ಬ್ಯಾನರ್ ಪ್ರಕರಣ ಸಿಬಿಐಗೆ ವಹಿಸಲಿ- ಖೊಟ್ಟಿ ಮತದಾನದ ಕುರಿತು ಸಿದ್ದೇಶ್ವರ ದೇವಸ್ಥಾನದಲ್ಲಿ ಶಾಸಕರು ಪ್ರಮಾಣ ಮಾಡಲಿ- ಅಬ್ದುಲ್ ಹಮೀದ್ ಮುಶ್ರಿಫ್

ವಿಜಯಪುರ: ನಗರದಲ್ಲಿ ಇತ್ತೀಚೆಗೆ ಬ್ಯಾನರ್ ಹರಿದ ಪ್ರಕರಣ ಮತ್ತು ವಿಧಾನಸಭೆ ಚುನಾವಣೆ  ಸಂದರ್ಭದಲ್ಲಿ ನಡೆದ ಖೊಟ್ಟಿ ಮತದಾನ ಪ್ರಕರಣಗಳನ್ನು ಸಿಬಿಐ ತನಿಖೆ ಮಾಡಿಸಬೇಕು ಎಂದು ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಆಗ್ರಹಿಸಿದ್ದಾರೆ.

ವಿಜಯಪುರದಲ್ಲಿ ಮಾತನಾಡಿದ ಅವರು, ನಗರ ಶಾಸಕರು ಅನಾವಶ್ಯಕವಾಗಿ ಪಾಕಿಸ್ತಾನ ಹೆಸರಿನ ಮೇಲೆ ರಾಜಕೀಯ ಮಾಡುತ್ತಿದ್ದಾರೆ.  ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಚಿಂಚೋಳಿ, ಬೀದರ, ನಾಗಠಾಣ, ಸೇಡಂ ಸೇರಿದಂತೆ ಹಲವಾರು ಕಡೆಯಿಂದ ಜನರನ್ನು ಕರೆಯಿಸಿ ಖೊಟ್ಟಿ ಮತದಾನ ಮಾಡಿಸಿ ಗೆದ್ದಿದ್ದಾರೆ.  ಈ ಕುರಿತು ಸಾಕ್ಷಿ ಸಮೇತ ಪ್ರಕರಣ ದಾಖಲಿಸಿದ್ದೇನೆ.  ಬೋಗಸ್ ಮತದಾನ ಮಾಡಿಸಿಲ್ಲ ಎಂದು ಶಾಸಕರು ಶ್ರೀ ಸಿದ್ಧೇಶ್ವರ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಶಾಸಕರು ದಿನ ಬೆಳಗಾದರೆ ಸಾಕು ಬರೀ ಪಾಕಿಸ್ತಾನದ ಮಾತುಗಳನ್ನು ಹೇಳುತ್ತಾರೆ.  ಮೊದಲು ಅವರು ಅಭಿವೃದ್ಧಿ ಕಡೆ ಗಮನ ಕೊಡಬೇಕು.  ಈ ಹಿಂದೆ ನಗರದ ಟಿಪ್ಪು ಸುಲ್ತಾನ ವೃತ್ತ, ಮನಗೂಳಿ ಅಗಸಿ ಮೇಲೆ ಪಾಕಿಸ್ತಾನ ದ್ವಜ ಹಾರಿಸಲು ಹಚ್ಚಿದವರು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಧೈರ್ಯವಿದ್ದರೆ ಖೊಟ್ಟಿ ಮತದಾನ ಮತ್ತು ಬ್ಯಾನರ್ ಹರಿದ ಪ್ರಕರಣಗಳನ್ನು ಸಿಬಿಐಗೆ ವಹಿಸಲಿ ಎಂದು ಅವರು ಹೇಳಿದರು.

