ವಿಜಯಪುರ: ಶತಮಾನದ ಇತಿಹಾಸವಿರುವ ನಗರದ ಶ್ರೀ ಸಿದ್ದೇಶ್ವರ ಸಂಸ್ಥೆ ವತಿಯಿಂದ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಪಬ್ಲಿಕ್ ಶಾಲೆ ಆರಂಭಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನ ಆವರಣದಲ್ಲಿರುವ ಡಾ. ಫ. ಗು. ಹಳಕಟ್ಟಿ ಸಭಾ ಭವನದಲ್ಲಿ ನಡೆದ ಶ್ರೀ ಸಿದ್ದೇಶ್ವರ ಸಂಸ್ಥೆಯ ವಾರ್ಷಿಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶ್ರೀ ಸಿದ್ಧೇಶ್ವರ ಸಂಸ್ಥೆ ಈಗ ಹೆಮ್ಮರವಾಗಿ ಬೆಳೆದು ನಿಂತಿದ್ದು, ಧಾರ್ಮಿಕ, ಸಾಮಾಜಿಕ ಕಾರ್ಯಗಳೊಂದಿಗೆ ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಕಾರ್ಯ ಮಾಡುತ್ತಿದೆ ಎಂದು ಅವರು ಹೇಳಿದರು.
ಈಗಾಗಲೇ ಕೌಲಗಿ ಮತ್ತು ವಿಜಯಪುರ ನಗರದಲ್ಲಿ ಶಾಲೆ- ಕಾಲೇಜುಗಳ ಮೂಲಕ ಮಕ್ಕಳಿಗೆ ಜ್ಞಾನಾರ್ಜನೆ ನೀಡುತ್ತಿದ್ದು, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಅನುಕೂಲ ಒದಗಿಸಲು ಮುಂಬರುವ ಶೈಕ್ಷಣಿಕ ವರ್ಷದಿಂದಲೇ, ಪ್ರತಿ ವರ್ಷ ಒಂದೊಂದು ತಾಲೂಕಿನಲ್ಲಿ ಪಬ್ಲಿಕ್ ಶಾಲೆ ಆರಂಭಿಸಿ, ಗ್ರಾಮೀಣ ಪ್ರದೇಶದ ಮಕ್ಕಳ ಕಲಿಕೆಗೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ತಾಳಿಕೋಟಿ ಪಟ್ಟಣದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಗೆ ದೇಣಿಗೆ ನೀಡಲಾದ 3 ಎಕರೆ 17 ಗುಂಟಾ ಜಮೀನಿನ ಪೈಕಿ, 2 ಎಕರೆ ಜಾಗೆಯಲ್ಲಿ ದಿ. ಶ್ರೀ. ಬಿ. ಓ. ತಂಬಾಕೆ ಅವರ ಹೆಸರಿನಲ್ಲಿ ಪಬ್ಲಿಕ್ ಶಾಲೆ ಬರುವ ಶೈಕ್ಷಣಿಕ ವರ್ಷದಿಂದಲೇ ತರಗತಿ ಆರಂಭಿಸಲಾಗುವುದು. ಅಲ್ಲದೇ, ಅತ್ಯುತ್ತಮವಾದ ಕಲ್ಯಾಣ ಮಂಟಪದ ಸೇವೆ ಕೂಡ ಸಾರ್ವಜನಿಕರಿಗೆ ಸಿಗಲಿದೆ ಎಂದು ಅವರು ಹೇಳಿದರು.
