ತಾಂತ್ರಿಕತೆ ಬೆಳೆದಂತೆ ಅವಿಭಕ್ತ ಕುಟುಂಬದಿಂದ ವಿಭಕ್ತವಾದಿ ಮಾರ್ಪಡುತ್ತಿವೆ- ಎಡಿಸಿ ಮಹಾದೇವ ಮುರಗಿ ಕಳವಳ

ವಿಜಯಪುರ: ತಾಂತ್ರಿಕತೆ ಬೆಳೆದಂತೆ ಅವಿಭಕ್ತ ಕುಟುಂಬಗಳು ವಿಭಕ್ತ ಕುಟುಂಬಗಳಾಗಿ ಮಾರ್ಪಡುತ್ತಿವೆ ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಕಳವಳ ವ್ಯಕ್ತಪಡಿಸಿದ್ದಾರೆ. 

ನಗರದ ಜಿ. ಪಂ. ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಹಾಗೂ ಹಿರಿಯ ನಾಗರಿಕರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿಂದೆ ಕುಟುಂಬ ಸದಸ್ಯರು ಒಂದೇ ಕಡೆ ವಾಸಿಸುತ್ತಿದ್ದರು.  ಕುಟುಂಬದವರು ಹಿರಿಯರ ನಿರ್ದೇಶನ, ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದರು.  ಆದರೆ, ಇಂದಿನ ಬದಲಾದ ಕಾಲಘಟದಲ್ಲಿ ಕೇವಲ ಆಸೆ, ಅಂತಸ್ತು, ಉನ್ನತ ಸ್ಥಾನ ಗಳಿಸುವುದರಲ್ಲಿಯೇ ಪ್ರತಿಯೊಬ್ಬರು ಮಗ್ನರಾಗಿದ್ದಾರೆ.  ಮಕ್ಕಳನ್ನು ಹಣಗಳಿಕೆಗೆ ವಿದೇಶಕ್ಕೆ ಕಳುಹಿಸಲಾಗುತ್ತಿದೆ.  ಹಿಂದಿನಿಂದ ಬಂದ ಸಂಸ್ಕೃತಿ, ಸಂಸ್ಕಾರ, ಪ್ರೀತಿ, ಗೌರವ, ವಿಶ್ವಾಸಗಳು ಇಂದಿನ ಮಕ್ಕಳಲ್ಲಿ ಬೆಳೆಸದಿರುವುದು ಕಳವಳಕಾರಿಯಾಗಿದೆ ಎಂದು ಅವರು ಹೇಳಿದರು.

ಇಂದು ಹಿರಿಯರಿಗೆ ಗೌರವ ಸಿಗುತ್ತಿಲ್ಲ.  ತಂದೆ- ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಟ್ಟು ಬರುವ ಘಟನೆಗಳು ಮತ್ತು ಅಪರಾಧಗಳು ಹೆಚ್ಚುತ್ತಿವೆ.  ಮಕ್ಕಳಲ್ಲಿ ಗುರು- ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸುವ ಅವಶ್ಯಕತೆ ಇದೆ.  ಹಿರಿಯ ನಾಗರಿಕರನ್ನು ಪೋಷಣೆಗೋಸ್ಕರ ಸರಕಾರ ಹಿರಿಯ ನಾಗರಿಕರ ಅಧಿನಿಯಮ ಕಾಯ್ದೆ ಜಾರಿಗೆ ತಂದಿದೆ.  ಹಿರಿಯ ನಾಗರಿಕರಿಗೆ ಯಾವುದೇ ತೊಂದರೆಗಳಿದ್ದರೆ ಉಪವಿಭಾಗಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಿ ದೂರುಗಳನ್ನು ನೀಡಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಮಹಾದೇವ ಮುರಗಿ ಹೇಳಿದರು.

ವಿಜಯಪುರದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು

ಹೆಚ್ಚುವರಿ ಎಸ್ಪಿ ಶಂಕರ ಮಾರಿಹಾಳ ಮಾತನಾಡಿ, ಇಂದು ನಮ್ಮ ಮಕ್ಕಳ ಚಲನವಲನಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಿಲ್ಲ.  ಮಕ್ಕಳ ದಿನ ನಿತ್ಯ ಚಟುವಟಿಕೆಗಳ ಕುರಿತು ಗಮನ ನೀಡುತ್ತಿಲ್ಲ.  ಮಕ್ಕಳು ಮೋಬೈಲ್ ಗೀಳಿನಿಂದ ಪಾಶ್ಚಾತ ಸಂಸ್ಕೃತಿ ಅಳವಡಿಸಿಕೊಳ್ಳುತ್ತಿದ್ದು, ತಂದೆ- ತಾಯಿಗಳ ಗಮನಕ್ಕೆ ಕೂಡ ಬರುವುದಿಲ್ಲ.  ಹೀಗಾಗಿ ಮಕ್ಕಳ ಕುರಿತು ನಿಗಾ ವಹಿಸುವುದು ಸೂಕ್ತವಾಗಿದೆ.  ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ ಸಂಸ್ಕೃತಿ, ಸಂಸ್ಕಾರ ನೀಡಬೇಕು.  ನಮ್ಮ ಮಕ್ಕಳಂತೆ ಸೊಸೆಯಂದಿಯರರನ್ನೂ ಕಾಣಬೇಕು.  ಹಿರಿಯರಾದ ನಾವು ಕೂಡ ಅವರೊಂದಿಗೆ ಸಹಕರಿಸಬೇಕು ಎಂದು ಅವರು ಹೇಳಿದರು.

