ವಿಜಯಪುರ: ಮಹಾತ್ಮ ಗಾಂಧಿ ಮತ್ತು ಲಾಲ ಬಹದ್ದೂರ ಶಾಸ್ತ್ರಿ ಅವರ ಜಯಂತಿ ದಿನ ಅ. 2ರಂದೇ ರಾಜ್ಯಾದ್ಯಂತ ಗಾಣಿಗ ಗುರುಪೀಠದ ಪ್ರಥಮ ಜಗದ್ಗುರು ಲಿಂ. ಜಯದೇವ ಜಗದ್ಗುರುಗಳ ಜಯಂತೋತ್ಸವ ಆಚರಿಸೋಣ ಎಂದು ಗಾಣಿಗ ಗುರುಪೀಠದ ಡಾ. ಜಯಬಸವ ಕುಮಾರ ಜಗದ್ಗುರು ಸಮಾಜಕ್ಕೆ ಕರೆ ಕೊಟ್ಟಿದ್ದಾರೆ.
ನಗರದ ವನಶ್ರೀ ಸಂಸ್ಥಾನ ಮಠದಲ್ಲಿ ನಡೆದ ಲಿಂ. ಜಯದೇವ ಜಗದ್ಗುರುಗಳ 85ನೇ ಜಯಂತೋತ್ಸವ ಮತ್ತು 14ನೇ ವಾರ್ಷಿಕ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಾತ್ಮಾ ಗಾಂಧಿ ಮತ್ತು ಶಾಸ್ತ್ರಿಯವರ ತತ್ವಾದರ್ಶಗಳಂತೆ ಲಿಂ. ಜಯದೇವ ಜಗದ್ಗುರುಗಳು ಕೂಡ ಅಹಿಂಸೆ, ಸರಳತೆಯ ಕಾಯಕಯೋಗಿಗಳಾಗಿ ಸಮಾಜಕ್ಕೆ ತಮ್ಮನ್ನು ಸಮರ್ಪಿಸಿಕೊಂಡು ನಿಸ್ವಾರ್ಥ ಸೇವೆಗೈದು ಅಜರಾಮರಾಗಿದ್ದಾರೆ. ಹೀಗಾಗಿ ಪ್ರತಿವರ್ಷ ಅ. 2ರಂದೇ ಜಯದೇವ ಜಗದ್ಗುರುಗಳ ಜಯಂತೋತ್ಸವವನ್ನು ಗಾಣಿಗರೆಲ್ಲರೂ ರಾಜ್ಯಾದ್ಯಂತ ಆಚರಣೆ ಮಾಡೋಣ ಎಂದು ಹೇಳಿದರು.
ಗಾಣಿಗ ಸಮಾಜಕ್ಕೆ ನಡೆದಾಡುವ ದೇವರು ಸಿದ್ದೇಶ್ವರ ಅಪ್ಪರವರು, ಲಿಂಗೈಕ್ಯ ಜಯದೇವ ಜಗದ್ಗುರುಗಳು ಹಾಗೂ ಜಮಖಂಡಿಯ ಸಿದ್ದಮುತ್ಯಾ ಅವರುಗಳು ತಾತ್ವಿಕವಾಗಿ ಸಮಾಜದ ಸಾಂಸ್ಕೃತಿಕ ರಾಯಭಾರಿಗಳಾಗಿದ್ದಾರೆ. ಗಾಣಿಗ ಸಮಾಜ ಎಲ್ಲಾ ಸ್ತರದಲ್ಲೂ ಅಭಿವೃದ್ಧಿ ಹೊಂದಲು ಸಂಘನಾತ್ಮಕವಾಗಿ ಒಗ್ಗೂಡಿದಾಗ ಮಾತ್ರ ಸಾಧ್ಯ ಎಂದು ಅವರು ಹೇಳಿದರು.
ಜಮಖಂಡಿ ಸಿದ್ದಮುತ್ಯಾ ಮಾತನಾಡಿ, ಸಮಾಜಕ್ಕೆ ಹಲವು ಹಿರಿಯರ ಪರಿಶ್ರಮದ ಫಲದಿಂದ 2ಎ ಮೀಸಲಾತಿ ಲಭಿಸಿದೆ. ಎಲ್ಲರೂ 2ಎ ಮೀಸಲಾತಿ ಪ್ರಮಾಣ ಪತ್ರ ಪಡೆದುಕೊಳ್ಳುವ ಮೂಲಕ ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸರಕಾರದ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು. ನಾವೆಲ್ಲರೂ ಉಪಜಾತಿಗಳ ಹೆಸರಿನಲ್ಲಿ ಬೇರ್ಪಡದೇ ಸುಸಂಸ್ಕೃತರಾಗಿ ಗಾಣಿಗ ಎಂಬ ಒಂದೇ ಸಮಾಜದಡಿ ಒಗ್ಗೂಡಿದರೆ ಖಂಡಿತ ಯಶಸ್ವಿಯಾಗಿ ಅಭಿವೃದ್ಧಿಯಾಗುತ್ತೇವೆ ಎಂದು ಹೇಳಿದರು.
