ವಿಜಯಪುರ: ನಗರದ ಪ್ರತಿಷ್ಠಿತ ಶ್ರೀ. ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಅತೀ ಶೀಘ್ರದಲ್ಲಿ ತೆರೆದ ಹೃದಯದ ಶಸ್ತ್ರಚಿಕಿತ್ಸೆ ಮತ್ತು ಕಿಟ್ನಿ ಟ್ರಾನ್ಸಪ್ಲ್ಯಾಂಟ್ ಶಸ್ತ್ರಚಿಕಿತ್ಸೆ ಮಾಡಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಶುಕ್ರವಾರ ವಿಶ್ವ ಹೃದಯ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶ್ರೀ ಬಿ. ಎಂ. ಪಾಟೀಲ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ತೆರೆದ ಹೃದಯ ಮತ್ತು ಕಿಡ್ನಿ ಟ್ರಾನ್ಸಪ್ಲ್ಯಾಂಟ್ ಶಸ್ತ್ರಚಿಕಿತ್ಸೆಗಳಿಗೆ ಈಗಾಗಲೇ ಪರವಾನಿಗೆ ದೊರಕಿದೆ. ಈ ಹಿನ್ನೆಲೆಯಲ್ಲಿ ಶೀಘ್ರದಲ್ಲಿ ಈ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ರೋಗಿಗಳು ನಾನಾ ಕಡೆ ಅಲೆದಾಡುವುದು ತಪ್ಪಲಿದೆ ಎಂದು ಅವರು ತಿಳಿಸಿದರು.
ಅನಾರೋಗ್ಯಕರ ಆಹಾರ, ತಂಬಾಕು ಬಳಕೆ, ದೈಹಿಕ ಚಟುವಟಿಕೆಗಳ ಕೊರತೆ ಮತ್ತು ಮದ್ಯಪಾನ ಶೇ. 80 ರಷ್ಟು ಹೃದಯ ಸಂಬಂಧಿತ ಕಾಯಿಲೆಗಳಿಗೆ ಕಾರಣವಾಗಿವೆ. ಈ ಕಾಯಿಲೆಗಳನ್ನು ತಡೆಯಲು ಪ್ರತಿಯೊಬ್ಬರು ತಮ್ಮ ದಿನಚರಿಗಳನ್ನು ಬದಲಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ತಿಳಿಸಿದರು.
ಶಿಬಿರ ಉದ್ಘಾಟಿಸಿದ ಹೃದಯ ಖ್ಯಾತ ಶಸ್ತ್ರಚಿಕಿತ್ಸಕ ಡಾ. ರವಿ ಘಟ್ನಟ್ಟಿ ಮಾತನಾಡಿ, ಮಧ್ಯ ವಯಸ್ಕರು ಬೆಳಿಗ್ಗೆ ಉಪಹಾರದ ಬದಲಿಗೆ ಜ್ಯೂಸ್ ಅಥವಾ ಕಾಫಿ ಸೇವಿಸಿ ಸುಮ್ಮನಾಗುತ್ತಾರೆ. ಸರಿಯಾದ ಸಮಯಕ್ಕೆ ಊಟವನ್ನೂ ಮಾಡುವುದಿಲ್ಲ. ಈ ಆಹಾರ ಪದ್ಧತಿಗಳಿಂದ ಹೃದಯ ಸಂಬಂಧಿ ನಾನಾ ರೋಗಗಳು ಬರುತ್ತವೆ. ಸಮತೋಲಿತ ಆಹಾರ ಸೇವನೆ, ತೂಕ ಇಳಿಸಿಕೊಳ್ಳುವುದು, ಉಪ್ಪು ಮತ್ತು ಸಕ್ಕರೆಯ ಕಡಿಮೆ ಬಳಕೆ, ಕೊಬ್ಬಿನಾಂಶಗಳ ಮಿತವಾದ ಬಳಕೆಯಿಂದ ಉತ್ತಮ ಆರೋಗ್ಯ ಹೊಂದಬಹುದು. ಅಲ್ಲದೇ, ಕೋಪ, ಹತಾಶೆಯನ್ನು ಕಡಿಮೆ ಮಾಡಿ ಧ್ಯಾನ ಮಾಡುವುದು, ಪ್ರತಿನಿತ್ಯ ಕನಿಷ್ಠ 30 ನಿಮಿಷ ವ್ಯಾಯಮ ಮಾಡುವುದು, ಪ್ರತಿದಿನ ಸುಮಾರು 10 ಸಾವಿಹ ಹೆಜ್ಜೆ ನಡೆಯುವುದು, ಧೂಮಪಾನ, ಮಧ್ಯಪಾನ, ತಂಬಾಕು ಸೇವನೆಯಿಂದ ದೂರ ಇರುವುದು ಮತ್ತು ಆಗಾಗ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಬಹುದಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹೃದ್ರೋದ ತಜ್ಞರಾದ ಡಾ. ಸಂಜೀವ ಸಜ್ಜನರ, ಡಾ. ಮಡಿವಾಳಸ್ವಾಮಿ ಡವಳಗಿಮಠ, ಡಾ. ಶ್ರುಷ್ಠಿ ವಾಳದ, ಡಾ. ಮಿಲಿಂದ, ಡಾ. ಮಿಶ್ರಾ, ಆಡಳಿತಾಧಿಕಾರಿ ಶಾಂತೇಶ ಸಲಗರ, ವೀರಣ್ಣ ಜುಮನಾಳಮಠ, ಶ್ರೂಶ್ರುಷಾಧಿಕಾರಿ ಸಿಬ್ಬಂದಿಯಾದ ಶಿವನಗೌಡ, ರಾಮು, ಅಂಬಿಕಾ, ರವಿ, ಮುತ್ತು, ಆಸ್ಮಾ ಪಟೇಲ, ರವಿ, ಅನೀಲ, ಪ್ರಯೋಗಾಲಯ ಸಿಬ್ಬಂದಿ ಉಪಸ್ಥಿತರಿದ್ದರು.
ಚನ್ನಬಸವ ಕೊಟಗಿ ನಿರೂಪಿಸಿ ವಂದಿಸಿದರು.
ಈ ಸಂದರ್ಭದಲ್ಲಿ ಶಿಬಿರದಲ್ಲಿ ಪಾಲ್ಗೋಂಡ ಜನರಿಗೆ ಉಚಿತವಾಗಿ ವೈದ್ಯರ ಸಮಾಲೋಚನೆ, ಇಸಿಜಿ, 2ಡಿ ಇಕೋ, ಟಿಎಂಟಿ ಸೇರಿದಂತೆ ನಾನಾ ರೀತಿಯ ಚಿಕಿತ್ಸೆಯನ್ನು ನೀಡಲಾಯಿತು. ನೂರಾರು ಜನರು ಈ ಶಿಬಿರದ ಪ್ರಯೋಜನ ಪಡೆದುಕೊಂಡರು. ಅಗತ್ಯವಿರುವ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಲಾಯಿತು.