ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಈದ್- ಮಿಲಾದ್ ಆಚರಿಸಿದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜನ್ಮ ದಿನವಾದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಬೃಹತ್ ಮೆರವಣಿಗೆ ನಡೆಸಲಾಯಿತು. ಧರ್ಮಗುರುಗಳು, ಸಮಾಜದ ಮುಖಂಡರ ನೇತೃತ್ವದಲ್ಲಿ ನಡೆದ ಜೂಲೂಸ್ ನಲ್ಲಿ ಸಾವಿರಾರು ಜನರು ಪಾಲ್ಗೋಂಡರು. ಮೆರವಣಿಗೆ ನಡೆದ ರಸ್ತೆಗಳಲ್ಲಿ ಹಬ್ಬದ ಶುಭ ಕೋರುವ ಬ್ಯಾನರ್‌ಗಳು ರಾರಾಜಿಸಿದವು. ನಗರದ ನಾನಾ ಮಸೀದಿ ಮತ್ತು ದರ್ಗಾಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಮುಸ್ಲಿಮರ ಪವಿತ್ರ ಕ್ಷೇತ್ರಗಳಾದ ಮೆಕ್ಕಾ ಮತ್ತು ಮದೀನಾದ ಪ್ರತಿಕೃತಿಗಳು, ಫ್ಲೆಕ್ಸ್‌ಗಳು ಜನಮನ ಸೆಳೆದವು. ಧ್ವನಿವರ್ಧಕಗಳಲ್ಲಿ ಈದ್- ಮಿಲಾದ್ ಮಹತ್ವದ ಸಂದೇಶಗಳು ಪ್ರಸಾರವಾಗುತ್ತಿದ್ದರೆ, ಹಸಿರು ಧ್ವಜವನ್ನು ಹಿಡಿದ ಯುವಕರು ಮತ್ತು ಮಕ್ಕಳು ಉತ್ಸಾಹದಿಂದ ಮೆರವಣಿಗೆಯಲ್ಲಿ ಪಾಲ್ಗೋಂಡರು.
ಒಂದೆಡೆ ಮೆರವಣಿಗೆ ಸಾಗುತ್ತಿದ್ದರೆ, ಮಾರ್ಗ ಮಧ್ಯದಲ್ಲಿ ಸಮಾಜ ಸೇವಕರು ಮೆರವಣಿಗೆಯಲ್ಲಿ ಪಾಲ್ಗೋಂಡವರಿಗೆ ಹಣ್ಣು, ಸಿಹಿ, ಶರಬತ್ ಮತ್ತು ನೀರನ್ನು ವಿತರಿಸಿದರು. ರಸ್ತೆಯ ಎರಡೂ ಬದಿಗಳಲ್ಲಿ ನಿಂತ ಸಾವಿರಾರು ಜನರು ಮೆರವಣಿಗೆ ವೀಕ್ಷಿಸಿ ಸಂತಸಪಟ್ಟರು.
ಹಾಸಿಂಪೀರ ದರ್ಗಾದ ಪೀಠಾಧ್ಯಕ್ಷ ಸಯ್ಯದ್ ಶಾಹಾ ಮುತುರ್ಜಾ ಹುಸೇನಿ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರಿಫ್, ಆಜಾದ್ ಪಟೇಲ, ಎಂ. ಎಂ. ಸುತಾರ, ಇಂತಿಕಾಬ ಇಂಡಿಕರ, ದಿಲಾವರ ಖಾಜಿ, ಈಶಾಖಾದ್ರಿ ಮುಶ್ರೀಫ್, ಹುಸೇನ ಭಾಗಾಯತ, ಡಿ. ಎಸ್. ಮುಲ್ಲಾ, ಮಹಮ್ಮದಅಲಿ ಪಠಾಣ, ಜನಾಲುದ್ದೀನ ಪೀರಜಾದೆ, ಸಲೀಮ ಪೀರಜಾದೆ, ಬಂದೇನವಾಜ ಬೀಳಗಿ, ಶಿವಕುಮಾರ ಮತ್ತಿತರರು ಆಸರ್ ಮಹಲ್‌ನಲ್ಲಿ ಪ್ರಾರ್ಥನೆ ಸಲ್ಲಿಸಿ, ದರ್ಶನ ಪಡೆದರು.
ಈದ್ ಮಿಲಾದ್ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.