ಅಲ್ಲದೇ, ಮುಂಬರುವ ಶೈಕ್ಷಣಿಕ ವರ್ಷ ಜೂನ್ ದಿಂದ ಕಲಬುರ್ಗಿ ಜಿಲ್ಲೆಯ ಚಿಂಚೋಳಿಯಲ್ಲಿ ಸಿದ್ದಸಿರಿ ಸೌಹಾರ್ದ ಸಹಕಾರಿ ನಿಯಮಿತದಿಂದ ಪಬ್ಲಿಕ್ ಶಾಲೆ ಆರಂಭವಾಗಲಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಸಿದ್ದೇಶ್ವರ ಸಂಸ್ಥೆಯ ಶ್ರೀ ರಾಮನಗೌಡ ಬಾ. ಪಾಟೀಲ(ಯತ್ನಾಳ) ಗೋರಕ್ಷಾ ಕೇಂದ್ರದಲ್ಲಿ ವಿಭೂತಿ, ಬಿಳಿ ದಂತಮಂಜನ, ಕೆಂಪು ದಂತಮಂಜನ, ಕಪ್ಪು ದಂತ ಮಂಜನ, ಚರ್ಮ ರೋಗ ನಿವಾರಣ ಮಲಾಮ, ಪಂಚಗವ್ಯ ಸಾಬೂನು, ಪಾತ್ರೆ ತೊಳೆಯುವ ಸಾಬೂನು, ಪಂಚಗವ್ಯ ಗೃತ್, ಕುಂಕುಮ, ಮಜ್ಜಿಗೆ, ತುಪ್ಪ, ಎರೆಹುಳು ಗೊಬ್ಬರ, ಕುಳ್ಳ ತಯಾರಿಸಲಾಗುತ್ತಿದ್ದು, ಇದರಿಂದ ಉತ್ತಮ ಆದಾಯ ಬರುತ್ತಿದೆ. ಅದೇ ರೀತಿ ವಿಜಯಪುರ ನಗರದಲ್ಲಿ ನಿರ್ಮಾಣವಾಗುತ್ತಿರುವ 5 ಮಹಡಿಯ ಶಿವಾನುಭವ ಮಂಟಪ ಕಾಮಗಾರಿ ಕೂಡ ಅಂತಿಮ ಹಂತದಲ್ಲಿದ್ದು, ಅದರ ಮಳಿಗೆಯಿಂದಲೂ ಬಾಡಿಗೆ ರೂಪದಲ್ಲಿ ಸಾಕಷ್ಟು ಆದಾಯ ಸಂಸ್ಥೆಗೆ ಬರಲಿದೆ. ಇದು ಮತ್ತಷ್ಟು ಧಾರ್ಮಿಕ, ಸಾಮಾಜಿಕ ಕಾರ್ಯಗಳನ್ನು ಮಾಡಲು ಅನುಕೂಲವಾಗಲಿದೆ ಎಂದು ಯತ್ನಾಳ ಹೇಳಿದರು.
ಬಡವರಿಗೆ ದೊಡ್ಡ ತಲೆ ನೋವಾದ ವೈದ್ಯಕೀಯ ಸೇವೆ ಕಡಿಮೆ ದರದಲ್ಲಿ, ಗುಣಮಟ್ಟದ ಸೇವೆ ನೀಡಲು ಸಿದ್ದೇಶ್ವರ ಸಂಸ್ಥೆ ಮತ್ತು ಸಿದ್ದಸಿರಿ ಸೌಹಾರ್ದ ಸಹಕಾರಿ ಜಂಟಿಯಾಗಿ ಲೋಕ ಕಲ್ಯಾಣ ಟ್ರಸ್ಟ್ ಮೂಲಕ ಜೆ. ಎಸ್. ಎಸ್ ಆಸ್ಪತ್ರೆ ಆರಂಭಿಸಿ ಸೇವೆ ನೀಡಲಾಗುತ್ತಿದೆ. ಈಗ ಜಿಲ್ಲೆಯಲ್ಲಿಯೇ ಪ್ರಥಮವಾಗಿ 250 ಹಾಸಿಗೆಯ ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಲಾಗಿದೆ. ಕೆಲವೇ ದಿನಗಳಲ್ಲಿ ರೋಗಿಗಳು ಚಿಕಿತ್ಸೆಗಾಗಿ ದೂರದ ಊರಿಗೆ ಅಲೆಯುವ ತಾಪತ್ರೆಯ ತಪ್ಪಲಿದೆ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಇದೇ ವೇಳೆ ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕರ ಸಂಖ್ಯೆಯನ್ನು 15 ರಿಂದ 21ಕ್ಕೆ ಹೆಚ್ಚಿಸಲು ಸಂಪೂರ್ಣವಾದ ಅಧಿಕಾರವನ್ನು ಸಂಸ್ಥೆಯ ಅಧ್ಯಕ್ಷರಿಗೆ ವಹಿಸಿ ಎಲ್ಲ ಸದಸ್ಯರು ಸರ್ವಾನುಮತದಿಂದ ಅಧಿಕಾರ ನೀಡಿದರು. ಅದರಂತೆ ಠರಾವು ಪಾಸು ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀ ಸಿದ್ದೇಶ್ವರ ಸಂಸ್ಥೆಯ ಪದಾಧಿಕಾರಿಗಳು, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.