಬಸವಜಯ ಮೃತ್ಯುಂಜಯ ಸ್ವಾಮೀಜಿ ಆಗ್ರಹಿಸಿದರು.

ನಾಗಠಾಣ ಶಾಸಕ ವಿಠ್ಠಲ ಧೋಂಡಿಬಾ ಕಟಕದೊಂಡ ಮಾತನಾಡಿ, ಮುಂಬರುವ ಅಧಿವೇಶನದಲ್ಲಿ ತಾವೂ ಕೂಡ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡುವಂತೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.

ಚುನಾವಣೆಯಲ್ಲಿ ನನ್ನ ಗೆಲುವಿನಲ್ಲಿ ಪಂಚಮಸಾಲಿ ಸಮಾಜದ ಸಿಂಹಪಾಲು ಇದೆ.  ಇತರ ಎಲ್ಲ ಸಮಾಜಗಳ ಮತದಾರರೂ ನನ್ನನ್ನು ಬೆಂಬಲಿಸಿದ್ದಾರೆ.  ಪಂಚಮಸಾಲಿ ಸಮಾಜದವರು ಹೋರಾಟಕ್ಕೆ ಎಲ್ಲಿಗೆ ಕರೆದರೂ ನಾನು ಬರಲು ಸಿದ್ಧನಿದ್ದೇನೆ.  ಈ ಮೂಲಕ ನಿಮ್ಮ ಸೇವೆ ಮಾಡುವೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ಶ್ರೀಗಳು ಚಡಚಣ ಪಟ್ಟಣದಲ್ಲಿ ಬಹಿರಂಗ ಸಭೆ ನಡೆಸಿ ಅಲ್ಲಿಂದ ನಾನಾ ವಾಹನಗಳಲ್ಲಿ ಇಂಡಿ ತಾಲೂಕಿನ ಝಳಕಿ ಗ್ರಾಮಕ್ಕೆ ಆಗಮಿಸಿ ಸುಮಾರು ಅರ್ಧ ಗಂಟೆ ಕಾಲ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ರಸ್ತೆ ತಡೆ ನಡೆಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಎಂ. ಆರ್. ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ರುದ್ರಗೌಡ ಪಾಟೀಲ, ಶ್ರೀಮಂತ ಇಂಡಿ, ವಿಧ್ಯಾರಾಣಿ ತುಂಗಳ, ಸೋಮಶೇಖರ ದೇವರ, ನಾಗನಾಥ ಬಿರಾದಾರ, ವಿಠ್ಠಲ ವಡಗಾಂವ, ಬಿ. ಎಂ. ಕೋರೆ, ನಾಗರಾಳ ಹುಲಿ, ಸಾಹೇಬಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