ಶಾಸಕ ಯತ್ನಾಳ ಭಾವಚಿತ್ರವಿದ್ದ ಫ್ಲೆಕ್ಸ್ ಹರಿದು ಹಾಕಿದ ಕಿಡಿಗೇಡಿಗಳು- ಆರೋಪಿಗಳ ವಿರುದ್ಧ ಕ್ರಮಕ್ಕೆ ರಾಘವ ಅಣ್ಣಿಗೇರಿ ಆಗ್ರಹ- ತನಿಖೆ ನಡೆಸಿ ಕ್ರಮ- ಎಸ್ಪಿ ಸೋನಾವಣೆ

ವಿಜಯಪುರ: ಗಣೇಶೋತ್ಸವದ ಅಂಗವಾಗಿ ನಗರದ ಶಿವಾಜಿ ಚೌಕಿನಲ್ಲಿ ಹಾಕಲಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಭಾವಚಿತ್ರವಿದ್ದ ಬೃಹತ್ ಫ್ಲೆಕ್ಸ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದು, ಯತ್ನಾಳ ಬೆಂಬಲಿಗರಿಂದ ಆಕ್ರೋಶ ವ್ಯಕ್ತವಾಗಿದೆ.

ನಗರದ ಶಿವಾಜಿ ಚೌಕ್ ಬಳಿ ಗಣೇಶೋತ್ಸವಕ್ಕೆ ಶುಭಾಷಯ ಕೋರಿ ಯತ್ನಾಳ ಬೆಂಬಲಿಗರು ಸುಮಾರು 30 ಅಡಿ ಎತ್ತರದ ಬೃಹತ್ ಫ್ಲೆಕ್ಸ್ ಹಾಕಿದ್ದರು.  ಈ ಫ್ಲೆಕ್ಸ್ ನಲ್ಲಿ ಯತ್ನಾಳ ಫೋಟೋವನ್ನು ಹಾಕಲಾಗಿದೆ.  ವಿಷಯ ತಿಳಿಯುತ್ತಿದ್ದಂತೆ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮತ್ತೀತರ ಮುಖಂಡರು ಸ್ಥಳಕ್ಕೆ ದೌಡಾಯಿಸಿದರು.  ಅಲ್ಲದೇ, ಈ ಘಟನೆಗೆ ಕಾರಣರಾದ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವಂತೆ ಯತ್ನಾಳ ಬೆಂಬಲಿಗರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಘವ ಅಣ್ಣಿಗೇರಿ, ಮಧ್ಯಾಹ್ನ ಸಮಯದಲ್ಲಿ ಮೆರವಣಿಗೆಯೊಂದು ನಡೆಯುತ್ತಿತ್ತು.  ಈ ಸಂದರ್ಭದಲ್ಲಿ ಹಾಡು ಹಗಲೇ ಕಿಡಿಗೇಡಿಗಳು ಶಾಸಕರ ಭಾವಚಿತ್ರ ಹರಿದು ಹಾಕಿದ್ದಾರೆ.  ತಪ್ಪಿತಸ್ಥರ ವಿರುದ್ಧ ಪೊಲೀಸರು ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವಿಜಯಪುರ ನಗರದ ಶಿವಾಜಿ ಚೌಕಿನಲ್ಲಿ ಅಳವಡಿಸಲಾಗಿದ್ದ ಶಾಸಕ ಯತ್ನಾಳ ಅವರ ಫ್ಲೆಕ್ಸ್
ವಿಜಯಪುರದ ಶಿವಾಜಿ ಚೌಕಿನಲ್ಲಿ ಕಿಡಿಗೇಡಿಗಳು ಹರಿದು ಹಾಕಿರುವ ಶಾಸಕ ಯತ್ನಾಳ ಅವರ ಫ್ಲೆಕ್ಸ್

ಈ ವಿಷಯ ತಿಳಿಯುತ್ತಿದ್ದಂತೆ ಶಿವಾಜಿ ಚೌಕಿಗೆ ಆಗಮಿಸಿದ ಎಸ್ಪಿ ಸೋನಾವಣೆ ಋಷಿಕೇಷ ಭಗವಾನ ಮತ್ತು ಅಧಿಕಾರಿಗಳು ಹಾಗೂ ಸಿಬ್ಬಂದಿ ಹರಿದ ಬ್ಯಾನರನ್ನು ತೆರವು ಮಾಡಿದರು.  ಅಲ್ಲದೇ, ಸ್ಥಳದಲ್ಲಿದ್ದ ಯುವಕರನ್ನು ಚದುರಿಸಿದರು.  ಬಳಿಕ ಪರಿಶೀಲನೆ ನಡೆಸಿದ ಎಸ್ಪಿ, ಪರಿಸ್ಥಿತಿಯ ಸೂಕ್ಷ್ಮತೆ ಅರಿತು ಪೊಲೀಸರು ಸ್ಥಳದಲ್ಲಿಯೇ ಬೀಡು ಬಿಡುವಂತೆ ಸೂಚನೆ ನೀಡಿದರು.

ವಿಜಯಪುರದ ಶಿವಾಜಿ ಚೌಕಿನಲ್ಲಿ ಕಿಡಿಗೇಡಿಗಳು ಹರಿದು ಹಾಕಿದ ಫ್ಲೆಕ್ಸ್ ನ್ನು ಪೊಲೀಸರು ತೆರವುಗೊಳಿಸಿದರು

ಈಗ ಪೊಲೀಸರು ಇಲಾಖೆಯಿಂದ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರಾ ದೃಷ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.  ಅಲ್ಲದೇ, ಈ ಕೃತ್ಯದ ವಿಡಿಯೋ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೊಬೈಲ್ ವಿಡಿಯೋ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.  ಸಂಪೂರ್ಣ ತನಿಖೆಯ ಬಳಿಕ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್ಪಿ ಸೋನಾವಣೆ ಋಷಿಕೇಶ ಭಗವಾನ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