ವಿಜಯಪುರ: ರಾಜ್ಯದಲ್ಲಿ ಹಿಂದೂ ವಿರೋಧಿ ಮತ್ತು ಲಿಂಗಾಯಿತ ವಿರೋಧಿ ಸರಕಾರ ಅಧಿಕಾರಿದಲ್ಲಿದೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿನಲ್ಲಿ ಲಿಂಗಾಯಿತ ನಾಯಕರು ಮತ್ತು ಅಧಿಕಾರಿಗಳಿಗೆ ಸೂಕ್ತ ಪ್ರಾತಿನಿಧ್ಯ ನೀಡಿಲ್ಲ ಎಂದು ಮಾಜಿ ಸಚಿವ ಮತ್ತು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಅಖಿಲ ಭಾರತ ವೀರಶೈವ ಮಹಾಸಭೆ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ನೀಡಿರುವ ಹೇಳಿಕೆಗೆ ಯತ್ನಾಳ ಬೆಂಬಲ ವ್ಯಕ್ತಪಡಿಸಿದರು.
ಅದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಆದರೆ ನಾನು ಮಾತ್ರ ಶಾಮನೂರು ಶಿವಶಂಕರಪ್ಪ ಹೇಳಿರುವುದನ್ನು ಸ್ವಾಗತಿಸುತ್ತೇನೆ. ಅದು ನಿಜವಾಗಿದೆ. ಲಿಂಗಾಯಿತ ಅಧಿಕಾರಿಗಳಿಗೂ ಅವಮಾನ ಮಾಡಲಾಗುತ್ತಿದೆ. ಲಿಂಗಾಯಿತ ಸಮುದಾಯದ ಓರ್ವ ಡಿಸಿ, ಓರ್ವ ಎಸ್ಪಿ, ಓರ್ವ ಅಧಿಕಾರಿಗೂ ಉನ್ನತ ಅಧಿಕಾರ ನೀಡಿಲ್ಲ. ಎಲ್ಲರನ್ನೂ ಮೂಲೆಗುಂಪು ಮಾಡಿ್ದದಾರೆ. ರಾಜ್ಯ ಸರಕಾರ ಮೊದಲನೆಯದಾಗಿ ಹಿಂದೂ ವಿರೋಧಿಯಾಗಿದೆ. ಎರಡನೇಯದು ಲಿಂಗಾಯಿತ ವಿರೋಧಿಯಾಗಿದೆ. ಇಡೀ ಅಲ್ಪಸಂಖ್ಯಾತ ಅಧಿಕಾರಿಗಳು ಒಳ್ಳೊಳ್ಳೆ ಪೋಸ್ಟ್ ನಲ್ಲಿದ್ದಾರೆ. ಫೈನಾನ್ಸ್ ಸೆಕ್ರೆಟರಿ ಅವರೇ ಇದ್ದಾರೆ. ಸಿದ್ಧರಾಮಯ್ಯ ಮುಖ್ಯಮಂತ್ರಿ ಕಚೇರಿಯಲ್ಲಿ ಎಲ್ಲ ಅವರೇ ಇದ್ದಾರೆ. ಎಲ್ಲ ಒಳ್ಳೆಯ ಹುದ್ದೆಗಳನ್ನು ಅವರಿಗೆ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯ ಸರಕಾರ ಅಲ್ಪಸಂಖ್ಯಾತರ ತುಷ್ಠೀಕರಣ ಮಾಡುತ್ತಿದೆ. ಅವರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭಾವನೆ ಹೊಂದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಲಿಂಗಾಯಿತ ಶಾಸಕರು ಆಯ್ಕೆಯಾಗಿದ್ದರೂ ಪ್ರಯೋಜನವಾಗಿಲ್ಲ. ಕಾಂಗ್ರೆಸ್ಸಿನಲ್ಲಿರುವ ಲಿಂಗಾಯಿತ ಶಾಸಕರಿಗೆ ಧಮ್ ಇಲ್ಲ. ಅವರು ಧೈರ್ಯ ಮಾಡುವುದಿಲ್ಲ. ಪಾಪ ಬಿ. ಆರ್. ಪಾಟೀಲ ಅವರು ಮಾತನಾಡಿದರು ಮತ್ತು ಸುಮ್ಮನಾದರು. ಬಸವರಾಜ ರಾಯರೆಡ್ಡಿ ಮಾತನಾಡಿದ್ದಾರೆ. ನಮ್ಮಂಗ ಮಾತನಾಡಿದರೆ ಯಾಕೆ ಕೊಡುವುದಿಲ್ಲ? ಶಾಮನೂರು ಶಿವಶಂಕರಪ್ಪ ಅವರು ಸೋನಿಯಾ ಗಾಂಧಿ ಅವರ ಬಳಿಗೆ ಹೋಗಬೇಕು. ಇಲ್ಲದಿದ್ದರೆ ಲೋಕಸಭೆಯಲ್ಲಿ ನಮ್ಮ ಜನ ಬುದ್ದಿ ಕಲಿಸುತ್ತೇವೆ ಎಂದು ಹೇಳಬೇಕು. ಶ್ಯಾಮನೂರು ಶಿವಶಂಕರಪ್ಪ ಅವರಿಗೆ ವಯಸ್ಸಾಗಿದೆ. ಆದರೂ ಇಷ್ಟು ಮಾತನಾಡಿದ್ದಾರೆ. ಅವರೇ ಒಳ್ಳೆಯವರು ಎಂದು ಅವರು ಹೇಳಿದರು
ಕಾವೇರಿ ಹೋರಾಟದಲ್ಲಿ ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ವಿಚಾರ
ಕಾವೇರಿ ಹೋರಾಟದಲ್ಲಿ ಕೆಲವುೊಂದು ಸಂಘಟನೆಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕೆಲವೊಂದು ಸಂಘಟನೆಗಳು 10 ಜನರನ್ನು ಕರೆದುಕೊಂಡು ಝೆಂಡಾ ಹಿಡಿದುಕೊಂಡು ಹೋರಾಟ ಮಾಡುತ್ತಾರೆ. ಅವರನ್ನು ಮಾಧ್ಯಮದವರು ಹೀರೋ ಮಾಡಲು ಹೊರಟರೂ ಅವರು ಹೀರೋಗಳಾಗುವುದಿಲ್ಲ. ಕೆಲವು ಸಂಘಟನೆ ಲೀಡರ್ ಗಳು ದೊಡ್ಡ ದೊಡ್ಡ ರಿಯಲ್ ಎಸ್ಟೆಟ್ ಧಂದೆ ಹೊಂದಿದ್ದಾರೆ. ಇವರು ಮಿನಿಸ್ಟರ್ ಮನೆಯಲ್ಲಿಯೇ ಇರುತ್ತಾರೆ. ಸಿಎಂ ಮತ್ತು ಡಿಸಿಎಂ ಮನೆಯಲ್ಲಿರುತ್ತಾರೆ ಎಂದು ಆರೋಪಿಸಿದರು.
ಡಿಸಿಎಂ ಸ್ವಾತಂತ್ರ್ಯ ಹೋರಾಟಕ್ಕೆ ಇಲ್ಲವೇ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆ ಹೋಗಿದ್ದರಾ?