ಅಖಿಲ ಭಾರತ ಗಾಣಿಗ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಲಿಂ. ಜಯದೇವ ಜಗದ್ಗುರುಗಳು ವನಶ್ರೀಮಠ ಸ್ಥಾಪಿಸಿ ಯಾರಿಂದಲೂ ಸಹಾಯ, ಹಣ ಪಡೆಯದೇ ಸ್ವಪರಿಶ್ರಮ, ದುಡಿಮೆಯಲ್ಲಿ ಸಮಾಜಕ್ಕೆ ಮಠ ಸ್ಥಾಪಿಸಿ ಸರ್ವಸ್ವವನ್ನೂ ಸಮಾಜಕ್ಕೆ ಅರ್ಪಿಸಿ ಹೋಗಿದ್ದಾರೆ. ಗಾಣಿಗ ಸಮಾಜ ಅಸಂಘಟಿತ ಸಮಾಜವಾಗಿದೆ. ದೇಶಕ್ಕೆ ವಿದ್ಯುತ್ ದೀಪ ಬರುವ ಮುಂಚೆ ನಮ್ಮ ಕುಲಕಸುಬು ಗಾಣಿಗ ಕಾಯಕದ ಮೂಲಕ ದೇಶದ ಎಲ್ಲಾ ಸಮಾಜಗಳ ಮನೆದೀಪ ಬೆಳಗಿಸುವ ಕಾರ್ಯ ಮಾಡಿದ ಸಮಾಜ ಇಂದು ದೀಪದ ಕೆಳಗಿನ ಕತ್ತಲಿನಂತೆ ಎಲ್ಲದರಲ್ಲಿಯೂ ಅಭಿವೃದ್ಧಿಯಿಂದ ಹಿಂದುಳಿದಿದ್ದೇವೆ ಎಂದು ಹೇಳಿದರು.
ವಿಜಯಪುರ ಉಪವಿಭಾಗಾಧಿಕಾರಿ ಬಸವಣ್ಣೆಪ್ಪ ಕಲಶೆಟ್ಟಿ, ವಿಜಯಪುರ ಗ್ರಾಮೀಣ ಡಿವೈಎಸ್ಪಿ ಗಿರಿಮಲ್ಲ ಎಚ್. ತಳಕಟ್ಟಿ ಅವರು ವಿಶೇಷ ಉಪನ್ಯಾಸ ನೀಡಿದರು.
ಸಮಾಜದ ಜಿಲ್ಲಾಧ್ಯಕ್ಷ ಬಿ. ಬಿ. ಪಾಸೋಡಿ ಪ್ರಸ್ತಾವಿಕವಾಗಿ ಮಾತನಾಡಿದರು. ನೌಕರರ ಘಟಕದ ಜಿಲ್ಲಾಧ್ಯಕ್ಷ ಸಿದ್ದಲಿಂಗ ಚೌಧರಿ ನಿರೂಪಣೆ ಮಾಡಿದರು.
ಇದೇ ವೇಳೆ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಶೇ. 80 ಕ್ಕೂ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹ ಧನ ನೀಡಿ ಹಾಗೂ ಸಮಾಜದ ಖ್ಯಾತ ವೈದರು, ನಾನಾ ಇಲಾಖೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಾಜದ ಜನಸ್ನೇಹಿ ಅಧಿಕಾರಿಗಳನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜೈನಾಪುರದ ಸಿದ್ದಲಿಂಗ ಸ್ವಾಮೀಜಿ, ರೂಗಿ ಮಹಾತಾಯಿ ಸಾನಿಧ್ಯ ವಹಿಸಿದ್ದರು. ಹಿರಿಯರಾದ ಎಸ್. ಎಸ್. ಶಿರಾಡೋಣ, ಗೌರವಾಧ್ಯಕ್ಷ ಬಿ. ಎಂ. ಪಾಟೀಲ ಕತ್ನಳ್ಳಿ, ಕಾರ್ಯಾಧ್ಯಕ್ಷ ಅಶೋಕ ತರಡಿ, ಉಪಾಧ್ಯಕ್ಷ ಸಿ. ಎಸ್. ಬಿರಾದಾರ, ಶರಣಪ್ಪ ಶ್ಯಾಪೇಟಿ, ಎ. ಎಸ್. ಹೊಸಮನಿ ಪ್ರಧಾನ ಕಾರ್ಯದರ್ಶಿ ಡಾ. ಬಾಬು ಸಜ್ಜನ ಸೇರಿದಂತೆ ಸಮಾಜದ ಹಿರಿಯರು, ಜಿಲ್ಲಾ, ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.