ವಿಜಯಪುರ: ನಗರದ ವಿಶ್ವವಿಖ್ಯಾತ ಗೋಳಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸೇರ್ಪಡೆ ಮಾಡುವಂತೆ ಆಗ್ರಹಿಸಿ ಸಂಸದ ರಮೇಶ ಜಿಗಜಿಣಗಿ ಅವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಮನವಿ ಮಾಡಿರೆ.
ಐತಿಹಾಸಿಕ ವಿಜಯಪುರವು 80ಕ್ಕೂ ಹೆಚ್ಚು ಭಾರತೀಯ ಪುರಾತತ್ವ ಸರ್ವೇಕ್ಷಣೆ ಇಲಾಖೆ(ಎಎಸ್‌ಐ) ಸಂರಕ್ಷಿತ ಸ್ಮಾರಕಗಳನ್ನು ಹೊಂದಿದೆ. ಅತೀ ಹೆಚ್ಚು ಸ್ಮಾರಕಗಳನ್ನು ಹೊಂದಿರುವ ವಿಜಯಪುರ ಭಾರತದ ಅತಿ ದೊಡ್ಡ ಪ್ರವಾಸಿ ಕೇಂದ್ರವಾಗಿದೆ. ರೋಮ್‌ನ ಸೇಂಟ್ ಪೀಟರ್ಸ್ ಬೆಸಿಲಿಕಾದ ನಂತರದ ಗಾತ್ರದಲ್ಲಿ ಇದುವರೆಗೆ ನಿರ್ಮಿಸಲಾದ ಎರಡನೇ ಅತಿದೊಡ್ಡ ಗುಮ್ಮಟ ಇದಾಗಿದ್ದು, ಈ ಸ್ಮಾರಕದಲ್ಲಿ ಪ್ರತಿ ಶಬ್ದವು ಏಳು ಬಾರಿ ಪ್ರತಿಧ್ವನಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ವಿಶ್ವವಿಖ್ಯಾತ ಗೋಲಗುಮ್ಮಟವನ್ನು ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವುದರಿಂದ ಜಿಲ್ಲೆಯ ಪ್ರವಾಸೋದ್ಯಮವು ಅಭಿವೃದ್ದಿ ಹೊಂದಿ, ಸಾವಿರಾರು ಜನರಿಗೆ ನೇರ ಹಾಗೂ ಪರೋಕ್ಷವಾಗಿ ಉದ್ಯೋಗವು ದೊರೆಯಲಿದೆ. ಹೋಟೆಲ್ ಉದ್ಯಮಕ್ಕೆ ಉತ್ತೇಜನ ಸೇರಿದಂತೆ ಪ್ರಮುಖ ಬೆಳೆಗಳಾದ ಲಿಂಬೆ, ದ್ರಾಕ್ಷಿ, ದಾಳಿಂಬೆ ಬೆಳೆಗಳ ರಫ್ತಿಗೆ ಉತ್ತೇಜನ ದೊರೆಯಲಿರುವುದರಿಂದ ವಿಶ್ವವಿಖ್ಯಾತ ಗೋಲಗುಮ್ಮಟವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವಂತೆ ರಮೇಶ ಜಿಗಜಿಣಗಿ ಪತ್ರದ ಮೂಲಕ ಮನವಿ ಮಾಡಿದ್ದಾರೆ.