ಡಿಸಿಎಂ ಅವರನ್ನು ಜೈಲಿನಿಂದ ಬಿಟ್ಟ ಮೇಲೆ ಅವರನ್ನು ಮಾತನಾಡಿಸಲು ಕೆಲವು ಸಂಘಟನೆಗಳ ಮುಖಂಡರು ಹೋಗುತ್ತಾರೆ. ಅವರೇನು ಸ್ವಾತಂತ್ರ್ಯ ಹೋರಾಟ ಇಲ್ಲವೇ ಪಾಕಿಸ್ತಾನದ ಜೊತೆ ಯುದ್ಧದಲ್ಲಿ ಪಾಲ್ಗೋಂಡಿದ್ದರಾ? ಅವರು ಜೈಲಿಗೆ ಯಾಕೆ ಹೋಗಿದ್ದರು? ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಜೈಲಿಗೆ ಹೋಗಿದ್ದರು. ಅವರ ಮನೆಗೆ ಹೋದರೆ ನಿಮ್ಮ ನೈತಿಕತೆ ಎಲ್ಲಿದೆ? ಆ ಎಂದು ಸಂಘಟನೆಗಳ ಮುಖಂಡರನ್ನು ಶಾಸಕರು ಪ್ರಶ್ನಿಸಿದರು.
ಶೆಟ್ಟರ್, ಸವದಿಯಿಂದ ಬಿಜೆಪಿಗೆ ಹಿನ್ನೆಡೆಯಾಗಿಲ್ಲ
ಇದೇ ವೇಳೆ ಮಾಜಿ ಶಾಸಕರು ಕಾಂಗ್ರೆಸ್ ಸೇರುತ್ತಿರುವ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಜಗದೀಶ ಶೆಟ್ಟರ ಎಷ್ಟು ಜನರನ್ನು ಒಯ್ಯುತ್ತಾರೆ ಒಯ್ಯಲಿ. ಎಲ್ಲ ವೇಸ್ಟ್ ಬಾಡಿಗಳು ಹೋಗಲಿ. ಹೊಸ ಹೊಸ ಮಂದಿ ಬರುತ್ತಾರೆ. ಹೊಸದಾಗಿ ಯುವಕರು ಬಿಜೆಪಿಗೆ ಬರಬೇಕಾಗಿದೆ. ಯಾರು ಹೋಗುತ್ತಾರೆ ಹೋಗಲಿ. ಅವರಿಗೆ ಏನು ಮಾಡಲು ಆಗುತ್ತೆ? ಅವರಿದೆ ದೇಶ ಬೇಕಾಗಿಲ್ಲ. ಧರ್ಮ ಬೇಕಾಗಿಲ್ಲ. ಶೆಟ್ಟರ್ ಎಕ್ಸ್ ಆಗಿದ್ದಾರೆ. ಹೋಗುವವರೂ ಎಕ್ಸ್ ಇದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಸೋತಿದ್ದಾರೆ. ಈಗ ಸೋತವರನ್ನು ತೆಗೆದುಕೊಂಡು ಹೋಗಲಿ. ಈಗ ನಾಯಕತ್ವ ಯಾರ ಮೇಲೂ ಅವಲಂಬಿತವಾಗಿಲ್ಲ. ಹೊಸ ಯುವಕರು ಎಂಎಲ್‌ಎ ಆದರೆ ಹುರುಪಿನಿಂದ ಕೆಲಸ ಮಾಡುತ್ತಾರೆ. ಈಗ ಎಲ್ಲ ಅನುಭವಿಸಿದ್ದಾರೆ. 75 ವರ್ಷಗಳ ನಂತರವೂ ಎಲ್ಲ ಆಗಬೇಕು ಎಂದರೆ ಹೇಗೆ? ಬಿಟ್ಟು ಕೊಡಬೇಕು. ಹೊಸ ನೀರು ಬರಬೇಕು. ಹಳೆ ನೀರು ರಿಟಾಯರ್ಡ್ ಆಗಬೇಕು ಎಂದು ಹೇಳಿದರು.
ಲಕ್ಷ್ಮಣ ಸವದಿ ಮತ್ತು ಜಗದೀಶ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆಯಿಂದ ಬಿಜೆಪಿಗೆ ಹಿನ್ನೆಡೆಯಾಗಿಲ್ಲ. ಒಳ ಮೀಸಲಾತಿ ಸರಿಯಾಗಿ ಜನರನ್ನು ತಲುಪಲಿಲ್ಲ. ಗ್ಯಾರಂಟಿ ಯೋಜನೆಗಳು ಮತ್ತು ನಮ್ಮ ಆಡಳಿತದಲ್ಲಿದ್ದ ಲೋಪದೋಷಗಳು ನಮಗೆ ಹಿನ್ನೆಡೆಯಾಗಲು ಕಾರಣ. ಈ ಮಹಾತ್ಮರು ಹೋಗಿದ್ದರಿಂದ ಬಿಜೆಪಿಗೆ ಹಿನ್ನೆಡೆಯಾಗಿಲ್ಲ. ಒಳಮೀಸಲಾತಿಯನ್ನು ಯಾರಿಗೂ ಹೇಳದೆ ಮಾಡಿದರು. ನಮ್ಮ ಸಂಪ್ರದಾಯಸ್ಥ ಮತದಾರರು ಹಾಗೂ ಪಂಚ ಗ್ಯಾರಂಟಿಗಳು ಹಿನ್ನೆಡೆಗೆ ಕಾರಣವಾದವು. ನಾವೂ ಕೂಡ ಪ್ರತಿಯೊಂದು ಬಿಪಿಎಲ್ ಕಾರ್ಡಿಗೆ ರೂ. 3000 ನೀಡುವಂತೆ ಹೇಳಿದ್ದೇವು. ಆದರೆ, ಪ್ರಧಾನಿ ಮೋದಿಯವರು ದೇಶ ದಿವಾಳಿ ಆಗುವುದು ಬೇಡ ಎಂಬ ಸದುದ್ದೇಶದಿಂದ ಯಾವುದನ್ನೂ ಜಾರಿ ಮಾಡಲಿಲ್ಲ. ಬದಲಾಗಿ ಬಡಜನರಿಗೆ ಅನುಕೂಲವಾಗುವ ಯೋಜನೆ ಮಾಡಿದ್ದೇವೆ. ಬಡವರಿಗೆ ಕೊರೊನಾದಲ್ಲಿ ನಮ್ಮ ಪ್ರಧಾನ ಮಂತ್ರಿಗಳು 10 ಕೆಜಿ ಅಕ್ಕಿ ಫ್ರಿ ಕೊಟ್ಟರು. ಉಚಿತವಾಗಿ ಲಸಿಕೆ ನೀಡಿದರು. ಮಾನವೀಯತೆ ಎಲ್ಲಿದೆ ಅಲ್ಲಿ ಕೊಡಬೇಕು. ದಿನಾಲೂ ನಾವು ಎಲ್ಲವನ್ನು ಕೊಡುತ್ತ ಹೋದರೆ ದುಡಿಯುವವರು ಯಾರು? ದಿನಾಲೂ ಎಲ್ಲರೂ ಚೈನಿ ಹೊಡಿತಾರೆ ಎಂದು ಅವರು ಹೇಳಿದರು.
ಪ್ರತಿಪಕ್ಷದ ನಾಯಕನ ಆಯ್ಕೆ ವಿಚಾರ
ಪ್ರತಿಪಕ್ಷದ ನಾಯಕನ ಆಯ್ಕೆ ವಿಳಂಬದಲ್ಲಿ ಏನೋ ದೊಡ್ಡದು ನಡೆದಿದೆ. ನಮ್ಮ ಮೇಲಿನವರು ಏನೂ ಮಾಡುತ್ತಿಲ್ಲ ಎನ್ನುವುದಾದರೆ ಏನೋ ನಡೆದಿರಬೇಕು. ಪ್ರತಿಪಕ್ಷದ ನಾಯಕನ ಆಯ್ಕೆ ಬೇಡವೇ ಬೇಡ. ಒಮ್ಮೆಲೇ ಮುಖ್ಯಮಂತ್ರಿ ಮಾಡೋಣ ಎಂಬ ಉದ್ದೇಶ ಹೊಂದಿರಬಹುದು ಎಂದು ಅವರು ಹೇಳಿದರು.
ಗಣೇಶೋತ್ಸವ ಸ್ವಾಗತ ಬ್ಯಾನರ್ ಹರಿದ ವಿಚಾರ
ನಗರದ ಶಿವಾಜಿ ಚೌಕಿನಲ್ಲಿ ಗಣೇಶೋತ್ಸವಕ್ಕೆ ಶುಭ ಕೋರಿ ಹಾಕಲಾಗಿದ್ದ ಬ್ಯಾನರ್ ನ್ನು ಕಿಡಿಗೇಡಿಗಳು ಹರಿದು ಹಾಕಿದ ಘಟನೆಯ ಕುರಿತು ಶಾಸಕರು ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದರು.
ಮೊನ್ನೆಯ ಚುನಾವಣೆಯಲ್ಲಿ ಹತಾಶರಾಗಿದ್ದಾರೆ. ಈ ಸಲ ಗೆದ್ದೆ ಗೆಲ್ಲುತ್ತೇವೆ ಎಂದು ಅವರು ನಿರೀಕ್ಷೆ ಇಟ್ಟುಕೊಂಡಿದ್ದರು. ಅವರಿಗೆ ಗೆಲ್ಲಲು ಆಗಲಿಲ್ಲ. ಈ ಹಿನ್ನೆಲೆಯಲ್ಲಿ ಇಂಥ ಚಿಲ್ಲರೆ ಕೆಲಸ ಮಾಡಿದ್ದಾರೆ. ಈಗಾಗಲೇ ಪೊಲೀಸರು ಎಲ್ಲ ರೀತಿಯಲ್ಲಿ ಕ್ರಮ ಕೈಗೊಂಡಿದ್ದಾರೆ. ತಕ್ಷಣ ಅವರನ್ನು ಬಂಧಿಸಿ ಎಲ್ಲ ಕ್ರಮ ಕೈಗೊಳ್ಳುತ್ತಿದ್ದಾರೆ. ಬ್ಯಾನರ್ ಹರಿಯುವುದರಿಂದ ನಮ್ಮ ವರ್ಚಸ್ಸು ಹಾಳಾಗುವುದಿಲ್ಲ. ಆದರೆ, ಶಿವಾಜಿ ಮಹಾರಾಜರು ಮತ್ತು ಗಣಪತಿಯ ಭಾವಚಿತ್ರಕ್ಕೂ ಅವಮಾನ ಮಾಡಿರುವುದು ನಮಗೆ ನೋವಾಗಿದೆ. ಒಂದು ವೇಳೆ ಅವರು ವಿಜಯಪುರ ಎಂ.ಎಲ್.ಎ ಆಗಿದ್ದರೆ ಏನು ಮಾಡುತ್ತಿದ್ದರು ಎಂಬುದು ಇದರಿಂದ ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.
ಈ ವಿಷಯದಲ್ಲಿ ಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಾರೆ. ಇದರಲ್ಲಿ ಯಾರದೂ ಹಸ್ತಕ್ಷೇಪ ಇಲ್ಲ. ಕೆಲವೊಂದು ಈ ವಿಚಾರದಲ್ಲಿ ಏನೇನೋ ಹರಡಿಸುತ್ತಿದ್ದಾರೆ. ಆದರೆ, ಅದು ಹಾಗಿಲ್ಲ. ಇದರಲ್ಲಿ ಮಂತ್ರಿಗಳ ಸಹೋದರ ಎಂಬುದು ಎಲ್ಲ ಸುಳ್ಳು. ಈಗ ಮಾಡಿದವರಿಗೆ ಕೆಟ್ಟ ಬುದ್ದಿ ಇದೆ. ತಪ್ಪಿತಸ್ಥರ ವಿರುದ್ಧ ಸರಕಾರ ಕ್ರಮ ಕೈಗೊಳ್ಳುತ್ತಿದೆ. ಅದಕ್ಕೆ ನನ್ನದೇನೂ ಆಕ್ಷೇಪವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಎರಡು ಸಲ ಸೋತ ಮೇಲೆ, ಈ ಸಲ ಗೆಲ್ಲುವ ಬಹಳ ವಿಶ್ವಾಸವಿತ್ತು. ಹಿಂದೂಗಳ ಮತ ವಿಭಜನೆಯಾಗುತ್ತೆ ಎಂದು ಕೆಲವು ಹಿಂದೂ ನಾಯಕರನ್ನು ಖರೀದಿ ಮಾಡಿದ್ದರು. ಅಲ್ಲದೇ, ಆ ನಾಯಕರಿಗೆ ಒಂದೊಂದು ರೇಟ್ ಫಿಕ್ಸ್ ಮಾಡಿದ್ದರು. ವಾರ್ಡುಗಳ ಸಣ್ಣ ಕಾರ್ಯಕರ್ತರಿಗೆ ರೂ. 50 ಸಾವಿರ, ಸ್ವಲ್ಪ ಓಣಿಯಲ್ಲಿ ಲೀಡರ್ ಇದ್ದರೆ ರೂ. 1 ಲಕ್ಷ, ಬಹಳ ದೊಡ್ಡ ಲೀಡರ್ ಇದ್ದರೆ ರೂ. 3 ಕೋಟಿ, ಮಾಜಿ ಕಾರ್ಪೋರೇಟರ್ ಗಳಿಗೆ ರೂ. 50 ಲಕ್ಷ ವ್ಯವಸ್ಥೆ ಮಾಡಿದ್ದರು. ಹೀಗಾಗಿ ಇಷ್ಟೇಲ್ಲ ಮಾಡಿದರೂ ಸಹಿತ ವಿಜಯಪುರದ ನಮ್ಮ ಜನ ನಮ್ಮ ಅಭಿವೃದ್ಧಿ ಮತ್ತು ನಮ್ಮ ಸುರಕ್ಷತೆ ನೋಡಿ ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಕಡೆ ಪಕ್ಷ ಇಷ್ಟಾದರೂ ಸೇಡು ತೀರಿಸಿಕೊಳ್ಳೋಣ ಎಂದು ಹೇಳಿ ಬ್ಯಾನರ್ ಹರಿಯುವ ಪ್ರಯತ್ನ ಮಾಡಿದ್ದಾರೆ. ಪ್ರಜಾತಂತ್ರದಲ್ಲಿ ಚುನಾವಣೆ ಮೂಲಕ ಜನ ಏನು ತೀರ್ಪು ನೀಡೋತ್ತಾರೋ ಅದೇ ಅಂತಿಮ. ಅಲ್ಲಿ ಯಾವುದೂ ಬ್ಯಾನರ್ ಹರಿಯಲು ಅವಕಾಶವಿರುವುದಿಲ್ಲ ಎಂದು ಅವರು ಹೇಳಿದರು.
