ವಿಜಯಪುರ: ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಯಲ್ಲಿ ಕೊಟ್ಪಾ ಕಾಯ್ದೆಯ ಸೆಕ್ಷನ್-4ರ ನಾಮಫಲಕದ ಗೋಡೆ ಬರಹ ಬರೆಸುವುದು ಹಾಗೂ ನಾಮಫಲಕಗಳನ್ನು ಶಾಲಾ-ಕಾಲೇಜಿನ ಪ್ರವೇಶ ದ್ವಾರದಲ್ಲಿ ಅಳವಡಿಸುವುದು ಸೇರಿದಂತೆ ಜಿಲ್ಲೆಯಾದ್ಯಂತ ಕೊಟ್ಪಾ ಕಾಯ್ದೆ ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಕೊಟ್ಪಾ ಕಾಯ್ದೆ ಅನುಷ್ಠಾನ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಪ್ರತಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕೊಟ್ಪಾ ಕಾಯ್ದೆಯ ನಾಮಫಲಕ ಗೋಡೆ ಬರಹ ಬರೆಸಬೇಕು. ಶಾಲಾ ಕಾಲೇಜಿನ ಕಂಪೌಂಡಿನಿಂದ 100 ಮೀಟರ್ ಅಂತರದಲ್ಲಿ ಯಾವುದೇ ತಂಬಾಕು ಪದಾರ್ಥಗಳ ಮಾರಾಟವಾಗದಂತೆ ನೋಡಿಕೊಳ್ಳಬೇಕು. ಶಾಲಾ-ಕಾಲೇಜಿನ ತಂಬಾಕು ನಿಯಂತ್ರಣ ಸಮಿತಿ ರಚಿಸಿ ನಿಯಮ ಉಲ್ಲಂಘನೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೆಕು ಎಂದು ಹೇಳಿದರು.
ಶಾಲಾ ಕಾಲೇಜು ಆವರಣದಲ್ಲಿ ಯಾವುದೇ ರೀತಿಯ ತಂಬಾಕು ಉತ್ಪನ್ನಗಳ ಬಳಕೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ತಂಬಾಕು ಉತ್ಪನ್ನಗಳ ಉಪಯೋಗದಿಂದಾಗುವ ದುಷ್ಟರಿಣಾಮ ಹಾಗೂ ಕೊಟ್ಪಾ ಕಾಯ್ದೆ-2003ರ ಕುರಿತು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸಬೇಕು. ಕೊಟ್ಪಾ ಕಾಯ್ದೆ ಅಂಶಗಳನ್ನು ಅಳವಡಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಪ್ರತಿಯೊಂದು ಶಾಲಾ-ಕಾಲೇಜ್ ದೃಢೀಕರಣವನ್ನು ಹದಿನೈದು ದಿನದೊಳಗೆ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ತಾಲೂಕಾ ಮಟ್ಟದ ತನಿಖಾದಳ ಕ್ರೀಯಾಶೀಲತೆಯಿಂದ ಕಾಲ-ಕಾಲಕ್ಕೆ ದಾಳಿ ನಡೆಸಬೇಕು. ವಾರಕ್ಕೊಮ್ಮೆ ಅಂತರ್ ಇಲಾಖಾ ತಂಡ ರಚಿಸಿಕೊಂಡು ದಾಳಿ ನಡೆಸಿ, 10-15 ಅಂಗಡಿಗಳ ದಾಳಿ ಮಾಡಬೇಕು. ನಗರ ಪ್ರದೇಶ, ಗ್ರಾಮೀಣ ಪ್ರದೇಶದಲ್ಲಿ ತಂಬಾಕು ದುಷ್ಪರಿಣಾಮ ಕುರಿತು ಜಾಗೃತಿ ಅಭಿಯಾನ ಹಮ್ಮಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲೆಯ ಎಲ್ಲ ಶೈಕ್ಷಣಿಕ ಸಂಸ್ಥೆಗಳು ಸರ್ಕಾರದ ಮಾರ್ಗಸೂಚಿಯಂತೆ ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆಗಳನ್ನಾಗಿ ದೃಢೀಕರಣ ದಾಖಲೆ ಸಲ್ಲಿಸಬೇಕು. ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಎಲ್ಲ ಬಸ್ ನಿಲ್ದಾಣ ಆವರಣದಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುವವರ ವಿರುದ್ದ ಕ್ರಮ ಜರುಗಿಸಿ ದಂಡ ವಿಧಿಸಿದ ವಿವರ ಸಲ್ಲಿಸಬೇಕು. ಶಿಕ್ಷಣ ಸಂಸ್ಥೆ ಸೆಕ್ಷನ್ 6ಬಿ ಉಲ್ಲಂಘನೆಯ ಶೈಕ್ಷಣಿಕ ಸಂಸ್ಥೆಯ ವಿವರ ಸಲ್ಲಿಸುವುದು ಜನರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೊಟ್ಪಾ-2003ರ ಕಾಯ್ದೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನಿಷೇಧಿತ ಪ್ರದೇಶಗಳಲ್ಲಿ ಸೆಕ್ಷನ್-4 ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ನಿಷೇಧಕ್ಕೆ ಕ್ರಮ ವಹಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶಿಂಧೆ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ವಿಜಯಕುಮಾರ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ.ಕವಿತಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಎಸ್.ಎಲ್.ಲಕ್ಕಣ್ಣವರ, ಡಾ.ಸಂಪತ್ ಗುಣಾರಿ, ಅಬಕಾರಿ ಇಲಾಖೆ ಉಪ ಆಯುಕ್ತ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.