ಪ್ರಕೃತಿ ವಿಕೋಪ ತಡೆಗಟ್ಟಲು ಸಂಬಂಧಿಸಿದ ಇಲಾಖೆಗಳು ಸದಾ ಸರ್ವ ಸನ್ನದ್ದವಾಗಿರಬೇಕು- ಮಹಾದೇವ ಮುರಗಿ

ವಿಜಯಪುರ: ಜಿಲ್ಲೆಯಲ್ಲಿ ಸಂಭವಿಸಬಹುದಾದ ಪ್ರಕೃತಿ ವಿಕೋಪಗಳನ್ನು ನಿರ್ವಹಿಸಲು ಸಂಬಂಧಿಸಿದ ಇಲಾಖೆಗಳು ಸರ್ವ ಸನ್ನದ್ಧವಾಗಿರಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮಟ್ಟದ ವಿಕೋಪ ನಿರ್ವಹಣಾ ಯೋಜನೆ ವಿಜಯಪುರ ಹಾಗೂ ಕಂದಾಯ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಪತ್ತು ನಿರ್ವಹಣಾ ಕುರಿತು ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಕೃತಿ ವಿಕೋಪಗಳನ್ನು ನಿರ್ವಹಿಸಲು ಮುಂಚಿತವಾಗಿ ಯೋಜನೆಗಳನ್ನು ರೂಪಿಸಿಕೊಳ್ಳಬೇಕು.  ಮಳೆಗಾಲದಲ್ಲಿ ಸಂಭವಿಸಬಹುದಾದ ಅತಿವೃಷ್ಟಿಯ ಕುರಿತು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು.  ವಿಕೋಪಗಳ ಕುರಿತು ಸೂಕ್ತ ಅಧ್ಯಯನ ನಡೆಸಿ, ತುರ್ತು ಪರಿಹಾರೋಪಾಯಳನ್ನು ಹೇಗೆ ಕಾರ್ಯರೂಪಕ್ಕೆ ತರಬೇಕೆಂಬುದರ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ ಇಟ್ಟುಕೊಳ್ಳಬೇಕು.  ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಸಂಬಂಧಿಸಿದ ಅಧಿಕಾರಿಗಳು ವ್ಯಾಪ್ತಿಯಲ್ಲಿರುವ ನದಿ, ಹಳ್ಳ, ಕೊಳ್ಳ , ಕೆರೆ ಸೇರಿದಂತೆ ಇವುಗಳ ಕುರಿತು ಸಮಗ್ರ ಮಾಹಿತಿ ಸಂಗ್ರಹಿಸಬೇಕು.  ಇದರಿಂದ ಯೋಜನೆಗಳನ್ನು ರೂಪಿಸಲು ಅನೂಕೂಲವಾಗುತ್ತದೆ.  ಸಂಭವಿಸಬಹುದಾದ ವಿಕೋಪಗಳ ಸ್ಥಳಗಳ ಕುರಿತು ಮುಂಚಿತವಾಗಿಯೇ ಅರಿವು ಹೊಂದಿರಬೇಕು.  ಯಾವುದೇ ಜೀವ-ಜಾನುವಾರುಗಳ ಹಾನಿ ಸಂಭವಿಸದಂತೆ ಎಲ್ಲ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಮಹಾದೇವ ಮುರಗಿ ಹೇಳಿದರು.

ವಿಜಯಪುರದಲ್ಲಿ ವಿಪತ್ತು ನಿರ್ವಹಣೆ ತರಬೇತಿ ಕಾರ್ಯಕ್ರಮದಲ್ಲಿ ಮಹಾದೇವ ಮುರಗಿ ಮಾತನಾಡಿದರು.

ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಸಂಯೋಜಕ ಡಾ. ಪರಮೇಶ ಜಿ. ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ತರಬೇತಿ ಸಂಸ್ಥೆಯ ಪ್ರಾಚಾರ್ಯ ಅಶೋಕ ಕಲಘಟಗಿ, ಉಪನ್ಯಾಸಕ ವಿ. ವಿ. ಕಮಲಾಪುರ, ಜಿಲ್ಲಾ ವಿಪತ್ತು ನಿರ್ವಹಣಾ ತಜ್ಞ ರಾಜೇಶ ಜೈನಾಪುರ, ಪುರಸಭೆ ಮುಖ್ಯಾಧಿಕಾರಿಗಳು, ಪಟ್ಟಣ ಪಂಚಾಯಿತಿ, ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಪಿ. ಬಿ. ದಿವಾನಜಿ ವಂದಿಸಿದರು.

Leave a Reply

ಹೊಸ ಪೋಸ್ಟ್‌