ಸಾಹಿತಿ ಗುರುಶಾಂತ ಹಿರೇಮಠ ಮಾತನಾಡಿ, ನಮ್ಮ ದೇಶ ಸದೃಢವಾಗಬೇಕಾದರೆ ಹಿರಿಯ ನಾಗರಿಕರ ಅನುಭವ ಅತ್ಯವಶ್ಯಕವಾಗಿದೆ.  ದೇಶದ ಸಂಸ್ಕೃತಿ, ಸಂಸ್ಕಾರ ಅತ್ಯುನ್ನತವಾದುದು.  ದೇಶ ವಿದೇಶಗಳಲ್ಲಿ ನಮ್ಮ ಸಂಸ್ಕೃತಿ ಬೆಳೆಯುತ್ತಿದೆ.  ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸುವ ಭರದಲ್ಲಿ ಸುಶಿಕ್ಷಿತರನ್ನಾಗಿ ಮಾಡುವುದನ್ನು ಮರೆಯುತ್ತಿದ್ದೇವೆ.  ಜೀವನದಲ್ಲಿ ಸಾಧನೆ ಎಂದರೇನು? ಮಕ್ಕಳಲ್ಲಿ ಪ್ರಾಥಮಿಕ ಹಂತದಲ್ಲೆ ಅವರಿಗೆ ತಿಳಿಸಿ ಕೊಡಬೇಕು.  ಮನೆಯಲ್ಲಿ ಒಬ್ಬರು ಹಿರಿಯರಿದ್ದರೆ ಅವರು ಒಂದು ವಿಶ್ವವಿದ್ಯಾಲಯವಿದ್ದಂತೆ.  ಮಕ್ಕಳಿಗೆ ಉತ್ತಮ ಶಿಕ್ಷಣ, ಧಾರ್ಮಿಕತೆ, ಸಂಸ್ಕೃತಿ, ಒಳ್ಳೆಯದನ್ನು ಕಲಿಸುವುದರ ಜೊತೆಗೆ ಹಿರಿಯರಿಗೆ ಗೌರವಿಸುವುದನ್ನು ತಿಳಿಸಬೇಕು ಎಂದು ಅವರು ಹೇಳಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಾದ ಕೆ. ಕೆ. ಚವ್ಹಾಣ ಮಾತನಾಡಿ, ವಿಜ್ಞಾನ ಹಾಗೂ ತಾಂತ್ರಿಕತೆಗಳಿಂದ ಸಮಾಜದಲ್ಲಿ ಬದಲಾವಣೆಯಾಗುತ್ತಿವೆ.  ಮಕ್ಕಳಲ್ಲಿ ಸಂಸ್ಕಾರ ನೀಡಿದರೂ ಕೂಡ ಮಕ್ಕಳು ಬದಲಾವಣೆಯತ್ತ ಸಾಗುತ್ತಿದ್ದಾರೆ.  ಹಿರಿಯರು ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರ ಬೆಳೆಸುವುದರೊಂದಿಗೆ ಅವರ ಭವಿಷ್ಯದ ಕುರಿತಿನ ಕಡೆಗೆ ಹೆಚ್ಚು ಗಮನ ವಹಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರು ಮತ್ತು ನಿವೃತ್ತ ಪ್ರಾಚಾರ್ಯ ವೈ. ಬಿ. ಪಟ್ಟಣಶೆಟ್ಟಿ ಮತ್ತು ಚನ್ನಬಸು ಬಗಲಿ ಅವರನ್ನು ಸನ್ಮಾನಿಸಲಾಯಿತು.  ನಾನಾ ಸ್ಪರ್ದೆಗಳಲ್ಲಿ ಭಾಗವಹಿಸಿದ ಹಿರಿಯ ನಾಗರಿಕರಿಗೆ ಪ್ರಶಸ್ತಿ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ವಿಜಯಪುರ ತಹಸೀಲ್ಧಾರ ಆರ್. ಕವಿತಾ, ಜಿಲ್ಲಾ ಪಂಚಾಯಿತಿ ಯೋಜನಾ ಉಪಕಾರ್ಯದರ್ಶಿ ಎ. ಬಿ. ಅಲ್ಲಾಪುರ, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್. ಪಿ. ಬಿರಾದಾರ, ಶತಾಯುಷಿ ಗುರವ್ವ ಸಂಗಯ್ಯ ಹಿರೇಮಠ, ವಿಷ್ಣು ರಾಠೋಡ, ಗುರು, ಸುನೀಲಕುಮಾರ, ಮುತ್ತುರಾಜ ಭೋಸ್ಲೆ, ಬಿರಾದಾರ, ರವಿ, ಹಿರಿಯ ನಾಗರಿಕರು ನಾನಾ ಸಂಘ- ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.

ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ಸಹಾಯಕ ನಿರ್ದೇಶಕ ರಾಜಶೇಖರ ದೈವಾಡಿ ಸ್ವಾಗತಿಸಿದರು.  ಎಂ. ಬಿ. ರಜಪೂತ ನಿರೂಪಿಸಿ ವಂದಿಸಿದರು.

Leave a Reply

ಹೊಸ ಪೋಸ್ಟ್‌