ಶಾಮನೂರು ಸಿಎಂ ಜೊತೆ ಮಾತನಾಡಬೇಕಿತ್ತು- ಇಬ್ರಾಹಿಂ ಕೈ ಸೇರ್ಪಡೆಯಾದರೆ ಸ್ವಾಗತ- ಸಚಿವ ಶಿವಾನಂದ ಎಸ್. ಪಾಟೀಲ

ವಿಜಯಪುರ: ಶಾಮನೂರು ಶಿವಶಂಕರಪ್ಪ ಪಕ್ಷದಲ್ಲಿ ಹಿರಿಯರಿದ್ದು ಏನೇ ವಿಷಯಗಳಿದ್ದರೂ ಮುಖ್ಯಮಂತ್ರಿಗಳಿಗೆ ಸಲಹೆ ಕೊಡಬಹುದು ಎಂದು ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಎ ಪಿ ಎಂ ಸಿ ಸಚಿವ ಶಿವಾನಂದ ಎಸ್. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಲಿಂಗಾಯತರಿಗೆ ಮಾನ್ಯತೆ ಸಿಗದ ಹಿನ್ನೆಲೆ ಶಾಮನೂರು ಶಿವಶಂಕರಪ್ಪ ಅಸಮಾಧಾನ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದರು.

ಶಾಮನೂರು ಶಿವಶಂಕರಪ್ಪ ಅವರು ಮುಖ್ಯಮಂತ್ರಿ ಅವರಿಗಿಂತಲೂ ಹಿರಿಯರಿದ್ದಾರೆ.  ಶಾಮನೂರು ಶಿವಶಂಕರಪ್ಪ ಅವರು ಸಿಎಂ ಗೆ ಸಲಹೆ ಕೊಡಬಹುದಾಗಿತ್ತು.  ಅವರು ಏನೇ ಸಲಹೆ ಕೊಟ್ಟರೂ ಮುಖ್ಯಮಂತ್ರಿಗಳು ಮುಕ್ತ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದರು ಎಂಬುದು ನನ್ನ ಅಭಿಪ್ರಾಯ ಎಂದು ಸಚಿವರು ಹೇಳಿದರು.

ಭಿನ್ನಾಭಿಪ್ರಾಯ ವಿಚಾರ

ರಾಜ್ಯ ಸರಕಾರದಲ್ಲಿ ಯಾವುದೇ ಸರಕಾರ ಅದ್ದರೂ ಜಾತಿಯತೆಯ ಮೇಲೆ ಪೋಸ್ಟಿಂಗ್ ಮಾಡಲು ಆಗುವುದಿಲ್ಲ.  ನನಗೆ ಎ ಪಿ ಎಂ ಸಿ ನಿರ್ದೇಶಕರನ್ನು ಬದಲಾಯಿಸಬೇಕಿತ್ತು.  ಓರ್ವ ಸಮರ್ಥ ಅಧಿಕಾರಿಯನ್ನು ಹಾಕಿ ಎಂದು ಹೇಳಿದ್ದೆ.  ಆದರೆ, ನನಗೆ ಲಿಂಗಾಯಿತ ಅಧಿಕಾರಿಯನ್ನು ಕೊಟ್ಟಿದ್ದಾರೆ.  ಹಾಗಂತ ನಾನು ಲಿಂಗಾಯತರನ್ನೇ ಹಾಕಿ ಎಂದು ಹೇಳಿರಲಿಲ್ಲ.  ಅವರೇ ಲಿಂಗಾಯತರನ್ನು ಹಾಕಿದ್ದಾರೆ.  ನಾನೇನು ಮಾಡಲಿ ಎಂದು ಶಿವಾನಂದ ಎಸ್. ಪಾಟೀಲ ಪ್ರಶ್ನಿಸಿದರು.

ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಕಾಂಗ್ರೆಸ್ ಸೇರ್ಪಡೆ ವಿಚಾರ

ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಕೇಂದ್ರ ಮಾಜಿ ಸಚಿವ ಸಿ. ಎಂ. ಇಬ್ರಾಹಿಂ ಕಾಂಗ್ರೆಸ್ಸಿಗೆ ಮತ್ತೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಷಯದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸಿ. ಎಂ. ಇಬ್ರಾಹಿಂ ಅವರು ಕಾಂಗ್ರೆಸ್ಸಿಗೆ ಬಂದರೆ ಸ್ವಾಗತ ಮಾಡುತ್ತೇವೆ.  ಅವರು ಯಾವಾಗಲೂ ಬಾರತೀಯ ಜನತಾ ಪಕ್ಷದ ವಿರುದ್ಧವಾಗಿಯೇ ಇದ್ದರು.  ಪಕ್ಷವನ್ನು ಒಯ್ದು ವಿಲೀನ ಮಾಡುವ ವಿಚಾರ ಒಬ್ಬ ರಾಜ್ಯಾಧ್ಯಕ್ಷರಿಗೆ ಗೊತ್ತಿಲ್ಲ ಎಂದ್ರೆ ಅವರಿಗೆ ನೋವಾಗಲ್ವಾ? ಜಾತ್ಯತೀತ ಜನತಾ ದಳ ಬಹಳ ಹಿಂದೆಯೇ ಹರಿದು ಹೋಗಿದೆ ಎಂದು ಅವರು ಹೇಳಿದರು.

ಶಿವಮೊಗ್ಗದಲ್ಲಿ ಕಲ್ಲು ತೂರಾಟ ಘಟನೆ ವಿಚಾರ

ಶಿವಮೊಗ್ಗದಲ್ಲಿ ಈದ್- ಮಿಲಾದ್   ಮೆರವಣಿಗೆ ಸಂದರ್ಭದಲ್ಲಿ ಉಂಟಾದ ಗಲಭೆಯ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ರಾಜ್ಯ ಸರಕಾರದ ವಿರುದ್ಧ ಮಾಡುತ್ತಿರುವ ಆರೋಪಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.

ಪ್ರತಿಪಕ್ಷಗಳು ಮಾಡುತ್ತಿರುವ ಆರೋಪದಲ್ಲಿ ಸತ್ಯಾಂಶವಿಲ್ಲ.  ಕೋಮು ಸೌಹಾರ್ಧತೆಯಿಂದ ಬಾಳುವ ನೈತಿಕ ಹೊಣೆ ಸಮಾಜದ ಎಲ್ಲ ನಾಗರಿಕರ ಮೇಲಿದೆ.  ಸರಕಾರಗಳು ಬರುತ್ತವೆ, ಸರಕಾರಗಳು ಹೋಗುತ್ತವೆ.  ಆ ಸರಕಾರ ಬಂದಾಗ ಆಯ್ತು, ಈ ಸರಕಾರ ಬಂದಾಗ ಆಯ್ತು ಎನ್ನುವುದರಲ್ಲಿ ಅರ್ಥವಿಲ್ಲ.  ಶಿವಮೊಗ್ಗ ಸ್ವಲ್ಪ ಸೂಕ್ಷ್ಮ ಪ್ರದೇಶವಾಗಿದೆ ಎಂದು ಹೇಳಿದರು.

ಇದೇ ವೇಳೆ ಔರಂಗಜೇಬ್ ಪೋಸ್ಟರ್ ಹಾಕಿರುವ ಕುರಿತು ಕೇಳಲಾದ ಪ್ರಶ್ನೆಗೆ ಸಚಿವ ಶಿವಾನಂದ ಎಸ್. ಪಾಟೀಲ ಅವರು, ಅದನ್ನು ನಾನು ಖಂಡಿಸುತ್ತೇನೆ.  ಅದನ್ನು ಯಾರೇ ಮಾಡಿದ್ದರೂ ಖಂಡನೀಯ.  ಇಡೀ ಘಟನೆಯ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

Leave a Reply

ಹೊಸ ಪೋಸ್ಟ್‌