ವಿಜಯಪುರ: ಐಸಿಸಿ ಸಭೆಯ ತೀರ್ಮಾನದಂತೆ ಆಲಮಟ್ಟಿಯಲ್ಲಿರುವ ಲಾಲ ಬಹದ್ದೂರ ಶಾಸ್ತ್ರಿ ಜಲಾಶಯದ ವ್ಯಾಪ್ತಿಯ ಎಲ್ಲ ಕಾಲುವೆಗಳಿಗೆ ನೀರು ಹರಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಟಿ. ಭೂಬಾಲನ ಅವರ ಮೂಲಕ ಸಮಿತಿಯ ಅಧ್ಯಕ್ಷ ಮತ್ತು ಸಚಿವ ಆರ್. ಬಿ. ತಿಮ್ಮಾಪುರ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ, ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಕಳೆದ ಆಗಷ್ಟ 21 ರಂದು ಆಲಮಟ್ಟಿಯಲ್ಲಿ ನೀರಾವರಿ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಮುಂಗಾರು ಹಂಗಾಮಿಗೆ ವಾರಾಬಂದಿ ಪದ್ಧತಿಯಲ್ಲಿ ನೀರು ಬಿಡುಗಡಗೆ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ 14 ದಿನ ಕಾಲುವೆಗಳಿಗೆ ನೀರು ಹರಿಸುವುದು ಮತ್ತು 10 ದಿನ ನೀರು ಪೂರೈಕೆ ಬಂದ್ ಮಾಡುವ ಪದ್ದತಿ ಅನುಸರಿಸುವ ನಿಟ್ಟಿನಲ್ಲಿ ಐಸಿಸಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಮೊದಲು ಕಾಟಾಚಾರಕ್ಕೆ ಎಂಬಂತೆ ಕೇವಲ ಒಂದು ವಾರ ಮಾತ್ರ ಮುಳವಾಡ ಏತ ನೀರಾವರಿಯ ಮುಖ್ಯ ಕಾಲುವೆ ಸೇರಿದಂತೆ ಒಂದೆರಡು ಶಾಖಾ ಕಾಲುವೆಗಳಿಗೆ ನೀರು ಹರಿಸಿ ಒಂದೇ ವಾರದಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಮುಂಗಾರು ಬೆಳೆಗಳು ನೀರಿಲ್ಲದೆ ಸಂಪೂರ್ಣ ನೆಲಕಚ್ಚಿವೆ. ಕಾಲುವೆಗಳಿಗೆ ನೀರು ಬಂದರೆ ಅಲ್ಪ ಸ್ವಲ್ಪ ನೀರು ಉಣಿಸಿ ಸ್ವಲ್ಪ ಮಟ್ಟಿಗಾದರೂ ಮುಂಗಾರು ಬೆಳೆ ಕೈಗೆ ಬರುತ್ತವೆ ಎಂಬ ಆಶಾಭಾವದಲ್ಲಿದ್ದ ರೈತರಿಗೆ ಈಗ ಸಂಪೂರ್ಣ ನಿರಾಶೆಯಾಗಿದೆ. ಮುಂಗಾರು ಮಳೆ ಸಂಪೂರ್ಣ ಕೈ ಕೊಟ್ಟಿದ್ದರಿಂದ ರೈತರು ತುಂಬಾ ಹತಾಶೆಗೊಂಡಿದ್ದಾರೆ. ಜಿಲ್ಲೆಯ ರೈತರಿಗೆ ಐಸಿಸಿ ಸಮಿತಿ ಮೋಸ ಮಾಡಿದೆ ಎಂದು ಆರೋಪಿಸಿದರು.
