ಬ್ಯಾನರ್ ಹರಿದ ಕಿಡಿಗೇಡಿಗಳನ್ನು ಗಡಿಪಾರು ಮಾಡಲು ಆಗ್ರಹ- ಬಿಜೆಪಿ ಮುಖಂಡರಿಂದ ಡಿಸಿ, ಎಸ್ಪಿಗೆ ಮನವಿ ಪತ್ರ ಸಲ್ಲಿಕೆ

ವಿಜಯಪುರ: ಗಣೇಶೋತ್ಸವದ ಅಂಗವಾಗಿ ನಗರದಲ್ಲಿ ಅಳವಡಿಸಲಾಗಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಬೃಹತ್ ಫ್ಲೆಕ್ಸ್ ಹರಿದಿರುವ ಆರೋಪಿಗಳನ್ನು ಗಡಿಪಾರು ಮಾಡುವಂತೆ ಆಗ್ರಹಿಸಿ ವಿಜಯಪುರ ಮಹಾನಗರ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು ಗುಮ್ಟ ನಗರಿಯಲ್ಲಿ ಡಿಸಿ ಮತ್ತು ಎಸ್ಪಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. 

ಗುರುವಾರ ನಗರದ ಶಿವಾಜಿ ವೃತ್ತದಲ್ಲಿ ಹಾಕಲಾಗಿದ್ದ ಶಾಸಕ ಬಸನಗೌಡ ಪಾಟೀ ಯತ್ನಾಳ ಅವರ ಬೃಹತ್ ಫ್ಲೆಕ್ಸ್ ನ್ನು ಕಿಡಿಗೇಡಿಗಳು ಹರಿದು ಹಾಕಿದ್ದರು.  ಈ ವಿಷಯ ತಿಳಿಯುತ್ತಿದ್ದಂತೆ ಯತ್ನಾಳ ಬೆಂಬಲಿಗರು ಶಿವಾಜಿ ಚೌಕಿಗೆ ಆಗಮಿಸಿದ್ದರು.  ಅಲ್ಲದೇ, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದರು.  ಈ ಕುರಿತು ಪೊಲೀಸರು ಪ್ರಕರಣವನ್ನೂ ದಾಖಲಿಸಿಕೊಂಡಿದ್ದಾರೆ.  ಈಗ ಈ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಗೂಂಡಾ ಆಕ್ಟ್ ನಡಿ ಬಂಧಿಸಿ ಗಡಿಪಾರು ಮಾಡುವಂತೆ  ಜಿಲ್ಲಾಧಿಕಾರಿ ಮತ್ತು ಎಸ್ಪಿಗೆ ಆಗ್ರಹಿಸಿ ಮಹಾನಗರ ಪಾಲಿಕೆ ಸದಸ್ಯರು ಮತ್ತು ಬಿಜೆಪಿ ಮುಖಂಡರು ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಸದಸ್ಯರಾದ ಶಿವರುದ್ರ ಬಾಗಲಕೋಟ ಮತ್ತು ಪ್ರೇಮಾನಂದ ಬಿರಾದಾರ ಸೆ. 28 ರಂದು ನಡೆದ ಮೆರವಣಿಗೆ ಸಂದರ್ಭದಲ್ಲಿ ಗಣೇಶೋತ್ಸವದ ಅಂಗವಾಗಿ ನಗರದ ಶಿವಾಜಿ ಚೌಕ್ ನಲ್ಲಿ ಶುಭಾಶಯ ಕೋರಲು ಹಾಕಲಾಗಿದ್ದ ಹಿಂದೂಗಳ ಆರಾಧಕ ಗಣೇಶ, ಹಿಂದೂ ಹೃದಯ ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜ ಮತ್ತು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಭಾವಚಿತ್ರಗಳಿದ್ದ ಬ್ಯಾನರನ್ನು ಕೆಲವು ಕಿಡಗೇಡಿಗಳು ಹರಿದು ಹಾಕುವ ಮೂಲಕ ಹಿಂದೂಗಳ ಭಾವನೆಗೆ ದಕ್ಕೆ ತಂದಿದ್ದಾರೆ.  ಇದು ಖಂಡನೀಯವಾಗಿದೆ ಎಂದು ಹೇಳಿದರು.

ಶ್ರೀ ಗಣೇಶ ಚತುರ್ಥಿ ಅಂಗವಾಗಿ ಹಿಂದೂಗಳ ಆರಾಧಕ ಶ್ರೀ ಗಜಾನನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, 5ನೇ ದಿನ, 7ನೇ ದಿನ ಮತ್ತು 9ನೇ ದಿನ ಅತ್ಯಂತ ಶಾಂತ ರೀತಿಯಲ್ಲಿ, ಕಾನೂನು ಉಲ್ಲಂಘಿಸದೆ ಮೆರವಣಿಗೆ ಮಾಡಿ, ಇಡೀ ದೇಶಕ್ಕೆ ಮಾದರಿ ಆಗಿದ್ದೇವೆ.  ಆದರೆ, ಬೇರೆ ಸಮುದಾಯದವರು ಮೆರವಣಿಗೆ ವೇಳೆ ಶಾಂತಿ ನೆಲೆಸಿರುವ ವಿಜಯಪುರ ನಗರದಲ್ಲಿ ಹಾಡುಹಗಲೇ ಇಂಥ ಹೀನ ಕೃತ್ಯ ನಡೆದಿರುವುದನ್ನು ನೋಡಿದರೆ ಶಾಂತಿ ಕದಡುವುದೇ ಕಿಡಗೇಡಿಗಳ ದುರುದ್ದೇಶ ಎಂಬುವುದು ಸ್ಪಷ್ಟವಾಗಿ ಕಂಡು ಬರುತ್ತದೆ.  ಸಂಘಟಕರ ವಿರುದ್ಧ ಕೂಡ ಕ್ರಮ ಕೈಗೊಳ್ಳಬೇಕು.  ಇಲ್ಲದಿದ್ದರೆ ಇಡೀ ರಾಜ್ಯಾದ್ಯಂತ ಹಿಂದೂ ಸಂಘಟನೆಗಳು ಮತ್ತು ಭಾರತೀಯ ಜನತಾ ಪಾರ್ಟಿ ನೇತೃತ್ವದಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ರಾಜಶೇಖರ ಮಗಿಮಠ, ಎಂ.ಎಸ್.ಕರಡಿ, ಮಲ್ಲಿಕಾರ್ಜುನ ಗಡಗಿ, ರಾಜಶೇಖರ ಕುರಿಯವರ, ಕಿರಣ ಪಾಟೀಲ, ಜವಾಹಾರ ಗೋಸಾವಿ, ಮುಖಂಡರಾದ ರಾಜೇಶ ದೇವಗಿರಿ, ಮಹೇಶ ಒಡೆಯರ, ಸಂತೋಷ ಪಾಟೀಲ, ಲಕ್ಷ್ಮಣ ಜಾಧವ, ಅಶೋಕ ಬೆಲ್ಲದ, ಶರಣು ಕಾಖಂಡಕಿ, ಬಸವರಾಜ ಕೋರಿ, ಸಚಿನ ಕುಮಸಿ, ಸಿದ್ದು ಬೆಲ್ಲದ, ಗಿರೀಶ ಪಾಟೀಲ, ಭರತ ಕೋಳಿ, ಪಾಫುಸಿಂಗ್ ರಜಪೂತ, ವಿಜಯ ಜೋಶಿ, ಬಾಬು ಶಿರಶ್ಯಾಡ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