ಯುವಜನತೆ ಧಾರ್ಮಿಕ ಮನೋಭಾವ, ದೇಶಾಭಿಮಾನ ಬೆಳೆಸಿಕೊಳ್ಳಬೇಕು- ರಮೇಶ ಜಿಗಜಿಣಗಿ

ವಿಜಯಪುರ: ಯುವಜನತೆ ಧಾರ್ಮಿಕ ಮನೋಭಾವ ಮತ್ತು ದೇಶಾಭಿಮಾನ ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಸಂಸದ ರಮೇಶ ಜಿಗಜಿಣಗಿ ಕರೆ ನೀಡಿದ್ದಾರೆ.

ನಗರದ ಪ್ರತಿಷ್ಠಿತ ಗಜಾನನ ಮಹಾಮಂಡಳ ವತಿಯಿಂದ ಶ್ರೀ ಶಿವಾಜಿ ಮಹಾರಾಜರ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಉತ್ಸವ ಮೂರ್ತಿಯ ವಿಸರ್ಜನೆ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಬಳಿಕ ಮಾತನಾಡಿದ ಅವರು, ಗಜಾನನ ಮಹಾಮಂಡಳ ಸಮಾಜಮುಖಿ ಕಾರ್ಯ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹಿಸುತ್ತಾ ಬಂದಿದೆ.  ಈ ಮಹಾಮಂಡಳದ ಕಾರ್ಯ ಚಟುವಟಿಕೆಗಳಿಗೆ ಸದಾ ಸಾಥ್ ನೀಡುತ್ತಾ ಬಂದಿದ್ದೇನೆ.  ಮುಂದೆಯೂ ಕೂಡ ಈ ಸಂಘದ ಜೊತೆಗೆ ಬೆನ್ನೆಲುಬಾಗಿ ನಿಲ್ಲುತ್ತೇವೆ.  ಯುವಜನತೆ ಧಾರ್ಮಿಕ ಮನೋಭಾವ ಹಾಗೂ ದೇಶಾಭಿಮಾನ ಬೆಳೆಸಿಕೊಂಡು ಮುನ್ನಡೆಯಬೇಕು.  ವಿಘ್ನೇಶ್ವರ ಸಕಲರ ದು:ಖ ನಿವಾರಣೆ ಮಾಡಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಗಣೇಶೋತ್ಸವಕ್ಕೆ ಆಧ್ಯಾತ್ಮಿಕ ಮನೋಭಾವದ ಜೊತೆಗೆ ದೇಶಾಭಿಮಾನದ ಸ್ಪರ್ಶವೂ ಇದೆ.  ಸ್ವಾತಂತ್ರ್ಯ ಹೋರಾಟದ ಕಿಚ್ಚು ಹೊತ್ತಿಸಲು ಲೋಕಮಾನ್ಯ ಬಾಲಗಂಗಾಧರ ತಿಲಕ ಅವರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದರು.  ವಿಜಯಪುರದಲ್ಲಿ ದಿ. ಮಹೇಂದ್ರಕರ, ಮಾನಕರ ಮೊದಲಾದ ಮಹನೀಯರ ಶ್ರಮದ ಫಲವಾಗಿ ಗಜಾನನ ಮಹಾಮಂಡಳ ಸ್ಥಾಪನೆಯಾಗಿದೆ.  ಮಹಾಮಂಡಳ ನೇತೃತ್ವದಲ್ಲಿ ಆಧ್ಯಾತ್ಮಿಕ, ಸಾಮಾಜಿಕ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತಿದೆ.  ಕಳೆದ ವರ್ಷ ಕೊರೊನಾ ಸಂದರ್ಭದಲ್ಲಿಯೂ ಉಚಿತ ಪ್ರಸಾದ ವಿತರಣೆ, ಪರಿಸರ ಸ್ನೇಹಿ ಗಣೇಶನ ಪ್ರತಿಷ್ಠಾಪನೆಗೆ ವಿಶೇಷ ಪ್ರೋತ್ಸಾಹ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಗೆ ಗಣೇಶ ಮೂರ್ತಿ ಸ್ಥಾಪನೆಗೆ ಅನುಕೂಲವಾಗಲು ಏಕಗವಾಕ್ಷಿ ಯೋಜನೆ ಜಾರಿಗಾಗಿ ಶ್ರಮಿಸಿದೆ ಎಂದು ತಿಳಿಸಿದರು.

ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ವಿಜಯಪುರ ಗಜಾನನ ಮಹಾಮಂಡಳ ವತಿಯಿಂದ ಸನ್ಮಾನಿಸಲಾಯಿತು

ಸಾನಿಧ್ಯ ವಹಿಸಿದ್ದ ಶಿರಶ್ಯಾಡದ ಶ್ರೀ ಅಭಿನವ ಶಿವಾಚಾರ್ಯರು ಆಶೀರ್ವಚನ ನೀಡಿ, ಒಂದು ಸಸಿ ಪುಷ್ಪ ಅಥವಾ ಫಲ‌ ನೀಡಬೇಕಾದರೆ ಅದಕ್ಕೆ ಸುಂದರ ಪರಿಸರ, ಸತ್ವ, ಗೊಬ್ಬರ ಬೇಕು, ಅದೇ ರೀತಿ ಮನುಷ್ಯ ಜೀವನ ಅರಳಲು ಸಂಸ್ಕಾರ ಬೇಕು.  ಸಸಿ ನೆಡುವುದು, ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಮಾಡಿರುವುದೇ ನಿಜವಾದ ಗಣೇಶೋತ್ಸವಾಗಿದೆ.  ದೊಡ್ಡ ಶಬ್ದದಲ್ಲಿ ಹಾಡು ಹಚ್ಚುವುದಕ್ಕಿಂತ ಈ ರೀತಿ ಅರ್ಥಪೂರ್ಣ ಆಚರಣೆ ಮಾಡುತ್ತಿರುವುದು ಸಂತೋಷ ತಂದಿದೆ ಎಂದು ಹೇಳಿದರು‌.

ಇದೇ ವೇಳೆ ಇಸ್ರೋ ಚಂದ್ರಯಾನ ಕಾರ್ಯದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದ ವಿಜಯಪುರದ ಇಸ್ರೋ ವಿಜ್ಞಾನಿ ಅಭಿಷೇಕ ದೇಶಪಾಂಡೆ ಅವರ ಪಾಲಕರನ್ನು, ಜ್ಯೋತಿ ಸಾಳುಂಕೆ ಅವರ ಪಾಲಕರನ್ನು, ಸಾವಯವ ಕೃಷಿಯಲ್ಲಿ ಸಾಧನೆ ತೋರಿದ ದಯಾನಂದ ಮಸಳಿ, ರಂಗಭೂಮಿ ಕಲಾವಿದ ಅಶ್ಪಾಕ್ ಜಹಾಗೀರದಾರ, ಅನಾಥ ಶವವನ್ನು ಸಾಗಿಸುವ ವಾಹನ ಚಾಲನೆಯ ಸೇವೆಯಲ್ಲಿ ತೊಡಗಿರುವ ಕಾಂತಪ್ಪ ಮೂಲಿಮನಿ ಹಾಗೂ ದಿನನಿತ್ಯ ಪೂಜಾ ಕೈಂಕರ್ಯ ನೆರವೇರಿಸಿದ ಪವಮಾನ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ ಅವರು ಅಪ್ಪು ಪಟ್ಟಣಶೆಟ್ಟಿ ಅವರು ಪ್ರಾಯೋಜಿಸಿರುವ ಆಯುಷ್ಮಾನ್ ಕಾರ್ಡುಗಳನ್ನು ಫಲಾನುಭವಿಗಳಿಗೆ ವಿತರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ವಿಜಯಕುಮಾರ ಚವ್ಹಾಣ, ಗಜಾನನ ಉತ್ಸವ, ಅಧ್ಯಕ್ಷ ಗುರುರಾಜ ಗೋಲಗೇರಿ, ಬಿಜೆಪಿ ಬೆಳಗಾವಿ ವಿಭಾಗದ ಸಂಘಟನೆ ಮಹಾಮಂತ್ರಿ ಪ್ರಕಾಶ ಅಕ್ಕಲಕೋಟ, ಹಿರಿಯ ರೈತ ಮುಖಂಡ ಅಣ್ಣಪ್ಪ ಸಾಹುಕಾರ ಖೈನೂರ, ಕಲ್ಲನಗೌಡ ಹರನಾಳ, ರಮೇಶ ರೇಶ್ಮಿ, ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಮಡಿವಾಳಪ್ಪ ಸಜ್ಜನ, ಪ್ರಕಾಶ್ ಮಿರ್ಜಿ, ಉಮೇಶ ವಂದಾಲ, ಗೋಪಾಲ ಘಟಕಾಂಬಳೆ, ನಗರಸಭೆ ಮಾಜಿ ಸದಸ್ಯ ರಾಜು ಕರಭಂಟನಾಳ ರಮೇಶ ಸುರಪುರ, ವಿವೇಕಾನಂದ ಡಬ್ಬಿ, ಮಹೇಶ ಜಾದವ, ಪ್ರಭಾಕರ ಬೋಸ್ಲೆ, ಸನ್ನಿ ಗವಿಮಠ, ಶಿವು ಸಕ್ರಿ, ಚಂದು ಉಮರ್ಜಿ, ಪ್ರಭಾಕರ ಭೋಸ್ಲೆ, ಸಿದ್ಧರಾಮಯ್ಯ ಮಲ್ಲಿಕಾರ್ಜುನಮಠ, ವಿಜಯ ಕೋವಳ್ಳಿ, ಕಲ್ಲುಗೌಡ ಹರನಾಳ, ಸಂತೋಷ ಜಾಧವ, ಗಿರೀಶ ಕುಲಕರ್ಣಿ, ರಾಘು ಕುಲಕರ್ಣಿ, ಬಾಬು ಏಳಗಂಟಿ, ರಾಜು ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು.