ಶಾಸಕರು ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಸಹಿಸದೇ ಅನಾವಶ್ಯಕವಾಗಿ ಟೀಕೆ ಮಾಡುತ್ತ ಇನ್ನೊಬ್ಬರ ಮೇಲೆ ಗೂಬೆ ಕೂಡಿಸುವುದನ್ನು ಬಿಡಬೇಕು.  ನಿಮ್ಮ ಮಾತುಗಳು ತಾತ್ವಿಕ ಸಿದ್ದಾಂತ ಹೊಂದಿರಬೇಕು.  ಯಾವ ಕಾರ್ಯಕ್ರಮಗಳಿಗೆ ಹೋಗುತ್ತೀರೋ ಅಲ್ಲಿ ಆ ಕಾರ್ಯಕ್ರಮದ ಬಗ್ಗ ಮಾತನಾಡಬೇಕು.  ಅದನ್ನು ಬಿಟ್ಟು ಕೇವಲ ಶತ್ರುರಾಷ್ಟ್ರ ಪಾಕಿಸ್ತಾನ ಬಗ್ಗೆ ಮಾತನಾಡುವುದು ಮತ್ತು ಹಿಂದು- ಮುಸ್ಮಿಮರ ನಡುವೆ ದ್ವೇಷ ಹರಡುವುದನ್ನು ಬಿಟ್ಟು ಬೇರೆ ಏನು ಮಾತನಾಡುವುದಿಲ್ಲ ಎಂಬಂತಾಗಿದೆ.  ಕೇಂದ್ರದಲ್ಲಿ ನಿಮ್ಮದೇ ಸರಕಾರವಿದೆ.  ಧೈರ್ಯವಿದ್ದರೆ ನಿಮ್ಮ ಪಕ್ಷದ ಪ್ರಧಾನಿಯವರಿಗೆ ಹೇಳಿ ನಮ್ಮ ಸರಕಾರದ ಹಾಗೆ ಗ್ಯಾರಂಟಿ ಕೊಡಿಸಿ.  ಜನರಿಗೆ ಉಚಿತವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು,  ಬೆಲೆಗಳೆಲ್ಲ ಗಗನಕ್ಕೇರಿದ್ದು ಅವುಗಳನ್ನು ಮೊದಲು ಕಡಿಮೆ ಮಾಡಿಸಿ, ಅದನ್ನು ಬಿಟ್ಟು ಬಾಯಿ ಚಪಲಕ್ಕೆ ಮಾತಾಡಬಾರದು.  ಕೇವಲ ಹಿಂದೂ ಮುಸ್ಲಿಂ ಎಂಬ ಕೋಮು ಭಾವನೆ ಕೆರಳಿಸಿ ರಾಜಕೀಯ ಮಾಡುವುದು ನಿಮ್ಮ ಕೆಲಸವಾಗಿದೆ ಎಂದು ಅಬ್ದುಲ್ ಅವರು ಹೇಳಿದರು.

ಬ್ಯಾನರ್ ಹರಿಸುವಷ್ಟು ಚಿಲ್ಲರೆ ಕೆಲಸವನ್ನು ನಾನು ಮಾಡುವುದಿಲ್ಲ.  ಅಂಥ ಬುದ್ದಿಯೂ ನನಗೆ ಇಲ್ಲ.  ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಒತ್ತಾಯಿಸುತ್ತಿದ್ದೇನೆ ಎಂದು ಹೇಳಿದ ಅವರು, ನಾನೇನು 40 ಪರ್ಸೆಂಟ್ ಕಮೀಷನ್ ತಿಂದಿಲ್ಲ.  ಶಾಸಕರು ಸಿದ್ಧಸಿರಿ ಮೂಲಕ ಹಣ ಹಂಚಿ ಖೊಟ್ಟಿ ಮತದಾನದಿಂದ ಆರಿಸಿ ಬಂದು ಇಷ್ಟು ಮಾತನಾಡುತ್ತಿದ್ದಾರೆ.  2014ರಲ್ಲಿ ಯಾರು ಗಲಭೆ ಮಾಡಿಸಿ ಓಡಿ ಹೋಗಿದ್ದರು ಎಂಬುದಕ್ಕೆ ಇತಿಹಾಸವಿದೆ.  ಅದಕ್ಕಾಗಿ ನಗರ ಶಾಸಕರು ನಮ್ಮ ಬಗ್ಗೆ ಮತ್ತು ಮುಸ್ಲಿಮರ ಬಗ್ಗೆ ಮಾತನಾಡಿದರೆ ಇನ್ನುಮುಂದೆ ಸಹಿಸುವುದಿಲ್ಲ ಎಂದು ಅಬ್ದುಲ್ ಹಮೀದ್ ಮುಶ್ರಿಫ್ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