ಜಲಾಶಯದಲ್ಲಿ ಈಗ 109.129 ಟಿಎಂಸಿ ನೀರು ಸಂಗ್ರಹವಿದ್ದು, ಅದರಲ್ಲಿ 17 ಟಿಎಂಸಿ ನೀರು ಡೆಡ್‌ಸ್ಟೋರೆಜ್ ಹೊರತುಪಡಿಸಿದರೂ ಇನ್ನು 91.509 ಟಿಎಂಸಿ ನೀರು ಲಭ್ಯವಿದೆ. ಈಗಲೂ ಜಲಾಶಯಕ್ಕೆ 1791 ಕ್ಯೂಸೆಕ್ ನೀರಿನ ಒಳ ಹರಿವಿದೆ. 1111 ಕ್ಯೂಸೆಕ್ ನೀರನ್ನು ಬೆಳೆಗಳಿಗಾಗಿ ಹರಿಸಲಾಗುತ್ತದೆ ಎಂದು ಹೇಳುತ್ತಿದ್ದಾರೆ. ಆದರೆ ಯಾವ ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಲಿ. ಇಲ್ಲಿಯವರೆಗೂ ಯಾವ ಕಾಲುವೆಗಳಿಗೂ ಸಮರ್ಪಕವಾಗಿ ಕೊನೆಯ ಅಂಚಿನವರೆಗೂ ನೀರು ತಲುಪಿಲ್ಲ. ನಮ್ಮ ಜಿಲ್ಲೆಯ ರೈತರಿಗೆ ಸಮರ್ಪಕವಾಗಿ ನೀರು ಕೊಡದೆ ದಿನ ನಿತ್ಯ ಜಲಾಶಯದಿಂದ 22000 ಕ್ಯೂಸೆಕ್ ನೀರನ್ನು ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ಹರಿಬಿಡಲಾಗುತ್ತಿದೆ. ಎಲ್ಲವನ್ನು ತ್ಯಾಗ ಮಾಡಿದ ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ರೈತರಿಗೆ ನೀರು ಕೊಡದೆ ನದಿ ಪಾತ್ರಕ್ಕೆ ಯಾವ ಉದ್ದೇಶಕ್ಕೆ ನೀರು ಯಾವ ಹರಿಸಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಜಿಲ್ಲೆಯಲ್ಲಿರುವ 116 ಕೆರೆಗಳು ಇನ್ನು ಭರ್ತಿಯಾಗಿಲ್ಲ. ಮೊದಲೇ ಬರಗಾಲದಿಂದ ತತ್ತರಿಸಿದ ರೈತರಿಗೆ ಸರಕಾರ ಕೂಡ ವಂಚಿಸುತ್ತಿದೆ. ಆಣೆಕಟ್ಟು ನಿರ್ಮಾಣಕ್ಕೆ ಜಮೀನು ಮನೆ ಮಠ ಕಳೆದುಕೊಂಡ ಅವಳಿ ಜಿಲ್ಲೆಯ ರೈತರಿಗೆ ಮೊದಲು ನೀರಿನ ಆದ್ಯತೆ ಕೊಟ್ಟು ಹೆಚ್ಚಿನ ನೀರು ಲಭ್ಯವಿದ್ದಲ್ಲಿ ಮಾತ್ರ ನದಿ ಪಾತ್ರಕ್ಕೆ ನೀರು ಹರಿಸಬೇಕು. ಕೂಡಲೇ ಎಲ್ಲ ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅರವಿಂದ ಕುಲಕರ್ಣಿ ರಾಜ್ಯ ಸರಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಗೌರವಾಧ್ಕಕ್ಷ ಈರಣ್ಣ ದೇವರಗುಡಿ, ಸೋಮನಗೌಡ ಪಾಟೀಲ, ಚನಬಸಪ್ಪ ಸಿಂಧೂರ, ಅಣ್ಣಾರಾಯಗೌಡ ಬಿರಾದಾರ, ಶಿವಪ್ಪ ಸುಂಠ್ಯಾಣ, ಸಂಗಪ್ಪ ಪಡಸಲಗಿ, ಸಂಗನಗೌಡ ಬಿರಾದಾರ, ಶರಣು ಇಟಗಿ, ಲಂಕ್ಯೆಪ್ಪ ತಳವಾರ, ಗಿರಿಮಲ್ಲಪ್ಪ ದೊಡಮನಿ, ಶಂಕ್ರೆಪ್ಪ ಹೂಗಾರ, ಚಿಂಟು ವಾಲಿಕಾರ, ಸೋಮನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.