ಜಗದೀಶ ಮುಚ್ಚಂಡಿ ಸ್ವಾಗತಿಸಿದರು.  ಸುಭಾಸ ಕನ್ನೂರ ನಿರೂಪಿಸಿದರು.

 

ಸರಳವಾಗಿ ನಡೆದ ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆ

ನಗರದ ಪ್ರತಿಷ್ಠಿತ ಗಜಾನನ ಮಹಾಮಂಡಳ ವತಿಯಿಂದ ಶ್ರೀ ಶಿವಾಜಿ ಮಹಾರಾಜರ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಉತ್ಸವ ಮೂರ್ತಿಯ ವಿಸರ್ಜನೆ ಬರದ ಹಿನ್ನೆಲಯಲ್ಲಿ ಸರಳವಾಗಿ ನಡೆಯಿತು.  ಇದಕ್ಕೂ ಮುನ್ನ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಸಂಪ್ರದಾಯದದಂತೆ ಬೃಹತ್ ಗಣೇಶನ ಉತ್ಸವ ಮೂರ್ತಿಯ ಬದಲು ಈ ಬಾರಿ ಪರಿಸರ ಸ್ನೇಹಿ ಮಣ್ಣಿನಿಂದ ತಯಾರಿಸಲಾಗಿದ್ದ ಗಣೇಶನ ಮೂರ್ತಿಯನ್ನು ವಿಸರ್ಜಿಸಲಾಯಿತು.  ಪ್ರತಿ ವರ್ಷ ಅತ್ಯಂತ ವೈಭವೋಪೇರಿತ ಮೆರವಣಿಗೆ ನಡೆಯುತ್ತಿತ್ತು.  ನಾನಾ ಕಲಾ ತಂಡಗಳು ಗಣೇಶನ ಮೂರ್ತಿಯ ವಿಸರ್ಜನೆ ನಡೆಯುತ್ತಿತ್ತು.  ಆದರೆ, ಈ ಬಾರಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಆಡಂಬರದ ಮೆರವಣಿಗೆ ರದ್ದುಗೊಳಿಸಿ ಸಾಂಕೇತಿಕವಾಗಿ ಮೆರವಣಿಗೆ ನಡೆಸಲಾಯಿತು.  ನಂತರ ವಿಸರ್ನಜೆ ನಡೆಯಿತು.

Leave a Reply

ಹೊಸ ಪೋಸ್ಟ್‌