ಸೌಹಾರ್ದ ಕೆಡಿಸಲು ಈ ರೀತಿ ಮಾಡಿದ್ದಾರೆ. ನಮ್ಮ ದೇಶದಲ್ಲಿ ಏನಾದರೂ ಗಲಾಟೆ ನಡೆದರೂ ಅದು ಅವರಿಂದಲೇ. ನಮ್ಮ ಗಣೇಶ ಮೆರವಣಿಗೆಯಲ್ಲಿ ಯಾರೂ ಗಲಾಟೆ ಮಾಡುವುದಿಲ್ಲ. ಕುಣಿಯುತ್ತಾರೆ, ಕುಪ್ಪಳಿಸುತ್ತಾರೆ. ಅಷ್ಟು ಬಿಟ್ಟರೆ ಕಲ್ಲು ಒಗೆಯುವ ಸಂಸ್ಕೃತಿ ನಮ್ಮಲ್ಲಿ ಇಲ್ಲ. ಅವರೇ ಕಲ್ಲು ಎಸೆಯುವುದು, ಬ್ಯಾನರ್ ಹರಿಯುವುದು, ಸುಮ್ಮನೆ ಬಂದು ಹಿಂದೂ ಮರೆವಣಿಗೆಯಲ್ಲಿ ಖಾರಪುಡಿ ಎಸೆಯುವ ಕೆಲಸ ಮಾಡುತ್ತಾರೆ. ಸಂಕ್ರಮಣದಲ್ಲಿಯೂ ಕೆಲವು ವರ್ಷ ಖಾರಪುಡಿ ಎರಚಿದ್ದಾರೆ ಎಂದು ಅವರು ಆರೋಪಿಸಿದರು.
ಅಷ್ಟೇ ಅಲ್ಲ, ಇನ್ನೂ ವಿಚಿತ್ರ ಎಂದರೆ ಜ್ಞಾನಯೋಗಾಶ್ರಮ ಗುರು ಪೂರ್ಣಿಮೆ ದಿನದಂದು ಒಳಗೆ ಎಲುಬಿನ ತುಕಡಿ ತಂದು ಎಸೆಯುತ್ತಿದ್ದರು. ನಾವು ಜವಾಬ್ದಾರಿ ತೆಗೆದುಕೊಂಡ ಬಳಿಕ ಅದಕ್ಕೆ ಕಡಿವಾಣ ಹಾಕಿದ್ದೇವೆ. ಪ್ರಚೋದನೆ ಮಾಡುವುದು ಅವರ ಕೆಲಸ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಕರ್ನಾಟದಲ್ಲಿ ಅವರು ತಮಗೆ ಬಲ ಬಂದಿದೆ ಎಂದುಕೊಂಡಿದ್ದಾರೆ. ಪಾಕಿಸ್ತಾನ ಆಡಳಿತ ಬಂದಂಗೆ ಅಂದುಕೊಂಡಿದ್ದಾರೆ. ಇದಕ್ಕೆ ನಾವೂ ಎಲ್ಲ ರೀತಿಯಲ್ಲಿ ಅಂದರೆ ವಿಜಯಪುರದಲ್ಲಿ ಕೋಮು ಸೌಹಾರ್ದತೆ ಕೆಡದಂತೆ ಕ್ರಮ ಕೈಗೊಂಡಿದ್ದೇನೆ. 1994ರಲ್ಲಿ ನಾನು ಶಾಸಕನಾದಾಗಿನಿಂದ ಯಾವುದೇ ಕೋಮು ಗಲಭೆಯಾಗಿಲ್ಲ. ಅದಕ್ಕೂ ಮುಂಚೆ ಗಲಾಟೆಗಳಾಗಿದ್ದವು. ಅಂದು ಲಾಲ್ ಬಹಾದ್ದೂರ ಶಾಸ್ತ್ರಿ ಮಾರುಕಟ್ಟೆ ಸುಟ್ಟ ಘಟನೆ ನಡೆದಿದ್ದವು. ನಮ್ಮ ಎಲ್ಲ ಅಧಿಕಾರಿಗಳು ಸಕ್ಷಮರಿದ್ದಾರೆ. ಏನೇ ಪರಿಸ್ಥಿತಿ ಬಂದರೂ ಕ್ರಮ ಕೈಗೊಳ್ಳುತ್ತಾರೆ. ಹೀಗಾಗಿ ಈಗ ಮೊದಲಿನ ಪರಿಸ್ಥಿತಿ ಇಲ್ಲ ಎಂದು ಬಸನಗೌಡ ಪಾಟೀಲ ಯತ್ನಾಳ ಹೇಳಿದರು.